ಸಾಂಪ್ರದಾಯಿಕ ಮಾಧ್ಯಮಗಳು ಸತ್ಯನಿಷ್ಠವಾಗಿದ್ದುಕೊಂಡೇ, ಪ್ರಸ್ತುತವಾಗಿರಲು ಪ್ರಯತ್ನಿಸಬೇಕು; ರಾಮನಾಥ್ ಕೋವಿಂದ್

ಇಂದಿನ ವೇಗದ ಮತ್ತು ಜನಪ್ರಿಯ ಮಾಧ್ಯಮಗಳ ನಡುವೆ, ಸಾಂಪ್ರದಾಯಿಕ ಮಾಧ್ಯಮಗಳು ಸತ್ಯನಿಷ್ಠವಾಗಿದ್ದುಕೊಂಡೇ, ಪ್ರಸ್ತುತವಾಗಿರಲು ಪ್ರಯತ್ನಿಸಬೇಕಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. 
ದಿ ಹಿಂದೂ ಪತ್ರಿಕೆ ಏರ್ಪಡಿಸಿದ್ದ ದಿ ಹಡಲ್ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ದಿ ಹಿಂದೂ ಪತ್ರಿಕೆ ಏರ್ಪಡಿಸಿದ್ದ ದಿ ಹಡಲ್ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಬೆಂಗಳೂರು: ಇಂದಿನ ವೇಗದ ಮತ್ತು ಜನಪ್ರಿಯ ಮಾಧ್ಯಮಗಳ ನಡುವೆ, ಸಾಂಪ್ರದಾಯಿಕ ಮಾಧ್ಯಮಗಳು ಸತ್ಯನಿಷ್ಠವಾಗಿದ್ದುಕೊಂಡೇ, ಪ್ರಸ್ತುತವಾಗಿರಲು ಪ್ರಯತ್ನಿಸಬೇಕಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. 

 ‘ದಿ ಹಿಂದೂ’ ಪತ್ರಿಕೆ ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ನಾಲ್ಕನೇ ಆವೃತ್ತಿಯ ‘ದಿ ಹಡಲ್’ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡ ಅವರು, ಜಗತ್ತು ಇಂದು ಮಾಹಿತಿ ತಂತ್ರಜ್ಞಾನದ ಮೇಲೆ ರೂಪುಗೊಳ್ಳುತ್ತಿದೆ. ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳು ಮಾಧ್ಯಮವನ್ನು ಜನರಿಗೆ ಹತ್ತಿರವಾಗಿಸಿವೆ. ಈ ಪ್ರವೃತ್ತಿ ಪತ್ರಿಕೋದ್ಯಮದ ಮೇಲೆ ಪರಿಣಾಮ ಬೀರುತ್ತಿವೆ ಎಂದರು.


 ಪೂರ್ವಾಗ್ರಹರಹಿತ ಪತ್ರಿಕೋದ್ಯಮ, ಮಾಹಿತಿಪೂರ್ಣ ಪ್ರಜೆಗಳಿಲ್ಲದ ಸಮಾಜ ಅಪೂರ್ಣ. ಹೊಸ ಮಾಧ್ಯಮಗಳು ವೇಗದ ಮತ್ತು ತರಾತುರಿಯ ಸುದ್ದಿಗಳ ಮೊರೆ ಹೋಗಿದ್ದರೆ, ಹಳೆಯ ಹಾಗೂ ಸಾಂಪ್ರದಾಯಿಕ ಮಾಧ್ಯಮಗಳು ಮಾತ್ರ ನಿಖರ ಮಾಹಿತಿಯನ್ನು ಅವಲಂಬಿಸಿವೆ. ಆದರೆ ಇದು ಅವುಗಳಿಗೆ ದುಬಾರಿಯಾಗಿ ಪರಿಣಮಿಸಿದೆ. ಆದ್ದರಿಂದ ಸಾಂಪ್ರದಾಯಿಕ ಮಾಧ್ಯಮಗಳು ಸಮಾಜದಲ್ಲಿ ತಮ್ಮ ಪಾತ್ರವನ್ನು ಅರಿತು, ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು ಎಂದು ಸಲಹೆ ನೀಡಿದರು. 


ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ಕೂಡ ಓರ್ವ ಪತ್ರಕರ್ತರಾಗಿದ್ದರು. ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿ ಹಲವು ಪತ್ರಿಕೆಗಳನ್ನು ನಡೆಸಿದ್ದರು. ಸತ್ಯ, ಪ್ರಾಮಾಣಿಕತೆಯೇ ಪತ್ರಿಕೋದ್ಯಮದ ಮೂಲ ಮಂತ್ರ ಎಂಬುದು ಅವರ ನಂಬಿಕೆಯಾಗಿತ್ತು. ಯಾವುದೇ ಹೊಂದಾಣಿಕೆಯಿಲ್ಲದ ಸತ್ಯದ ದಾರಿಯಲ್ಲಿ ಸಾಗಿದ್ದರು ಎಂದರು. 


 ಆದರೆ, ಕೆಲವೊಮ್ಮೆ ವೈಯಕ್ತಿಕ ಪೂರ್ವಾಗ್ರಹಗಳು ಸತ್ಯವನ್ನು ದಾರಿ ತಪ್ಪಿಸುತ್ತವೆ. ಗಾಂಧಿಯ 150ನೇ ಜನ್ಮವರ್ಷಾಚರಣೆಯಲ್ಲಿ ಈ ವಿಷಯದ ಕುರಿತು ಗಮನ ಹರಿಸಬೇಕಿದೆ. ಇದು ನಾವು ಸತ್ಯದ ನಂತರದ ಯುಗದಲ್ಲಿ ಬದುಕಿದ್ದೇವೆ. ಇಲ್ಲಿ ಸತ್ಯಕ್ಕೆ ವಿವಿಧ ಹೆಸರುಗಳೊಂದಿಗೆ ಹೊಸ ರೂಪ ನೀಡಲಾಗುತ್ತಿದೆ. ಆದರೆ, ಸತ್ಯ ಎಂದಿಗೂ ಪರಿಪೂರ್ಣವಾಗಿರುತ್ತದೆ ಎಂಬುದನ್ನು ಮರೆಯಬಾರದು. ಅದಕ್ಕೆ ಪೂರ್ವಾಗ್ರಹದ ಬಣ್ಣ ಬಳಿಯಲು ಸಾಧ್ಯವಿಲ್ಲ. ವಾದ, ಚರ್ಚೆ ಹಾಗೂ ವೈಜ್ಞಾನಿಕ ವಿಧಾನಗಳಿಂದ ಸತ್ಯ ಹೊರಬರುತ್ತವೆ ಎಂದರು. 
  
ಪಾಶ್ಚಿಮಾತ್ಯರು ಪ್ರಜಾಪ್ರಭುತ್ವದ ವಿಚಾರವನ್ನು ಪರಿಚಯಿಸುವ ಮುನ್ನ ಭಾರತದಲ್ಲಿ 12ನೇ ಶತಮಾನದಲ್ಲಿಯೇ ವಚನಕಾರ ಬಸವಣ್ಣ ಅವರು ಅನುಭವ ಮಂಟಪವನ್ನು ಸ್ಥಾಪಿಸಿದ್ದರು. ಇದನ್ನು ಜಗತ್ತಿನ ಪ್ರಥಮ ಸಂಸತ್ತು ಎಂದು ಗುರುತಿಸಲ್ಪಟ್ಟಿದೆ. ಇಲ್ಲಿ ಪ್ರತಿಯೊಬ್ಬರ ಅಭಿಪ್ರಾಯಗಳಿಗೂ ಬೆಲೆಯಿತ್ತು. ಲಿಂಗ ಸಮಾನತೆಯ ಒಂದು ವಿನೂತನ ಪ್ರಯೋಗವಾಗಿತ್ತು. ಅಂತಹ ಸಂತರನ್ನು ಪಡೆದ ಪುಣ್ಯಭೂಮಿಯಲ್ಲಿ ಇಂದು ಪರಿಸ್ಥಿತಿ ಬದಲಾಗಿದೆ. ಪೂರ್ವಾಗ್ರಹ ಪೀಡಿತ ಮನಸ್ಥಿತಿ ಮತ್ತು ಹಿಂಸಾಚಾರ ಸತ್ಯದ ಹುಡುಕಾಟಕ್ಕೆ ಅಡ್ಡಿಯುಂಟು ಮಾಡುತ್ತಿದೆ ಎಂದರು. 
  
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಪಾರದರ್ಶಕ ಆಡಳಿತ ಮತ್ತು ನೀತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ 20 ವಲಯಗಳಿಗೆ ಪ್ರತ್ಯೇಕ ನೀತಿಗಳನ್ನು ಜಾರಿಗೆ ತರಲಾಗಿದೆ. ಬೆಂಗಳೂರು ಸ್ಟಾರ್ಟ್ ಅಪ್ ಗಳ ತವರೂರಾಗಿದೆ. ಸರ್ಕಾರ ಹೊಸ ಸಂಶೋಧನೆ, ಆವಿಷ್ಕಾರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅದಕ್ಕಾಗಿ ಆವಿಷ್ಕಾರ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ನೀತಿ ಆಯೋಗ ಕೂಡ ರಾಜ್ಯಕ್ಕೆ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವ ಪ್ರಥಮ ರಾಜ್ಯವನ್ನಾಗಿ ಗುರುತಿಸಿದೆ ಎಂದರು.  ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com