ಬಾದಾಮಿ: ಬನಶಂಕರಿ ಜಾತ್ರೆಯಲ್ಲಿ ಸಿದ್ದು ಹವಾ, ಸದ್ದು ಮಾಡುತ್ತಿದೆ “ಹೌದ್ದ ಹುಲಿಯಾ” ನಾಟಕ

ನಾಡಿನ ಪ್ರತಿಷ್ಠಿತ ಜಾತ್ರೆಗಳಲ್ಲೊಂದಾದ ಬಾದಾಮಿ ಬನಶಂಕರಿ ದೇವಿಯ ತಿಂಗಳ ಜಾತ್ರೆಗೆ ದಿನಗಣನೆ ಆರಂಭಗೊಂಡಿವೆ. ಖಡಕ್ ರೊಟ್ಟಿ, ಭಜಿ, ಚಟ್ನಿ ಊಟದ ಭರಾಟೆ ಈಗಲೇ ಶುರುವಾಗಿದೆ.
ಬನಶಂಕರಿ ಸುತ್ತಲಿನ ಪ್ರದೇಶದಲ್ಲಿ ಕಾಣುತ್ತಿರುವ ಹೌದ್ದ ಹುಲಿಯಾ ನಾಟಕದ ಬ್ಯಾನರ್
ಬನಶಂಕರಿ ಸುತ್ತಲಿನ ಪ್ರದೇಶದಲ್ಲಿ ಕಾಣುತ್ತಿರುವ ಹೌದ್ದ ಹುಲಿಯಾ ನಾಟಕದ ಬ್ಯಾನರ್

ಬಾಗಲಕೋಟೆ: ನಾಡಿನ ಪ್ರತಿಷ್ಠಿತ ಜಾತ್ರೆಗಳಲ್ಲೊಂದಾದ ಬಾದಾಮಿ ಬನಶಂಕರಿ ದೇವಿಯ ತಿಂಗಳ ಜಾತ್ರೆಗೆ ದಿನಗಣನೆ ಆರಂಭಗೊಂಡಿವೆ. ಖಡಕ್ ರೊಟ್ಟಿ, ಭಜಿ, ಚಟ್ನಿ ಊಟದ ಭರಾಟೆ ಈಗಲೇ ಶುರುವಾಗಿದೆ.

ನಾಟಕ ಕಂಪನಿಗಳ ಪಾಲಿಗೆ ವರ್ಷದ “ಅನ್ನ” ಎನ್ನುವ ಮಾತು ಜನಜನಿತವಾಗಿದೆ. ಇಲ್ಲಿ ಹಿಟ್ ಆಗುವ ನಾಟಕಗಳು ನೂರಾರು ಪ್ರದರ್ಶನ ಕಂಡಿವೆ. ಇತ್ತೀಚಿನ ವರ್ಷಗಳಲ್ಲಿ ರಂಗಕರ್ಮಿ ಎನ್. ರಾಜಣ್ಣ ಅವರ ಜೇವರ್ಗಿ ನಾಟಕ ಕಂಪನಿಯ ‘ಶೆರೆ ಸಂಗವ್ವ’ ನಾಟಕ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ಕೋಟಿ ರೂ. ಗಳಿಸಿ ದಾಖಲೆ ಮಾಡಿದೆ. ಹೀಗೆ ಪ್ರತಿ ವರ್ಷ ಇಲ್ಲಿ ಯಾವುದಾದರೂ ಒಂದು ನಾಟಕ ಹೆಚ್ಚು ಜನಪ್ರಿಯತೆ ಗಳಿಸಿ ನೂರಾರು ಪ್ರದರ್ಶಗಳನ್ನು ಕಂಡಿವೆ. 

ಇದುವರೆಗೂ ಇಲ್ಲಿ ಜಾತ್ರೆಯ ಮುನ್ನಾ ದಿನದಿಂದ ನಾಟಕಗಳ ಪ್ರದರ್ಶನ ಆರಂಭಗೊಂಡ ಬಳಿಕ ಒಂದೆರಡು ದಿನಗಳಲ್ಲೇ ಇಂತಹ ನಾಟಕ ಭಾರಿ ಇದೆ ಎನ್ನುವ ಮೆಚ್ಚುಗೆ ಮಾತು ಶುರುವಾಗುತ್ತಲೇ ಆ ನಾಟಕ ಜಾತ್ರೆಗೆ ಬರುವ ಭಕ್ತರನ್ನು ತನ್ನತ್ತ ಸೇಳೆಯತ್ತದೆ. ಇದು ಪ್ರತಿ ವರ್ಷದ ಮಾತು ಆದರೆ ಈ ಬಾರಿ ಜಾತ್ರೆಯಲ್ಲಿ ನಾಟಕಗಳ ಪ್ರದರ್ಶನಕ್ಕೆ ಟೆಂಟ್ ಹಾಕುವ ಕೆಲಸ ನಡೆದಿದೆ. ಈಗಲೇ “ಹೌದ್ದ ಹುಲಿಯಾ” ನಾಟಕ ಪ್ರದರ್ಶನಗೊಳ್ಳಲಿದೆ ಎನ್ನುವುದು ಭಾರಿ ಹವಾ ಸೃಷ್ಟಿ ಮಾಡಿದೆ. ಇದಕ್ಕೆ ಕಾರಣವೂ ಇದೆ. 

ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆ ವೇಳೆ ಬಾದಾಮಿ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹಿರಂಗ ಪ್ರಚಾರ ಸಭೆಯಲ್ಲೊಬ್ಬ ಅಭಿಮಾನಿ “ಹೌದ್ದ ಹುಲಿಯಾ” ಎಂದು ಕೂಗಿದ್ದು, ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ರಾಜಕಾರಣದ ಹೊಸ ಅಲೆ ಸೃಷ್ಟಿಸಿತ್ತು. ಹೌದ್ದ ಹುಲಿಯಾ ಎಂದು ಕೂಗಿದ ವ್ಯಕ್ತಿ ಸಾಮಾಜಿಕ ಜಾಲ ತಾಣದಲ್ಲಿ, ಮಾಧ್ಯಮಗಳಲ್ಲಿ ಭಾರಿ ಹವಾ ಮಾಡಿದ್ದ ಕೂಡ ಗಮನಾರ್ಹ.

ಇಂದಿಗೂ “ಹೌದ್ದ ಹುಲಿಯಾ”ಎನ್ನುವುದು ಸಭೆ ಸಮಾರಂಭಗಳಲ್ಲಿ ಮನೆ ಮಾತಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇದು ಭಾರಿ ಇಮೇಜ್ ತಂದು ಕೊಟ್ಟಿದ್ದಂತೂ ನಿಜ.

ಈಗ ಅವರದೇ ಕ್ಷೇತ್ರದ ಬಾದಾಮಿ ಬನಶಂಕರಿ ದೇವಿ ಜಾತ್ರೆಯಲ್ಲಿ “ಹೌದ್ದ ಹುಲಿಯ” ಹೆಸರಿನ ನಾಟಕ ಪ್ರದರ್ಶನಕ್ಕೆ ಸಜ್ಜಾಗಿದ್ದು, ಈಗಲೇ ಭಾರಿ ಅಲೇ ಸೃಷ್ಟಿಸಿದೆ. ನಾಟಕ ಪ್ರೇಮಿಗಳಲ್ಲಿ ಕಾತರವನ್ನು ಮೂಡಿಸಿದೆ. ಪ್ರದರ್ಶನಕ್ಕೂ ಮೊದಲೇ ಸಾಕಷ್ಟು ಹೆಸರು ಮಾಡಿರುವ ಮೊದಲ ನಾಟಕ ಇದಾಗಿದೆ.

ಬಾದಾಮಿ ಸಿದ್ದರಾಮಯ್ಯನವರು ಪ್ರತಿನಿಧಿಸುತ್ತಿರುವ ಕ್ಷೇತ್ರವಾಗಿರುವುದರಿಂದ ಈ ವರ್ಷ ಇದು ಅತೀ ಹೆಚ್ಚು ಪ್ರದರ್ಶಗಳನ್ನು ಕಂಡು ಜಾತ್ರೆಯ “ರಂಗಭೂಮಿ ಇತಿಹಾಸ”ದಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆಗಳು ನಿಚ್ಚಳವಾಗಿದ್ದು, ಸಿದ್ದರಾಮಯ್ಯನವರ ಪಾತ್ರಧಾರಿ ಯಾರು?, ಪೀರಪ್ಪನ ಪಾತ್ರಧಾರಿ ಯಾರು ಎನ್ನುವುದು ಕೂಡಾ ಚರ್ಚೆಯ ವಿಷಯವಾಗಿದೆ. 
ಈಗಲೇ ಇಷ್ಟೆಲ್ಲ ಸದ್ದು ಮಾಡುತ್ತಿರುವ ಕಮತಗಿ ಹುಚ್ಚೇಶ್ವರ ನಾಟ್ಯ ಸಂಘದ ಕಲಾವಿದರಿಂದ ನಾಟಕ ಪ್ರದರ್ಶನ ಹೇಗೆ ನಡೆಯಲಿದೆ ಎನ್ನುವುನ್ನು ಕಾಯ್ದು ನೋಡಬೇಕಷ್ಟೆ.
-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com