ಪ್ರತ್ಯೇಕ ಸರ್ಕಾರಿ ಚಾನೆಲ್ ಆರಂಭಿಸುವ ಪ್ರಸ್ತಾವನೆ ಇಲ್ಲ: ಸ್ಪೀಕರ್ ಕಾಗೇರಿ
ಕಲಬುರಗಿ: ವಿಧಾನಮಂಡಲ ಕಲಾಪ ಪ್ರಸಾರಕ್ಕೆ ಸರ್ಕಾರ ಪ್ರತ್ಯೇಕ ಚಾನೆಲ್ ಆರಂಭಿಸುವ ಬಗ್ಗೆ ಸದ್ಯಕ್ಕೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶನಿವಾರ ಹೇಳಿದ್ದಾರೆ.
ಎಕ್ಸ್ ಪ್ರೆಸ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕಾಗೇರಿ, ವರ್ಷದಲ್ಲಿ ಕನಿಷ್ಠ 150 ದಿನ ಸಹ ಅಧಿವೇಶನ ನಡೆಯುವುದಿಲ್ಲ. ಹೀಗಾಗಿ ಚಾನೆಲ್ ಆರಂಭಿಸಿದರೆ ಉಳಿದ ದಿನಗಳಲ್ಲಿ ಏನು ಮಾಡುವುದು ಎಂದು ಪ್ರಶ್ನಿಸಿದ್ದಾರೆ.
ಈ ಬಾರಿಯೂ ಅಧಿವೇಶನಕ್ಕೆ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಗೇರಿ ಅವರು, ನಾವು ಮಾಧ್ಯಮವನ್ನು ಸಂಪೂರ್ಣ ನಿಷೇಧಿಸಿಲ್ಲ. ಪತ್ರಿಕಾ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ ಪತ್ರಕರ್ತರಿಗೆ ವರದಿ ಮಾಡಲು ಅವಕಾಶ ನೀಡಿದ್ದೇವೆ. ಕೇವಲ ಟಿವಿ ಕ್ಯಾಮೆರಾಗಳಿಗೆ ಮಾತ್ರ ನಿರ್ಬಂಧ ವಿಧಿಸಲಾಗಿದೆ ಎಂದರು.
ಕಲಾಪ ಚಿತ್ರೀಕರಿಸಲು ದೂರದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಅವರು ಎಲ್ಲಾ ಖಾಸಗಿ ಸುದ್ದಿ ವಾಹಿನಿಗಳಿಗೆ ಉಚಿತವಾಗಿಯೇ ಕಲಾಪದ ದೃಶ್ಯಗಳನ್ನು ಒದಗಿಸುತ್ತಾರೆ. ನಾನು ಪಾರದರ್ಶಕತೆಯಲ್ಲಿ ನಂಬಿಕೆ ಇರುವ ವ್ಯಕ್ತಿ ಎಂದು ಕಾಗೇರಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ