'ನಾನು ದನದ ಮಾಂಸ ತಿಂತೀನಿ, ಬೇಡ ಅನ್ನೋಕೆ ನೀನು ಯಾವನು? ನನ್ನ ಆಹಾರ, ನನ್ನ ಹಕ್ಕು'

ನಾನು ದನದ ಮಾಂಸ ತಿನ್ನುತ್ತೇನೆ. ಅದನ್ನು ಬೇಡ ಎನ್ನಲು ನೀನು ಯಾವನು ಎಂದು ಪ್ರಶ್ನಿಸುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾನೂನನ್ನು ಬಲವಾಗಿ ವಿರೋಧಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ನಾನು ದನದ ಮಾಂಸ ತಿನ್ನುತ್ತೇನೆ. ಅದನ್ನು ಬೇಡ ಎನ್ನಲು ನೀನು ಯಾವನು ಎಂದು ಪ್ರಶ್ನಿಸುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾನೂನನ್ನು ಬಲವಾಗಿ ವಿರೋಧಿಸಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್‍ನ 136ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ಹೊಸದಲ್ಲ. 1964ರಲ್ಲೆ ಕಾಂಗ್ರೆಸ್ ಜಾರಿಗೆ ತಂದಿತ್ತು. ಈಗ ಅದನ್ನು ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದರು.

‘ನಾನು ದನದ ಮಾಂಸ ತಿನ್ನುತ್ತೇನೆ. ನೀನು ಯಾವನಯ್ಯ ಕೇಳೋಕೆ. ನೀನೂ ತಿನ್ನು ಎಂದು ಬಲವಂತ ಮಾಡಲ್ಲ. ನನ್ನ ಆಹಾರ ನನ್ನ ಇಷ್ಟ ಎನ್ನಲು ಹೆಚ್ಚು ಧೈರ್ಯ ಬೇಕೇ’ ಎಂದು ಪ್ರಶ್ನಿಸಿದರು. ‘ಕಾಂಗ್ರೆಸ್‍ನಲ್ಲಿ ಎಷ್ಟೋ ಜನರಿಗೆ ಪಕ್ಷದ ಸಿದ್ಧಾಂತವೇ ಗೊತ್ತಿಲ್ಲ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರ ಇದೆ, ಅರ್ಥ ಮಾಡಿಕೊಳ್ಳಬೇಕು’ ಎಂದರು.

ಮುದಿ ಹಸು, ಎತ್ತು, ಕೋಣಗಳನ್ನು ಸಾಕಲಾಗದ ರೈತರು ಏನು ಮಾಡಬೇಕು. ಇವುಗಳನ್ನು ಸಾಕಲು ದಿನವೊಂದಕ್ಕೆ 100 ರೂಪಾಯಿ ಬೇಕು. ನಿಜ ನಾವು ಹಸುವನ್ನು ದೇವರೆಂದು ಪೂಜಿಸುತ್ತೇವೆ. ರೈತರು ಪೂಜೆ ಮಾಡುತ್ತಾರೆ ಎಂದರು. ನಾನು ಸಿದ್ಧಾಂತಕ್ಕೆ ಬದ್ಧವಾಗಿದ್ದೇನೆ. ನಾವು ನಂಬಿರುವ ಸಿದ್ಧಾಂತಗಳನ್ನು ಗಟ್ಟಿಯಾಗಿ ಹೇಳಬೇಕು. ಕಾಂಗ್ರೆಸ್‍ಗೆ ಹಿನ್ನೆಡೆಯಾದರೆ ದೇಶದ ಬಡವರಿಗೆ, ದಲಿತರಿಗೆ, ಹಿಂದುಳಿದ  ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ ಹಿನ್ನೆಡೆಯಾದಂತೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com