ಮಂಡ್ಯದಲ್ಲಿ ರೌಡಿಗಳ ವಿಚಾರಣೆ: ಶೂರಿಟಿ ಕೊಡಿ, ಇಲ್ಲಾ ಗಡಿಪಾರಾಗಿ; ೩೮ ರೌಡಿಗಳಿಗೆ ಡಿಸಿ ವಾರ್ನಿಂಗ್

ಇತ್ತೀಚೆಗೆ ಮಂಡ್ಯಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ೩೮ ರೌಡಿಗಳ ಗಡಿಪಾರಿಗೆ ಜಿಲ್ಲಾಡಳಿತ ಸಿದ್ದತೆ ನಡೆಸಿದೆ.
ಜಿಲ್ಲಾಧಿಕಾರಿಯಿಂದ ರೌಡಿಗಳ ವಿಚಾರಣೆ
ಜಿಲ್ಲಾಧಿಕಾರಿಯಿಂದ ರೌಡಿಗಳ ವಿಚಾರಣೆ
Updated on

ಮಂಡ್ಯ: ಇತ್ತೀಚೆಗೆ ಮಂಡ್ಯಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ೩೮ ರೌಡಿಗಳ ಗಡಿಪಾರಿಗೆ ಜಿಲ್ಲಾಡಳಿತ ಸಿದ್ದತೆ ನಡೆಸಿದೆ. ಇದರ ಭಾಗವಾಗಿ ಶನಿವಾರ ಜಿಲ್ಲಾದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ರೌಡಿಗಳ ವಿಚಾರಣೆ ನಡೆಸಿದರು.

ಕಳೆದೆರಡು ತಿಂಗಳಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ೮ಕ್ಕೂ ಹೆಚ್ಚು ಕೊಲೆ, ೧೦ಕ್ಕೂ ಹೆಚ್ಚು ದರೋಡೆ ಪ್ರಕರಣಗಳು ಮತ್ತು ಹಲವು ಸರಗಳ್ಳತನ ಪ್ರಕರಣಗಳು ವರದಿಯಾಗಿದ್ದು ಸಾರ್ವಜನಿಕರ ನೆಮ್ಮದಿಕೆಟ್ಟಿತ್ತು. ಒಂದಲ್ಲಾ ಒಂದು ಅಪರಾಧ ಪ್ರಕರಣಗಳು ನಿತ್ಯ ನಡೆಯುತ್ತಿದ್ದುದು ಪೊಲೀಸರಿಗೂ ತಲೆನೋ ತಂದಿತ್ತು. ಈ ಹಿನ್ನೆಲೆಯಲ್ಲಿ ರೌಡಿಗಳ ಉಪಟಳ ತಡೆಗೆ ಪ್ಲಾನ್ ಮಾಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಜಿಲ್ಲೆಯೊಳಗೆ ಶಾಂತಿ ಸುವ್ಯವಸ್ಥೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.

ಪೊಲೀಸ್ ಇಲಾಖೆಯ ಮನವಿಯಂತೆಯೇ ವಾರದ ಹಿಂದೆ ಎಲ್ಲಾ ರೌಡಿಶೀಟರ್‌ಗಳಿಗೆ ನೊಟೀಸ್ ನೀಡಿದ್ದ ಜಿಲ್ಲಾದಂಡಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಇಂದು ತಮ್ಮ ಕಛೇರಿಯ ಸಭಾಂಗಣದಲ್ಲಿಯೇ ವಿಚಾರಣೆ ನಡೆಸಿದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಶಿವ ಅಲಿಯಾಸ್ ಡೇಂಜರ್ ಶಿವಾ ಸೇರಿದಂತೆ ಸುಮಾರು ೩೮ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ವಿಚಾರಣೆ ನಡೆಸಲಾಯಿತು.

ಶೂರಿಟಿ ಕೊಡಿ, ಇಲ್ಲಾ ಗಡಿಪಾರಾಗಿ:
ರೌಡಿಗಳ ವಿಚಾರಣೆ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಇತ್ತೀಚೆಗೆ ಜಿಲ್ಲೆಯ ವಿವಿಧೆಡೆ ಕೆಲವು ವ್ಯಕ್ತಿಗಳು ದುರ್ನಡತೆಯಿಂದ ಸಮಾಜದಲ್ಲಿ ಆತಂಕ ಮತ್ತು ಭಯದ ವಾತಾವರಣವನ್ನು ಸೃಷ್ಠಿ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು, ಚಿಕ್ಕ ಮಕ್ಕಳು ಮತ್ತು ನಾಗರೀಕರ ಮೇಲೆ ದೌರ್ಜನ್ಯವನ್ನು ಮಾಡುತ್ತಿದ್ದಾರೆ ಎಂದು ಪೊಲೀಸರು, ಸಮಾಜದ ಗಣ್ಯರು, ಮಾಧ್ಯಮದವರು ಸೇರಿದಂತೆ ನಾನಾ ರೀತಿಯ ದೂರುಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ರೌಡಿಶೀಟರ್‌ಗಳ ಗಡಿಪಾರಿನ ವಿಷಯದಲ್ಲಿ ವಿಚಾರಣೆ ನಡೆಸಲಾಗಿದೆ ಎಂದರು.

ರೌಡಿಗಳ ಗಡಿಪಾರಿನ ಅವಧಿಯು ಅಪರಾಧಿಯ ಅಪರಾಧಾವನ್ನು ಅವಲಂಬಿಸಿರುತ್ತದೆ. ಮೂರುತಿಂಗಳು, ಆರು ತಿಂಗಳು ಅಥವಾ ಒಂದು ವರ್ಷ ಗಡಿಪಾರು ಮಾಡುತ್ತೇವೆ. ನಂತರ ಅವರಿಗೆ ಅವಕಾಶವನ್ನು ಕೊಟ್ಟು ಪುನರಾವರ್ತನೆ ಮಾಡುತ್ತೇವೆ. ಇಂದು ರೌಡಿ ಶೀಟರ್‌ಗಳ ಜೊತೆ ಹಾಜರಿದ್ದ ಸಂಬಂಧಿಕರು, ವಕೀಲರು ಇನ್ನು ಮುಂದೆ ಇಂತಹ ಪ್ರಕರಣಗಳನ್ನು ಮಾಡುವುದಿಲ್ಲವೆಂದು ಬರೆದು ಕೊಟ್ಟಿದ್ದಾರೆ. ಆದರೆ ನಾವು ಅವರಿಗೆ ಒಬ್ಬ ಗೆಜೆಟೆಡ್ ಅಧಿಕಾರಿಯ ಶೂರಿಟಿ ಕೊಡಲು ಸೂಚಿಸಿದ್ದೇವೆ. ಅವರ ಪರವಾಗಿ ಶೂರಿಟಿ ಕೊಟ್ಟರೆ ಅಂತಹವರಿಗೆ ಅವಕಾಶವನ್ನು ಕೊಡಲಾಗುತ್ತದೆ, ಇಲ್ಲದಿದ್ದರೆ ಗಡಿಪಾರು ಮಾಡುತ್ತೇವೆ ಎಂದು ತಿಳಿದರು. 

ಹಲವು ವರ್ಷಗಳಿಂದ ಶ್ರೀರಂಗಪಟ್ಟಣ, ಬೆಳಗೊಳ, ಪಾಲಳ್ಳಿ, ಮದ್ದೂರು, ಕೆ,ಎಂ,ದೊಡ್ಡಿ, ಮಳವಳ್ಳಿ, ಕೆ.ಆರ್ ಪೇಟೆ ಮತ್ತು ಮಂಡ್ಯದ ನಗರದ ಸುತ್ತ-ಮುತ್ತ ಹಲವಾರು ಗ್ರಾಮಗಳಲ್ಲಿ ರೌಡಿಶೀಟರ್‌ಗಳಿದ್ದಾರೆ. ಅಂತಹವರನ್ನು ಈ ದಿನ ಕರೆಸಿ ಯಾವ ಕಾರಣಕ್ಕಾಗಿ ಗಡಿಪಾರು ಮಾಡಬಾರದು ಎಂಬುದರ ಕಾರಣ ಕೇಳಿ ನೋಟೀಸ್ ನೀಡಿ, ಕೂಲಂಕುಶವಾಗಿ ತನಿಖೆಯನ್ನು ಮಾಡಿದ್ದೇವೆ ಎಂದರು.

ಕೆಲವು ಪ್ರಕರಣಗಳು ಸಮಾಜದ ಮೇಲೆ ಬಹಳ ಗಂಭೀರವಾದ ದುಷ್ಪರಿಣಾಮ ಬೀರುವಂತಹ ಪ್ರಕರಣಗಳಿರುವುದು ಕಂಡು ಬಂದಿದೆ. ಅವರ ಮೇಲೆ ಶಿಸ್ತು ಕ್ರಮ ಕೈಗೊಂಡು ಶೂರಿಟಿ ಕೊಡಬೇಕೆಂದು ಹೇಳಿ ಮತ್ತೆ ಶುಕ್ರವಾರ ತನಿಖೆ ಮಾಡಲು ಆದೇಶಿಸಿದ್ದೇನೆ ಎಂದರು.

ಈ ಪ್ರಕರಣಗಳಲ್ಲಿ ಸಮಾಜಕ್ಕೆ ಗಂಡಾಂತರ, ಭಯ, ಆತಂಕವನ್ನು ಉಂಟು ಮಾಡುತ್ತಿದ್ದಾರೋ ಅಂತಹವರನ್ನು ಗುರುತಿಸಿ ಮಂಡ್ಯ ಜಿಲ್ಲೆಯಿಂದ ಗಡಿಪಾರು ಮಾಡಲು ಕಟ್ಟು ನಿಟ್ಟಾದ ಕ್ರಮ ಕೈಗೊಳ್ಳಲಾಗುವುದು. ಇದರ ಜೊತೆಗೆ ಜಿಲ್ಲೆಯಲ್ಲಿನ ಎಲ್ಲಾ ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಜಾಗೃತಿಗೊಳಿಸಲಾಗುವುದು. ಭಯ, ಗುಂಪುಗಾರಿಕೆ ಮಾಡಿ ಸಮಸ್ಯೆಯನ್ನು ಉಂಟು ಮಾಡುತ್ತಿರುವವರನ್ನು ಗುರುತಿಸಿ ವರದಿಯನ್ನು ನೀಡಲು ಸೂಚಿಸಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾಡಳಿತ ನೀಡುವ ನಿರ್ದೇಶನಗಳನ್ನು ಯಾರು ಉಲ್ಲಂಘನೆ ಮಾಡುತ್ತಾರೋ ಅಂತಹವರಿಗೆ ಶಾಶ್ವತವಾಗಿ ಜಿಲ್ಲೆಯಿಂದ ಹೊರಹಾಕುವಂತೆ ಕ್ರಮ ಕೈಗೊಳ್ಳುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದೇವೆ. ಯಾವ ವ್ಯಕ್ತಿಯು ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರದು, ಎಲ್ಲರು ಭ್ರಾತೃತ್ವ, ಶಾಂತಿಯಿಂದ ವರ್ತಿಸಬೇಕು. ಕೋಪ ಬಂದರು ನಿಯಂತ್ರಣ ಮಾಡಿಕೊಳ್ಳಬೇಕು. ಯಾರಾದರು ಕಾನೂನನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಶಿಸ್ತು-ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
- ನಾಗಯ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com