ಮಲೆಮಹಾದೇಶ್ವರ ಬೆಟ್ಟದ ಸೋಲಾರ್ ಸಮಸ್ಯೆ: ಅಧಿಕಾರಿಗಳ ತಂಡ‌ ರವಾನೆಗೆ ಸಚಿವರ ಸೂಚನೆ

ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ  ಮಲೆಮಹಾದೇಶ್ವರ ಬೆಟ್ಟ ಹಾಗೂ ಸುತ್ತಮುತ್ತ ಸೋಲಾರ್ ವಿದ್ಯುತ್ ದೀಪಗಳ ದುರಸ್ತಿಗೆ  ಶಿವರಾತ್ರಿ ಒಳಗೆ ಅಧಿಕಾರಿಗಳ ತಂಡ ರವಾನಿಸುವುದಾಗಿ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ  ಪೂಜಾರಿ ಮೇಲ್ಮನೆ ಸದನಕ್ಕೆ ಭರವಸೆ ನೀಡಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ
ಕೋಟಾ ಶ್ರೀನಿವಾಸ ಪೂಜಾರಿ

ಬೆಂಗಳೂರು: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ  ಮಲೆಮಹಾದೇಶ್ವರ ಬೆಟ್ಟ ಹಾಗೂ ಸುತ್ತಮುತ್ತ ಸೋಲಾರ್ ವಿದ್ಯುತ್ ದೀಪಗಳ ದುರಸ್ತಿಗೆ  ಶಿವರಾತ್ರಿ ಒಳಗೆ ಅಧಿಕಾರಿಗಳ ತಂಡ ರವಾನಿಸುವುದಾಗಿ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ  ಪೂಜಾರಿ ಮೇಲ್ಮನೆ ಸದನಕ್ಕೆ ಭರವಸೆ ನೀಡಿದ್ದಾರೆ.

ಸದನ ಸಮಾವೇಶಗೊಳ್ಳುತ್ತಿದ್ದಂತೆ  ಕಾಂಗ್ರೆಸ್‌ನ ಐವಾನ್ ಡಿಸೋಜಾ, ಸಭಾಪತಿ ಪೀಠದ ಮುಂಭಾಗಕ್ಕೆ ಬಂದು ಮತ್ತೆ ಮಂಗಳೂರು  ಗೋಲಿಬಾರ್ ಪ್ರಕರಣ ಪ್ರಸ್ತಾಪಿಸಿ ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಸರ್ಕಾರ ಪರಿಹಾರ  ಘೋಷಿಸಬೇಕೆಂದು ಆಗ್ರಹಿಸಲು ಮುಂದಾದಾಗ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹಾಗೂ ಜೆಡಿಎಸ್‌ನ ಬಸವರಾಜಹೊರಟ್ಟಿ ಸಹ ಪರಿಹಾರಕ್ಕಾಗಿ ಆಗ್ರಹಿಸಿದರು. ಸಭಾನಾಯಕ ಸರ್ಕಾರದಿಂದ ಉತ್ತರ  ಕೊಡಿಸುವುದಾಗಿ ಹೇಳಿದ ಬಳಿಕ ವಿಪಕ್ಷ ನಾಯಕರು ತಮ್ಮ ಸ್ಥಾನಕ್ಕೆ ವಾಪಸು ಹೋಗಿ ಕೂತರು.

ಶೂನ್ಯವೇಳೆಯಲ್ಲಿ ಜೆಡಿಎಸ್‌ನ ಸಂದೇಶ್‌ ನಾಗರಾಜ್ ಮಾತನಾಡಿ, ಮಲೆಮಹಾದೇಶ್ವರ ಬೆಟ್ಟದ ಭಕ್ತಾದಿಗಳ  ನಿವಾಸ,‌ ದಾಸೋಹ  ಹಾಗೂ ಕೆಲವು ರಸ್ತೆಗಳಲ್ಲಿ ಅಳವಡಿಸಿದ್ದ ಸೋಲಾರ ವಿದ್ಯುತ್ ದೀಪಗಳು  ಸರಿಯಾದ ನಿರ್ವಹಣೆ ಇಲ್ಲದೇ‌ ಹಾಳಾಗಿದೆ. ಶಿವರಾತ್ರಿ ಹಬ್ಬದ ವೇಳೆ‌ ಭಕ್ತಾದಿಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಹೀಗಾಗಿ ಆದಷ್ಟು ಬೇಗ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.

ಮುಜುರಾಯಿ ಸಚಿವರೂ ಆಗಿರುವ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ,  ಅಧಿಕಾರಿಗಳನ್ನು ಆದಷ್ಟು ಬೇಗ ಅಲ್ಲಿಗೆ ಕಳುಹಿಸಿ ಅಗತ್ಯಬಿದ್ದಲ್ಲಿ ತಾವು ಸಹ ಭೇಟಿ ನೀಡುವುದಾಗಿ ಹೇಳಿದರು.

ಆಗ ಸಭಾಪತಿಗಳು ಸೋಲಾರ ದೀಪದ ಜೀವಿತಾವಧಿ ಎಷ್ಟು ಎಂದು ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಸಭಾನಾಯಕರು, ಏಜೆನ್ಸಿಗಳಿಗೆ  ಐದು ವರ್ಷಗಳ ಕಾಲ ‌ನಿರ್ವಹಣೆ ಮಾಡುವ ಷರತ್ತುಗಳ ಮೇಲೆ ಟೆಂಡರ್ ನೀಡಲಾಗುತ್ತದೆ. ಸೋಲಾರ್  ದೀಪ ಟೆಂಡರ್ ಕೊಡುವಾಗ ಐದು ವರ್ಷ ನಿರ್ವಹಣೆ ಮಾಡಬೇಕು, ಆದರೆ ಕೆಲವಡೆ ಯೋಜನೆ  ವ್ಯರ್ಥವಾಗಿದೆ, ರಾಜ್ಯದಲ್ಲಿ ಮೂರ್ನಾಲ್ಕು ಸಂಸ್ಥೆ ಮಾತ್ರ ಸರಿಯಾದ ನಿರ್ವಹಣೆ  ಮಾಡುತ್ತಿವೆ ಉಳಿದ ಕಂಪನಿ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಈ ಕುರಿತು ಕ್ರಮ  ಕೈಗೊಳ್ಳಲಾಗುತ್ತದೆ ಎಂದರು.

ಜೆಡಿಎಸ್‌ನ ಶ್ರೀಕಂಠೇಗೌಡ ಮಾತನಾಡಿ‌, ಕಬ್ಬು ಬೆಳೆಗಾರರ  ಸಮಸ್ಯೆ ಪ್ರಸ್ತಾಪಿಸಿದರು. ರೈತರು ಪಕ್ಕದ ರಾಜ್ಯಗಳಿಗೆ ಅನಿವಾರ್ಯವಾಗಿ ಕಬ್ಬು  ಸಾಗಾಣಿಕೆ ಮಾಡುತ್ತಿದ್ದಾರೆ. ಕಟಾವು ಹಾಗೂ ರಾಜ್ಯದಲ್ಲಿಯೇ ಕಬ್ಬು ಅರಿಯುವ  ಕಾರ್ಖಾನೆಗಳನ್ನು ಪುನರ್ ಸ್ಥಾಪಿಸಬೇಕೆಂದು ಒತ್ತಾಯಿಸಿದಾಗ, ಸಭಾನಾಯಕ ಕೋಟಾ  ಶ್ರೀನಿವಾಸಪೂಜಾರಿ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು ಎಂದರು.

ಕಾಂಗ್ರೆಸ್  ಸದಸ್ಯೆ ಜಯಮಾಲಾ ಮಾತನಾಡಿ, ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡದೇ ಇರುವುದು  ಆತಂಕಕ್ಕೆ ಎಡೆ ಮಾಡಿದೆ, ಎರಡೂವರೆ ಲಕ್ಷ ನಾಯಿಗಳಿಗೆ ಆರ್.ಬಿ.ಎ ಲಸಿಕೆ ಬಾಕಿ ಇದೆ ಎಂದು  ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ರೇಬಿಸ್ ರೋಗದಿಂದ ಐದು ಸಾವು ಸಂಭವಿಸಿದೆ. ಕೂಡಲೇ ಈ  ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಸದಸ್ಯ ಸಂಕನೂರು  ಮಾತ‌ನಾಡಿ, ಕಾರವಾರ, ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಅಕ್ಷರ ದಾಸೋಹದ ಯೋಜನೆಯಡಿ  ಏಪ್ರನ್ ಖರೀದಿಯಲ್ಲಿ ಅವ್ಯವಹಾರ ಆರೋಪ ಕೇಳಿಬಂದಿದೆ. ತನಿಖೆ ನಡೆಸಿ ಮುಖ್ಯೋಪಾದ್ಯಾಯರು  ಹಾಗು ಶಿಕ್ಷಕರಿಂದ ಹೆಚ್ಚುವರಿ ಹಣ ವಾಪಸ್ ಪಡೆಯಲು ನಿರ್ಧರಿಸಲಾಗಿತ್ತು, ಕ್ಷೇತ್ರ  ಶಿಕ್ಷಣಾಧಿಕಾರಿಗಳು ಹೆಚ್ಚುವರಿಯಾಗಿ ನೀಡದ ಹಣ ಮರುಪಾವತಿ ಮಾಡದಿದ್ದಲ್ಲಿ ಫೆಬ್ರವರಿ  ವೇತನದಲ್ಲಿ ಕಡಿತ ಮಾಡುವ ನೋಟಸ್ ನೀಡಿದ್ದಾರೆ, ಆದರೆ ಮುಖ್ಯೋಪಾಧ್ಯಾಯರನ್ನು ಅವ್ಯವಹಾರದ  ಆರೋಪದಲ್ಲಿ‌ ಸಿಲುಕಿಸಿರುವುದು ಸರಿಯಲ್ಲ, ಕೂಡಲೇ ಮುಖ್ಯೋಪಾಧ್ಯಾಯರ ವೇತನ ಕಡಿತ ಆದೇಶ  ತಡೆಗೆ ಆದೇಶಿಸಬೇಕು ಮರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಮಾತ‌ನಾಡಿ, ಧಾರವಾಡ  ಜಿಲ್ಲಾಡಳಿತ ನೆರೆ ಸಂತ್ರಸ್ತರಿಗೆ ದಾಸ್ತಾನು ತಲುಪಿಸುವಲ್ಲಿ ವಿಫಲವಾಗಿದೆ ದಾಸ್ತಾನು  ಕೊಳೆಯುತ್ತಿದೆ. ಕೂಡಲೇ ಪರಿಹಾರ ಸಾಮಗ್ರಿ ತಲುಪಿಸಿ ಅಗತ್ಯ ಪರಿಹಾರ ಕಲ್ಪಿಸಬೇಕು ಎಂದು  ಒತ್ತಾಯಿಸಿದರು.

ಶೂನ್ಯ ವೇಳೆಯಲ್ಲಿ ಸದಸ್ಯರು ಮಾಡಿದ ಪ್ರಸ್ತಾಪಗಳಿಗೆ ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com