
ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ಜನವರಿ 9 ಮತ್ತು 10ರಂದು ನಡೆಯಲಿರುವ ಆನೆಗೊಂದಿ ಉತ್ಸವ-2020ಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ.
ಇಂದು ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಉತ್ಸವದ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಅವರು, ಜನವರಿ 9ರಂದು ಸಿಎಂ ಯಡಿಯೂರಪ್ಪ ಅವರು ಆನೆಗೊಂದಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ಅವರು ಸಹ ಭಾಗವಹಿಸಲಿದ್ದಾರೆ ಎಂದರು.
ರಾಜ್ಯ ಸರ್ಕಾರ ಆನೆಗೊಂದಿ ಉತ್ಸವ ಆಚರಣೆಗೆ 1 ಕೋಟಿ ರೂಪಾಯಿ ಅನುದಾನ ನೀಡಿದೆ. ಅಲ್ಲದೆ ಉತ್ಸವಕ್ಕೆ ಸಿಎಸ್ ಆರ್ ನಡಿ ವಿವಿಧ ಖಾಸಗಿ ಸಂಸ್ಥೆಯಿಂದಲೂ ಫಂಡ್ ಸಂಗ್ರಹಿಸಲಾಗಿದೆ. ಒಟ್ಟು ಸುಮಾರು 2.10 ಕೋಟಿ ರೂ. ಅನುದಾನದಲ್ಲಿ ಉತ್ಸವ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಗಾಯಕ ವಿಜಯಪ್ರಕಾಶ ಹಾಗೂ ಅರ್ಜುನ್ ಇಟಗಿ ಈ ಬಾರಿ ಸಂಗೀತದ ರಸದೌತಣ ನೀಡಲಿದ್ದಾರೆ ಎಂದರು.
ಉತ್ಸವದ ವೇಳೆ ವಿವಿಧ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದೆ. ಉತ್ಸವಕ್ಕೆ ಬರುವ ಪ್ರವಾಸಿಗರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಗಂಗಾವತಿ ಮತ್ತು ಕೊಪ್ಪಳದಿಂದ ತಲಾ 5 ಬಸ್ ಕಾರ್ಯಾಚರಣೆ ಮಾಡಲಿವೆ. ಆನೆಗೊಂದಿಯಲ್ಲೂ ಸ್ಥಳೀಯವಾಗಿ ಓಡಾಡಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 14 ಬಸ್ ಉಚಿತ ಕಾರ್ಯಾಚರಣೆ ನಡೆಸಲಿವೆ ಎಂದು ಮಾಹಿತಿ ನೀಡಿದರು.
ಇನ್ನು ಭದ್ರತೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರು, ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಉತ್ಸವ ನಡೆಯಲಿದೆ ಎಂದರು.
Advertisement