ಭಾರತ್ ಬಂದ್ ನಲ್ಲಿ ಪಾಲ್ಗೊಳ್ಳಬಾರದು, ಸಾರಿಗೆ ಸಿಬ್ಬಂದಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಾರ್ನಿಂಗ್
ಬೆಂಗಳೂರು: ಭಾರತ್ ಬಂದ್ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಬಸ್ ಸಂಚಾರ ಮಾಡುವಂತೆ ಎಲ್ಲಾ ನಿಗಮಗಳ ಮುಖ್ಯಸ್ಥರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆದೇಶ ನೀಡಿದ್ದಾರೆ.
ಬಂದ್ ಸಂದರ್ಭದಲ್ಲಿ ಬಸ್ ಗಳಿಗೆ ಕಲ್ಲು ತೂರುವುದು, ಸಾರ್ಜನಿಕ ಆಸ್ತಿ ಪಾಸ್ತಿಗೆ ಹಾನಿ ಉಂಟುಮಾಡುವಂತಹ ಕ್ರಮದಲ್ಲಿ ತೊಡಗಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಬಂದ್ - ಮುಷ್ಕರ ನಡೆಸುತ್ತಿರುವುದು ಅತ್ಯಂತ ನೋವಿನ ಸಂಗತಿ. ಈ ಸಂದರ್ಭದಲ್ಲಿ ನಮ್ಮ ಸಾರಿಗೆ ವ್ಯವಸ್ಥೆಯ ಬಹುಮುಖ್ಯ ಅಂಗವಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ನಿಗಮಗಳ ಬಸ್ಸುಗಳು ಎಂದಿನಂತೆ ಕಾರ್ಯ ನಿರ್ವಹಿಸಬೇಕೆಂದು ಈಗಾಗಲೇ ಸೂಚಿಸಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಡ್ಡಾಯವಾಗಿ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಹೇಳಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಸಾರ್ವಜನಿಕರಿಗೆ ಅಗತ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಬಂದ್ -ಮುಷ್ಕರದಲ್ಲಿ ಭಾಗವಹಿಸುವ ಯಾರೊಬ್ಬರೂ ಸರ್ಕಾರಿ ಆಸ್ತಿ- ಪಾಸ್ತಿಗಳಿಗೆ ಅದರಲ್ಲೂ ವಿಶೇಷವಾಗಿ ಸಾರಿಗೆ ಬಸ್ಸುಗಳಿಗೆ ಹಾನಿ ಉಂಟುಮಾಡುವ ದುಷ್ಕೃತ್ಯಕ್ಕೆ ಮುಂದಾಗಬಾರದು. ಒಂದು ವೇಳೆ ಕಾನೂನು ಉಲ್ಲಂಘಿಸಿ ಅಹಿತಕರ ಘಟನೆಗಳಿಗೆ ಯತ್ನಿಸಿದ್ದಲ್ಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದು ಸವದಿ ಎಚ್ಚರಿಕೆ ನೀಡಿದ್ದಾರೆ.
ಈ ರೀತಿಯ ಬಂದ್ ಗಳಿಂದಾಗಿ ನಮ್ಮ ಸರ್ಕಾರಿ ಸಂಸ್ಥೆಗಳಿಗೆ ನಷ್ಟವಾಗುವುದಲ್ಲದೇ ರಾಷ್ಟ್ರದ ಆರ್ಥಿಕ ಚಟುವಟಿಕೆಗಳು ಅಧೋಗತಿಗೆ ತಲುಪುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಈ ಬಂದ್ ನಲ್ಲಿ ಭಾಗವಹಿಸಬಾರದು. ಈ ಸಂಸ್ಥೆಗಳ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಬಾರದು ಎಂದು ಲಕ್ಷ್ಮಣ ಸವದಿ ಮನವಿ ಮಾಡಿದರು.
ನಮ್ಮ ಸಾರಿಗೆ ನಿಗಮಗಳನ್ನು ಸರ್ಕಾರ ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆ ಎಂದು ಘೋಷಿಸಿದ್ದು, ಆ ಪ್ರಕಾರ ಸಮರ್ಪಕವಾದ ಸಾರಿಗೆ ಸೌಲಭ್ಯವನ್ನು ಒದಗಿಸುವುದು ಪ್ರತಿಯೊಬ್ಬ ಅಧಿಕಾರಿ ಹಾಗೂ ನೌಕರರ ಆದ್ಯ ಕರ್ತವ್ಯವಾಗಿದೆ. ಇದನ್ನು ಉಲ್ಲಂಘಿಸಿ ಕೆಲಸಕ್ಕೆ ಗೈರುಹಾಜರಾದರೆ ಅಂತಹವರ ವೇತನವನ್ನು ಕಡಿತಗೊಳಿಸಿ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಲಾಗುತ್ತಿದೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ