ಹುಟ್ಟು ಹಬ್ಬದಂದೇ ಧವಳಗಿರಿಯಿಂದ ಕಾವೇರಿಗೆ ಸಿಎಂ ಯಡಿಯೂರಪ್ಪ ಶಿಫ್ಟ್!

ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿವಾಸ ಬದಲಿಸಲು ಮುಂದಾಗಿದ್ದು, ಡಾಲರ್ಸ್ ಕಾಲೋನಿಯಲ್ಲರಿರುವ ಧವಳಗಿರಿ ನಿವಾಸದಿಂದ ಸರ್ಕಾರಿ ಬಂಗಲೆಗೆ ಕಾವೇರಿಗೆ ಶಿಫ್ಟ್ ಆಗಲು ತಯಾರಿ ನಡೆಸಿದ್ದಾರೆ.
ಕಾವೇರಿ
ಕಾವೇರಿ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿವಾಸ ಬದಲಿಸಲು ಮುಂದಾಗಿದ್ದು, ಡಾಲರ್ಸ್ ಕಾಲೋನಿಯಲ್ಲರಿರುವ ಧವಳಗಿರಿ ನಿವಾಸದಿಂದ ಸರ್ಕಾರಿ ಬಂಗಲೆಗೆ ಕಾವೇರಿಗೆ ಶಿಫ್ಟ್ ಆಗಲು ತಯಾರಿ ನಡೆಸಿದ್ದಾರೆ.

ಈಗಾಗಲೇ ಕಾವೇರಿ ನಿವಾಸದಲ್ಲಿ ನಡೆಯುತ್ತಿರುವ ನವೀಕರಣ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ. ಎಲ್ಲಾ ಕಾರ್ಯಕ್ರಗಳು ಮುಗಿದರೆ ಫೆ. 27ಕ್ಕೆ ಅಧಿಕೃತವಾಗಿ ಕಾವೇರಿ ನಿವಾಸಕ್ಕೆ ಪ್ರವೇಶಿಸಲಿದ್ದಾರೆ.

ಫೆ.27ಕ್ಕೆ ಕಾವೇರಿಯಲ್ಲಿ ವಿಶೇಷ ಪೂಜೆ
ಫೆಬ್ರವರಿ 27ರಂದು ಸಿಎಂ ಯಡಿಯೂರಪ್ಪನವರಿಗೆ 78ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಫೆ. 27ರಂದು ಅರಮನೆ ಮೈದಾನದಲ್ಲಿ ಜನ್ಮದಿನೋತ್ಸವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. 

ಅಂದೇ  ಕಾವೇರಿ ನಿವಾಸದಲ್ಲಿ ಕುಟುಂಬದಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು, ಇನ್ನೂ ಅಲ್ಪ-ಸ್ವಲ್ಪ ನವೀಕರಣ ಕಾರ್ಯ ಬಾಕಿ ಇರುವುದರಿಂದ ಯುಗಾದಿಗೆ ಗೃಹ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ. 

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದು ತಿಂಗಳುಗಳೇ ಕಳೆದರೂ ಅಧಿಕೃತವಾಗಿ ಕಾವೇರಿ ನಿವಾಸಕ್ಕೆ ಸ್ಥಳಾಂತರವಾಗಿರಲಿಲ್ಲ. ಡಾಲರ್ಸ್​​ ಕಾಲೋನಿಯ ತಮ್ಮ ನಿವಾಸ ಧವಳಗಿರಿಯಲ್ಲೇ ವಾಸ್ತವ್ಯ ಹೂಡಿದ್ದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದಾಗಿನಿಂದಲೂ ಇದೇ ಕಾವೇರಿ ನಿವಾಸದಲ್ಲಿದ್ದರು. ಬಳಿಕ ಮೈತ್ರಿ ಸರ್ಕಾರದ ವೇಳೆಯಲ್ಲೂ ಸಹ ಇದೇ ಕಾವೇರಿ ನಿವಾಸದಲ್ಲಿದ್ದರು. ಇದೀಗ ಯಡಿಯೂರಪ್ಪನವರು ಕಾವೇರಿ ನಿವಾಸ ಬಯಸಿದ್ದರಿಂದ ಸಿದ್ದರಾಮಯ್ಯನವರು ಈ ಮನೆಯನ್ನ ಖಾಲಿ ಮಾಡಿದ್ದಾರೆ.

ಯುಗಾದಿಗೂ ಮುನ್ನ ಸಿಎಂ ಯಡಿಯೂರಪ್ಪ ಧವಳಗಿರಿ ನಿವಾಸದಿಂದ ಕಾವೇರಿ ನಿವಾಸಕ್ಕೆ ತಮ್ಮ ವಾಸ್ತವ್ಯ ಬದಲಾಯಿಸಲಿದ್ದಾರೆ. ಸಾಧ್ಯವಾದರೆ ಮಾರ್ಚ್ 5 ರಂದು ಬಜೆಟ್ ಪುಸ್ತಕವನ್ನು ಕಾವೇರಿ ನಿವಾಸದಿಂದಲೇ ಕೊಡೊಯ್ಯುವ ಕುರಿತು ಸಿಎಂ ಚಿಂತನೆ ನಡೆಸುತ್ತಿದ್ದಾರೆ. 

ಹೀಗಾಗಿಯೇ ಶನಿವಾರ ಪ್ರಥಮ ಬಾರಿಗೆ ಸಿಎಂ ಯಡಿಯೂರಪ್ಪ ಯಾರಿಗೂ ಹೇಳದೇ ಕಾವೇರಿ ನಿವಾಸಕ್ಕೆ ತೆರಳಿ ನವೀಕರಣ ಕಾರ್ಯದ ಪ್ರಗತಿ ಪರಿಶೀಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com