ಡಿ. 31ರಂದು ನಗರದ ಫ್ಲೈ ಓವರ್ಗಳ ಮೇಲೆ ವಾಹನ ಸಂಚಾರ ನಿಷೇಧ: ಕಮಲ್ ಪಂತ್
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ವಾಹನಗಳ ಸಂಚಾರ ಮತ್ತು ಪ್ರವೇಶ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಕೋವಿಡ್-19ಭೀತಿ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದ್ದು, ಡಿ. 31ರ ರಾತ್ರಿ 8 ರಿಂದ ಜ. 1ರ ಮುಂಜಾನೆ 2ರವರೆಗೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ಪಾರ್ಕ್ ರಸ್ತೆ, ರೆಸಿಡೆನ್ಸಿ ರಸ್ತೆಗಳಲ್ಲಿ ವಾಹನಗಳ ಸಂಚಾರ ಮತ್ತು ಪ್ರವೇಶ ನಿಷೇಧ ಮಾಡಲಾಗಿದೆ.
ಡಿ. 31ರ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಮೈಕೋ ಲೇಔಟ್, ಏರ್ಪೋರ್ಟ್, ವೈಟ್ ಫೀಲ್ಡ್, ಹೆಚ್ಎಸ್ಆರ್ ಲೇಔಟ್, ಹಲಸೂರು, ಕೆ.ಆರ್.ಪುರ, ಪುಲಿಕೇಶಿನಗರ, ಬಾಣಸವಾಡಿ, ಆಡುಗೋಡಿ, ಮೈಸೂರು ರಸ್ತೆ, ಬಸವನಗುಡಿ, ಜಯನಗರ, ಮಲ್ಲೇಶ್ವರಂ, ಬನಶಂಕರಿ, ಕೆಂಗೇರಿ, ಯಶವಂತಪುರ, ಹೆಬ್ಬಾಳ, ಹಾಗೂ ಪೀಣ್ಯ ಪ್ರದೇಶಗಳಲ್ಲಿರುವ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಹೊಸ ವರ್ಷ ಸಂಭ್ರಮಾಚರಣೆ ನಿಷೇಧವಿದ್ದರೂ ಗುಂಪು ಸೇರುವುದು ಹಾಗೂ ಫ್ಲೈ ಓವರ್ ಮೇಲೆ ವೀಲಿಂಗ್ ಮತ್ತು ಡ್ರ್ಯಾಗ್ ರೇಸ್ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಡಿ. 31ರ ರಾತ್ರಿ 10 ರಿಂದ ಜ.1 ಬೆಳಗ್ಗೆ 6 ಗಂಟೆ ವರೆಗೆ ನಗರದ ಒಟ್ಟು 44 ಮೇಲ್ಸೇತುವೆಗಳನ್ನು ಬಂದ್ ಮಾಡಲಾಗುತ್ತದೆ.
ಪೊಲೀಸ್ ವಾಹನ ಹಾಗೂ ಕರ್ತವ್ಯ ನಿರತ ತುರ್ತು ವಾಹನಗಳನ್ನು ಹೊರತುಪಡಿಸಿ ಎಂಜಿ ರಸ್ತೆ, ಚರ್ಚ್ ರಸ್ತೆ ಮ್ಯುಜಿಯಮ್ ರಸ್ತೆ, ರೆಸ್ಟ್ ಹೌಸ್ ಪಾರ್ಕ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆ ಸೇರಿ ಟ್ರಿನಿಟಿ ರಸ್ತೆ, ಇನ್ಪ್ರೆಟ್ರಿ ರಸ್ತೆ , ಬ್ರಿಗೆಡ್ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಿ ಆದೇಶಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ