ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವಾಗ ಎಚ್ಚರ: ಕಾಂಗ್ರೆಸ್ ಶಾಸಕರಿಗೆ ಸಿದ್ದರಾಮಯ್ಯ ಕಿವಿಮಾತು
ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವಾಗ ಎಚ್ಚರ: ಕಾಂಗ್ರೆಸ್ ಶಾಸಕರಿಗೆ ಸಿದ್ದರಾಮಯ್ಯ ಕಿವಿಮಾತು

ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವಾಗ ಎಚ್ಚರ: ಕಾಂಗ್ರೆಸ್ ಶಾಸಕರಿಗೆ ಸಿದ್ದರಾಮಯ್ಯ ಕಿವಿಮಾತು

ವಿಧಾನಮಂಡಲ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜೂಭಾಯಿ ವಾಲಾ ಮಾಡಿರುವ ಭಾಷಣದಲ್ಲಿ ತಮ್ಮ ನೇತೃತ್ವದ ಸರ್ಕಾರದ ಸಾಧನೆಗಳೇ ತುಂಬಿದ್ದು, ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ನಡೆಸುವಾಗ ಎಚ್ಚರಿಕೆಯಿಂದ ಟೀಕೆ ಮಾಡಿ ಎಂದು ಸಿದ್ದರಾಮಯ್ಯ ತಮ್ಮ ಶಾಸಕರಿಗೆ ಕಿವಿ ಮಾತು ಹೇಳಿದ್ದಾರೆ. 
Published on

ಬೆಂಗಳೂರು: ವಿಧಾನಮಂಡಲ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜೂಭಾಯಿ ವಾಲಾ ಮಾಡಿರುವ ಭಾಷಣದಲ್ಲಿ ತಮ್ಮ ನೇತೃತ್ವದ ಸರ್ಕಾರದ ಸಾಧನೆಗಳೇ ತುಂಬಿದ್ದು, ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ನಡೆಸುವಾಗ ಎಚ್ಚರಿಕೆಯಿಂದ ಟೀಕೆ ಮಾಡಿ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ತಮ್ಮ ಶಾಸಕರಿಗೆ ಕಿವಿ ಮಾತು ಹೇಳಿದ್ದಾರೆ. 

ಅಧಿವೇಶನಕ್ಕೂ ಮುನ್ನ ನಡೆದ ಶಾಸಕಾಂಗ ಸಭೆಯಲ್ಲಿ ತಮ್ಮ ಶಾಸಕರಿಗೆ ಅಧಿವೇಶನದಲ್ಲಿ ಎಚ್ಚರಿಕೆಯಿಂದ ಇರುವಂತೆ ಸಲಹೆ ಮಾಡಿದ್ದಾರೆ. ರಾಜ್ಯಪಾಲರ ಭಾಷಣದ ಮೇಲೆ ವಂದನೆ ಸಲ್ಲಿಸುವ ನಿರ್ಣಯದ ಸಂದರ್ಭದಲ್ಲಿ ಮನಸ್ಸಿಗೆ ಬಂದಂತೆ ಟೀಕೆ ಮಾಡಬೇಡಿ. ಏಕೆಂದರೆ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಕಾಂಗ್ರೆಸ್ಸಿಗರೇ ಟೀಕೆ ಮಾಡಿದರು ಎನ್ನುವ ಅಪವಾದ ಎದುರಾಗದಂತೆ ನೋಡಿಕೊಳ್ಳಿ ಎಂದಿದ್ದಾರೆ. 

ಇಷ್ಟಕ್ಕೂರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಯಾವುದೇ ಹೊಸ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ಸರ್ಕಾರ ಹೊಸತನ, ಹೊಸ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ನಮ್ಮ ಸರ್ಕಾರದ ಅವಧಿಯ ಯೋಜನೆಗಳನ್ನೇ ಬಹುತೇಕ ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ರಾಜ್ಯಪಾಲರ ಭಾಷಣದ ಚರ್ಚೆ ವೇಳೆ ಎಚ್ಚರಿಕೆಯಿಂದ ಮಾತನಾಡೋಣ. ಭಾಷಣದಲ್ಲಿ ಹೊಸ ಅಂಶಗಳಿಲ್ಲ ಎನ್ನುವುದನ್ನೇ ಪ್ರಮುಖವಾಗಿ ಪ್ರಸ್ತಾಪಿಸೋಣ ಎಂದಿದ್ದಾರೆ. 

ರಾಜ್ಯ ಸರ್ಕಾರ ಆರ್ಥಿಕವಾಗಿ ಸಾಕಷ್ಟು ತೊಂದರೆಗೆ ಸಿಲುಕಿದ್ದು, ಖಜಾನೆ ಬರಿದಾಗಿದೆ. ಬಜೆಟ್ ನಲ್ಲಿ ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಸುಭದ್ರ ಮತ್ತು ಸುಭಿಕ್ಷವಾಗಿತ್ತು. ಜನಪರ ಮತ್ತು ಜನಪ್ರಿಯ ಕಾರ್ಯಕ್ರಗಳನ್ನು ನಮ್ಮ ಸರ್ಕಾರ ಘೋಷಿಸಿ ಅನುಷ್ಠಾನಗೊಳಿಸಿತ್ತು. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸೋಣ ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.    
  
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸದನದಲ್ಲಿ ಜನಪರ ವಿಚಾರಗಳನ್ನು ಪ್ರಸ್ಥಾಪಿಸಲು ತೀರ್ಮಾನಿಸಲಾಗಿದೆ. ಪೊಲೀಸ್ ಇಲಾಖೆಯನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿರುವ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಚರ್ಚೆ ನಡೆಸುತ್ತೇವೆ ಎಂದರು. 

ನಮ್ಮ ಶಾಸಕ ಯು.ಟಿ. ಖಾದರ್ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ್ದು, ಬೀದರ್ ಶಾಲೆಯಲ್ಲಿ ಮಕ್ಕಳು ಆಡಿದ ನಾಟಕದ ಮೇಲೂ ದೇಶ ದ್ರೋಹದ ಪ್ರಕರಣ ದಾಖಲಿಸಿ ಶಿಕ್ಷಕಿ ಮತ್ತು ವಿದ್ಯಾರ್ಥಿ ತಾಯಿಯನ್ನು ಜೈಲಿಗೆ ಕಳುಹಿಸಿದ್ದರು. ಇದು ಸರಿಯಲ್ಲ. ಈ ಎಲ್ಲಾ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು. 

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ರಾಜ್ಯಪಾಲರು ಭಾಷಣ ಮಾಡುವ ವೇಳೆ ವಿಧಾನಸಭೆ ಪ್ರವೇಶಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್, ಈ ಹಿಂದೆ ಶಂಕರ್ ಬಿದರಿ ಕೂಡ ಸದನಕ್ಕೆ ಬಂದಿದ್ದರು. ಸಮವಸ್ತ್ರ ಧರಿಸಿ ಸದನಕ್ಕೆ ಬರುವುದು ತಪ್ಪು. ಪೊಲೀಸ್ ಆಯುಕ್ತರಿಗೇ ಕಾನೂನು ಗೊತ್ತಿಲ್ಲ ಅಂದರೆ ಪಾಲನೆ ಮಾಡುವುದು ಹೇಗೆ. ಪೊಲೀಸ್ ಆಯುಕ್ತರು ಗ್ಯಾಲರಿಯಲ್ಲಿ ಕೂರಬಹುದು. ಈ ಬಗ್ಗೆ ಸ್ಪೀಕರ್ ಅವರು ಸೂಕ್ತ ರೀತಿಯಲ್ಲಿ ಗಮನಹರಿಸಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com