ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್: ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಚೊಚ್ಚಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ ಜೆಡಿಎಸ್ ನ ಯುವ ಮುಖಂಡ ಪ್ರಜ್ವಲ್ ರೇವಣ್ಣಗೆ ಶುಭ ಸುದ್ದಿ ಸಿಕ್ಕಿದೆ.
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಅಫಿಡವಿಟ್ ನಲ್ಲಿ ಘೋಷಿಸಿದ ಆಸ್ತಿ ವಿವರಗಳ ಕುರಿತು ಅಕ್ಷೇಪ ವ್ಯಕ್ತಪಡಿಸಿ, ಪ್ರಜ್ವಲ್ ರೇವಣ್ಣ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಈ ಕುರಿತಂತೆ ವಕೀಲ ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಪ್ರಜ್ವಲ್ ಪರ ವಕೀಲ ಕೇಶವ ರೆಡ್ಡಿ, ‘ಅರ್ಜಿದಾರರು ಸಲ್ಲಿಸಿರುವ ಅರ್ಜಿ ಪೂರ್ಣ ರೂಪದಲ್ಲಿ ಇಲ್ಲ. ಹೈಕೋರ್ಟ್ ಕಚೇರಿ ನೀಡಿದ್ದ ಕಾಲಮಿತಿಯಲ್ಲಿ ಅರ್ಜಿಯಲ್ಲಿನ ಲೋಪದೋಷ ಸರಿಪಡಿಸಿಲ್ಲ. ಆದ್ದರಿಂದ ಕ್ರಮಬದ್ಧವಲ್ಲದ ಈ ಅರ್ಜಿ ವಜಾಗೊಳಿಸಬೇಕು’ ಎಂದು ಕೋರಿದರು. ಇದನ್ನು ಪುರಸ್ಕರಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿತು.
ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರಜ್ವಲ್ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಸೋತ ಅಭ್ಯರ್ಥಿ ಬಿಜೆಪಿಯ ಅರಕಲಗೂಡು ಮಂಜು ಅವರು ಸಲ್ಲಿಸಿದ್ದ ಅರ್ಜಿ ಹೈಕೋರ್ಟಿನಲ್ಲಿ ತಿರಸ್ಕಾರಗೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ