ಬೆಂಗಳೂರು: ಹನುಮಂತನ ಜನ್ಮಭೂಮಿ ಕಿಷ್ಕಿಂಧೆಯಲ್ಲಿ 215 ಅಡಿ ಎತ್ತರದ ಬೃಹತ್ ಆಂಜನೇಯ ವಿಗ್ರಹ ಸ್ಥಾಪಿಸಲು ಹನುಮಾನ್ ಜನ್ಮಭೂಮಿ ಟ್ರಸ್ಟ್ ಯೋಜಿಸುತ್ತಿದೆ.
ರಾಮಭಕ್ತ ಹನುಮಂತ ಹಂಪಿಯ ಕಿಷ್ಕಿಂಧೆಯಲ್ಲಿ ಜನಿಸಿದ ಎಂಬ ಪ್ರತೀತಿಯಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಮುಂದಾಗಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಹಾದಿಯಲ್ಲೇ ನಡೆಯುತ್ತಿರುವ ಹನುಮಾನ್ ಟ್ರಸ್ಟ್ ಆಂಜನೆೇಯ ಪ್ರತಿಮೆ ನಿರ್ಮಾಣಕ್ಕೆ ಚಿಂತನೆ ನಡೆಸುತ್ತಿದೆ.
ಫೆಬ್ರವರಿ 5 2020 ರಂದು ಶ್ರೀರಾಮ ಜನ್ಮಭೂಮಿ ರಚಿಸಲಾಯಿತು. ಇದೇ ವೇಳೆ ಕರ್ನಾಟಕ ಹನುಮಾನ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕೂಡ ನಿರ್ಮಾಣವಾಯಿತು. ಹಂಪಿಯಲ್ಲಿರುವ ಕಿಷ್ಕಿಂದ ಪಂಪಕ್ಷೇತ್ರ ಅಭಿವೃದ್ಧಿ ಮಾಡಲು ನಿರ್ಧರಿಸಿದೆ. ಗೋವಿಂದನಾಥ ಸರಸ್ವತಿ ಸ್ವಾಮಿ ನೇತೃತ್ವದಲ್ಲಿ ಟ್ರಸ್ಟ್ ನಿರ್ಮಾಣವಾಗಿದ್ದು, ಶಿವರಾತ್ರಿಯಂದು ಹಲವು ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗಿದೆ.
ಹಂಪಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ, ಹೀಗಾಗಿ ಅದನ್ನು ಯಾತ್ರಾಸ್ಥಳವಾಗಿಸಲು ನಿರ್ಧರಿಸಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ 225 ಅಡಿ ಬೃಹತ್ ರಾಮನ ವಿಗ್ರಹ ನಿರ್ಮಾಣ ಮಾಡಲು ನಿರ್ಧರಿಸುವಂತೆ ಹಂಪಿಯಲ್ಲಿ ಅದಕ್ಕಿಂತ 10 ಅಡಿ ಕಡಿಮೆ ಎತ್ತರದ 215 ಅಡಿಯ ತಾಮ್ರದ ಹನುಮಾನ್ ವಿಗ್ರಹ ಸ್ಥಾಪಿಸಲು ಯೋಜಿಸಲಾಗಿದೆ.
45 ಲಕ್ಷ ರು ವೆಚ್ಚದ ಹನುಮಾನ್ ರಥ ವಿನ್ಯಾಸಗೊಳಿಸಿದ್ದು ಈ ವರ್ಷದಿಂದ ಆರಂಭವಾಗಲಿದ್ದು, ಇಡೀ ದೇಶಾದ್ಯಂತ ಸಂಚರಿಸಲಿದೆ. ಜೊತೆಗೆ ವಿಗ್ರಹ ಸ್ಥಾಪನೆಗಾಗಿ ಹಣ ಸಂಗ್ರಹಿಸಲಾಗುತ್ತದೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ, ಇಡೀ ದೇಶವನ್ನು ಸುತ್ತಲು ಕನಿಷ್ಠ ಮೂರು ವರ್ಷಗಳು ಬೇಕಾಗಿದ್ದು,ಇದೇ ಸಮಯದಲ್ಲಿ ಕಿಷ್ಕಿಂಧೆಯಲ್ಲಿ ನಿರ್ಮಾಣ ಕಾರ್ಯದ ಸಿದ್ಧತೆಗಳು ನಡೆಯಲಿವೆ.
ಕಿಷ್ಕಿಂದೆಯಲ್ಲಿ ದೇವಾಲಯ ಮತ್ತು ಪ್ರತಿಮೆ ನಿರ್ಮಾಣಕ್ಕಾಗಿ ಟ್ರಸ್ಟ್ 10 ಎಕರೆ ಜಮೀನು ಖರೀದಿಸಲು ಚಿಂತಿಸುತ್ತಿದೆ. ಈ ವರ್ಷದ ಹನುಮ ಜಯಂತಿಗಾಗಿ 101 ಸನ್ಯಾಸಿಗಳನ್ನು ಅಹ್ವಾನಿಸಲಾಗಿದೆ. ಮುಂಬರುವ ಬಜೆಟ್ ನಲ್ಲಿ ಸಿಎಂ ಯಡಿಯೂರಪ್ಪ ಯೋಜನೆ ಅನುಷ್ಠಾನಕ್ಕಾಗಿ ಹಣ ಮೀಸಲಿಡಲಿದ್ದಾರೆ ಎಂದು ಹೇಳಲಾಗಿದೆ.
Advertisement