ಅಮೂಲ್ಯಾಗೆ ನಕ್ಸಲ್ ನಂಟು: ಮುಖ್ಯಮಂತ್ರಿ ಯಡಿಯೂರಪ್ಪ

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಅಮೂಲ್ಯಾ ಲಿಯೋನಾಗೆ ನಕ್ಸಲ್ ನಂಟಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ
Updated on

ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಅಮೂಲ್ಯಾ ಲಿಯೋನಾಗೆ ನಕ್ಸಲ್ ನಂಟಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಅಮೂಲ್ಯ ಲಿಯೋನಾಗೆ ನಕ್ಸಲ್ ನಂಟಿದೆ ಎಂಬ ವಿಚಾರ ತನಿಖೆಯಿಂದ ಸಾಬೀತಾಗಿದೆ. ಹೀಗಾಗಿ ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಇಂತಹ ಯುವ ಜನಾಂಗಕವನ್ನು ಪ್ರಚೋದಿಸುತ್ತಿರುವವರಿಗೂ ಶಿಕ್ಷೆಯಾಗಲಿದೆ ಎಂದರು.
 
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಡನೆ ಅವರು ಮಾತನಾಡಿ, ದೇಶದ ವಿರುದ್ಧ ಯುವಜನತೆಯನ್ನು ಎತ್ತಿಕಟ್ಟುವವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಇಂತಹ ವರ್ತನೆಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದರು,. ಹಾಗೂ ರಾಜ್ಯದಲ್ಲಿ ಶಾಂತಿ, ಸೌಹಾರ್ದಕ್ಕೆ ಭಂಗ ತರಲು ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಶಂಕೆಯನ್ನು ವ್ಯಕ್ತಪಡಿಸಿದರು.
 
ಮುಖ್ಯಮಂತ್ರಿಯವರೊಡನೆ ಇದ್ದ ಸಚಿವ ಬಿ ಸಿ ಪಾಟೀಲ್, “ಇಂತಹ ಘಟನೆಗಳು ಮರುಕಳಿಸಬಾರದು. ಯುವ ಜನಾಂಗವನ್ನು ದೇಶದ್ರೋಹಕ್ಕೆ ಪ್ರೇರೇಪಿಸುತ್ತಿರುವ ದುಷ್ಟ ಶಕ್ತಿಗಳನ್ನು ಕಾಲಹರಣ ಮಾಡದೇ ಶಿಕ್ಷಿಸಬೇಕಿದೆ” ಎಂದು ಅಭಿಪ್ರಾಯಪಟ್ಟರು.
 
ಏತನ್ಮಧ್ಯೆ ಅಮೂಲ್ಯ ಲಿಯೋನಾ ಅವರನ್ನು 5ನೇ ಎಎಸ್ ಎಮ್ ಎಮ್ ನ್ಯಾಯಾಧೀಶರಾದ ಸಿರನ್ ಜೆ ಅನ್ಸಾರಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ.

ಕೋರಮಂಗಲ ನ್ಯಾಯಾಲಯದ ಮುಂದೆ ಆಕೆಯನ್ನು ಹಾಜರುಪಡಿಸಿದ ಬಳಿಕ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.

ಈ ನಡುವೆ ಕೆಲ ಸಂಘಟನೆಗಳ ಕಾರ್ಯಕರ್ತರು ಶಿವಮೊಗ್ಗ ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರದಲ್ಲಿರುವ ಆಕೆಯ ಮನೆಯ ಮೇಲೆ ದಾಳಿ ನಡೆಸಿ, ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯಲು ಅವಕಾಶವಿಲ್ಲದಂತೆ ಶಿವಪುರ ಗ್ರಾಮಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. 
 
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ "ಹಿಂದೂ-ಮುಸ್ಲಿಂ-ಸಿಖ್-ಇಸಾಯಿ ಫೆಡರೇಷನ್ ಆಯೋಜಿಸಿದ್ದ ಪ್ರತಿಭಟನೆ ವೇಳೆ ಅಮೂಲ್ಯ ಪಾಕಿಸ್ತಾನ ಪರ ಜಿಂದಾಬಾದ್ ಘೋಷಿಸಿದ್ದರು. ಕೂಡಲೇ ಪೊಲೀಸರು ಆಕೆಯನ್ನು ಬಂಧಿಸ ವಿಚಾರಣೆಗೆ ಒಳಪಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com