
ಬೆಂಗಳೂರು: ನಿರಂತರವಾಗಿ ಏರುತ್ತಿರುವ ಡೀಸೆಲ್ ದರ, ಹೆಚ್ಚುತ್ತಿರುವ ವೆಚ್ಚದ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆ ಮಾಡಲು ಉದ್ದೇಶಿಸಲಾಗಿದೆ.
ಹೆಚ್ಚುತ್ತಿರುವ ವೆಚ್ಚ, ಡೀಸೆಲ್ ದರ ಏರಿಕೆ, ಖಾಸಗಿ ಬಸ್ ಗಳ ಪೈಪೋಟಿ, ಮೆಟ್ರೋ ಮತ್ತಿತರ ಸಮೂಹ ಸಾರಿಗೆ ವ್ಯವಸ್ಥೆಯತ್ತ ಜನ ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳ ಆದಾಯದಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ಪ್ರಯಾಣ ದರ ಏರಿಸಲು ರಾಜ್ಯ ಸಾರಿಗೆ ನಿಗಮಗಳ ಪರಿಶೀಲನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬಜೆಟ್ ಅಧಿವೇಶನಕ್ಕೂ ಮೊದಲೇ ಕೆ.ಎಸ್.ಆರ್.ಆರ್.ಟಿ.ಸಿಯ ನಿಗಮಗಳು, ಬಿಎಂಟಿಸಿ ಸಾರಿಗೆಯಲ್ಲಿ ಪರಿಷ್ಕೃತ ದರ ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಸಾರಿಗೆ ಸಂಸ್ಥೆಗಳು ನಷ್ಠದಲ್ಲಿ ಮುನ್ನಡೆಯುತ್ತಿದ್ದು, ಈ ಹಿಂದೆ ಶೇಕಡಾ 15 ರಷ್ಟು ಪ್ರಯಾಣ ದರ ಹೆಚ್ಚಿಸಲು ಮೈತ್ರಿ ಸರ್ಕಾರ ಮುಂದಾಗಿತ್ತು. ಆಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದರ ಏರಿಕೆಗೆ ಅನುಮತಿ ನೀಡಿರಲಿಲ್ಲ. ಪ್ರಯಾಣಿಕರ ಮೇಲೆ ಅನಗತ್ಯ ಹೊರೆ ಹೇರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.
ಈಗ ಮತ್ತೆ ಪ್ರಯಾಣ ದರ ಹೆಚ್ಚಿಸುವ ಅನಿವಾರ್ಯತೆ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಕಳೆದ ೫ ವರ್ಷಗಳಿಂದ ಬಸ್ ದರ ಪರಿಷ್ಕರಣೆ ಮಾಡಿಲ್ಲ. ಹೊರೆ ಪ್ರಮಾಣ ಇಳಿಸಲು ಮತ್ತು ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ದರ ಏರಿಕೆ ಮಾಡುವುದು ಅನಿವಾರ್ಯ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಸರ್ಕಾರಕ್ಕೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಕೆಯಾಗಲಿದ್ದು, ಬಳಿಕ ದರ ಏರಿಕೆಯಾಗಲಿದೆ.
Advertisement