ಯೇಸು ಪ್ರತಿಮೆ
ಯೇಸು ಪ್ರತಿಮೆ

ಕಪಾಲಿಬೆಟ್ಟ ವಿವಾದ: ಹಿಂದೂಪರ ಸಂಘಟನೆಗಳಿಂದ ಕನಕಪುರ ಚಲೋ

ರಾಮನಗರ ಜಿಲ್ಲೆಯ ಕನಕಪುರ ಮತಕ್ಷೇತ್ರದ ಕಪಾಲಿಬೆಟ್ಟ(ಮುನೇಶ್ವರ  ಬೆಟ್ಟ)ದಲ್ಲಿ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ನಿರ್ಮಿಸಲು ಉದ್ದೇಶಿಸಿರುವ 'ಏಸು  ಪ್ರತಿಮೆ' ವಿರೋಧಿಸಿ ಕನಕಪುರ ಚಲೋ ಪ್ರತಿಭಟನಾ ಜಾಥಾ ಆರಂಭಿಸಿದ್ದು, ಆಡಳಿತಾರೂಢ ಬಿಜೆಪಿ ಸಹ ಇದಕ್ಕೆ  ಕೈಜೋಡಿಸಿದೆ.
Published on

ರಾಮನಗರ: ರಾಮನಗರ ಜಿಲ್ಲೆಯ ಕನಕಪುರ ಮತಕ್ಷೇತ್ರದ ಕಪಾಲಿಬೆಟ್ಟ(ಮುನೇಶ್ವರ  ಬೆಟ್ಟ)ದಲ್ಲಿ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ನಿರ್ಮಿಸಲು ಉದ್ದೇಶಿಸಿರುವ 'ಏಸು  ಪ್ರತಿಮೆ' ವಿರೋಧಿಸಿ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್  ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು, ಭಜರಂಗದಳ, ಶ್ರೀರಾಮಸೇನೆ, ರಾಷ್ಟ್ರೀಯ  ಸೇವಾಸಂಘ ಕನಕಪುರ ಚಲೋ ಪ್ರತಿಭಟನಾ ಜಾಥಾ ಆರಂಭಿಸಿದ್ದು, ಆಡಳಿತಾರೂಢ ಬಿಜೆಪಿ ಸಹ ಇದಕ್ಕೆ  ಕೈಜೋಡಿಸಿದೆ.

ರ್ಯಾಲಿಯಲ್ಲಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್, ರಾಮನಗರ ಬಿಜೆಪಿ  ಜಿಲ್ಲಾಧ್ಯಕ್ಷ ಎಂ.ರುದ್ರೇಶ್ , ಮಾಧ್ಯಮ ವಕ್ತಾರ ಅಶ್ವತ್ಥ ನಾರಾಯಣ್ ಸೇರಿದಂತೆ ಹಲವರು  ಭಾಗಿಯಾಗಿದ್ದಾರೆ.

ಕನಕಪುರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೊರಟು  ನಗರದ ಅಶೋಕ ಸ್ತಂಭ ವೃತ್ತ ತಲುಪಲಿದೆ‌. ಅಲ್ಲಿ ಬೃಹತ್ ಪ್ರತಿಭಟನ ಸಭೆಯನ್ನುದ್ದೇಶಿಸಿ  ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣ ಮಾಡಲಿದ್ದು ಸುಮಾರು ಐದು ಸಾವಿರಕ್ಕೂ‌ ಹೆಚ್ಚು ಜನ ಸೇರುವ  ನಿರೀಕ್ಷೆ‌ಯಿದೆ. ಸಭೆ ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನಕಾರರು ಮನವಿ  ಸಲ್ಲಿಸಲಿದ್ದಾರೆ.

ಮುನೇಶ್ವರ ರಕ್ಷಣೆ ನಮ್ಮೆಲ್ಲರ ಹೊಣೆ, ಶ್ರೀರಾಮ್ ಜಯರಾಮ್  ಎಂದು ಘೋಷಣೆ ಕೂಗಿದ ಪ್ರತಿಭಟನಕಾರರು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ  ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿದರು.

ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಗೆಲುವುಗಾಗಿಯೇ ಕನಕಪುರ ಚಲೋ ಹಮ್ಮಿಕೊಂಡಿದ್ದೇವೆ. ಹಿಂದೂ ಸಮಾಜದ ತಾಕತ್ತು ತೋರಿಸುತ್ತೇವೆ. ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ  ಮಾತ‌ನಾಡಿ, ಕನಕಪುರದ ಹುಯ್ಯಂಬಳ್ಳಿ ಹೋಬಳಿಯಲ್ಲಿ ಮತಾಂತರದ ಪಿಡುಗು ಹೆಚ್ಚಾಗಿದೆ‌. ಬಂಡೆ  ಬ್ರದರ್ಸ್ ವ್ಯಾಟಿಕನ್ ಬ್ರದರ್ಸ್ ಆಗಿದ್ದು ಸರ್ಕಾರದ ನೂರಾರು ಎಕರೆ ಜಾಗವನ್ನು  ಮತಾಂತರರಿಗೆ ನೀಡುತ್ತಿದ್ದಾರೆ. ಏಸು ಪ್ರತಿಮೆ ನಿರ್ಮಾಣದ ಹೆಸರಿನಲ್ಲಿ ದೊಡ್ಡಮಟ್ಟದ  ಮತಾಂತರದ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.

ಹಿಂದೂ ಪರ ಸಂಘಟನೆಗಳು ಮತಾಂತರ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿಯ ಬೆಂಬಲವೂ ಇದೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಕಣ್ಗಾವಲು ಹಾಕಿದೆ. ಪ್ರತಿಭಟನಕಾರರು ಸಾಗುವ ದಾರಿಯುದ್ದಕ್ಕೂ ಸಿಸಿಟಿವಿ ಅಳವಡಿಸಲಾಗಿದೆ. ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ  ಬಂದೋಬಸ್ತ್ ಒದಗಿಸಲಾಗಿದ್ದು, ಸುಮಾರು 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು  ನಿಯೋಜಿಸಲಾಗಿದೆ.

ಕರ್ತವ್ಯಕ್ಕೆ ಕೋಲಾರ, ತುಮಕೂರು ಬೆಂಗಳೂರು ಗ್ರಾಮಾಂತರ  ಜಿಲ್ಲೆಗಳಿಂದಲೂ ಪೊಲೀಸರ ನಿಯೋಜನೆ‌ ಮಾಡಲಾಗಿದೆ. ಶಾಂತಿ ಭಂಗ ಮಾಡುವವರ ವಿರುದ್ಧ ಕಾನೂನು  ಕ್ರಮ ಜರುಗಿಸಲಿದ್ದು ಶಾಂತಿಯುತ ಪ್ರತಿಭಟನೆಗಷ್ಟೆ ಅವಕಾಶ ಎಂದು ರಾಮನಗರ ಎಸ್ಪಿ  ಡಾ.ಅನೂಪ್ ಎ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com