ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ-ಸಡಗರ: ಗಣ್ಯರಿಂದ ಶುಭ ಹಾರೈಕೆ 

ನಾಡಿನೆಲ್ಲೆಡೆ ಬುಧವಾರ ಸಂಕ್ರಾಂತಿ ಹಬ್ಬದ ಸಡಗರ ಮನೆಮಾಡಿದೆ. ಸೂರ್ಯನು ತನ್ನ ಪಥ ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸುವ ದಿನ ಮಕರ ಸಂಕ್ರಮಣ.
ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ-ಸಡಗರ: ಗಣ್ಯರಿಂದ ಶುಭ ಹಾರೈಕೆ 
Updated on

ಬೆಂಗಳೂರು: ನಾಡಿನೆಲ್ಲೆಡೆ ಬುಧವಾರ ಸಂಕ್ರಾಂತಿ ಹಬ್ಬದ ಸಡಗರ ಮನೆಮಾಡಿದೆ. ಸೂರ್ಯನು ತನ್ನ ಪಥ ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸುವ ದಿನ ಮಕರ ಸಂಕ್ರಮಣ. ಸೂರ್ಯನು ತನ್ನ ಚಲನೆಯನ್ನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ದಿನವನ್ನು ನಮ್ಮ ದೇಶದಲ್ಲಿ ಮಕರ ಸಂಕ್ರಮಣ ಎಂದು ಆಚರಿಸುತ್ತೇವೆ. 


ಈ ಸಮಯದಲ್ಲಿ ರೈತರು ಜಮೀನಿನಲ್ಲಿ ಬೆವರು ಹರಿಸಿ ದುಡಿದು ಉಳುಮೆ ಮಾಡಿದ ಬೆಳೆಗಳು ಫಸಲು ಕೊಡುವ ಕಾಲ. ಪ್ರಕೃತಿಯು ತನ್ನ ಸೊಬಗನ್ನು ಮೈಚೆಲ್ಲಿ ನಿಂತಿರುತ್ತದೆ. ಇವುಗಳನ್ನು ಸಂಭ್ರಮಿಸಲು ಜನರು ಪ್ರಕೃತಿಯಲ್ಲಿ ಸಿಗುವ ಮತ್ತು ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ತಂದು ದೇವರ ಮುಂದೆ ಇಟ್ಟು ಪೂಜಿಸಿ ಮನೆಯವರು, ಬಂಧುಗಳು, ಸ್ನೇಹಿತರ ಜೊತೆ ಕೂಡಿ ಹೊಟ್ಟೆತುಂಬಾ ಊಟ, ತಿಂಡಿ ಮಾಡಿ ಸವಿಯುತ್ತಾರೆ.


ಹೀಗಾಗಿ ಮಕರ ಸಂಕ್ರಾಂತಿ ಹಬ್ಬವೆಂದರೆ ಒಂದು ರೀತಿಯಲ್ಲಿ ಪ್ರಕೃತಿ ಜೊತೆಗೆ ಮನುಷ್ಯನ ಸಂಬಂಧವನ್ನು ಇನ್ನಷ್ಟು ಬೆಸೆಯುವ ಹಬ್ಬವೆನ್ನಬಹುದು. ಈ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕದಲ್ಲಿ ಸುಗ್ಗಿ ಹಬ್ಬವೆಂದರೆ, ತಮಿಳು ನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು, ಆಂಧ್ರ ಪ್ರದೇಶದಲ್ಲಿ ಭೋಗಿ ಹಬ್ಬವೆಂದು ಕರೆಯುತ್ತಾರೆ.


ಇನ್ನು ಉತ್ತರದ ಕಡೆಗೆ ಹೋದರೆ ಗುಜರಾತೀಯರಿಗೆ ಮಕರ ಸಂಕ್ರಾಂತಿ ಪ್ರಮುಖ ಹಬ್ಬಗಳಲ್ಲಿ ಒಂದು. ಅಲ್ಲಿ ಅದನ್ನು ಉತ್ತರಾಯಣವೆಂದು ಕರೆಯುತ್ತಾರೆ. ಇಲ್ಲಿ ಮಕ್ಕಳು, ಹೆಂಗಳೆಯರು, ಪುರುಷರು, ಇಳಿ ವಯಸ್ಸಿನವರೆಲ್ಲರೂ ಸೇರಿ ಗಾಳಿಪಟ ಹಾರಿಸಿ ಸಂಭ್ರಮಿಸುವುದು ನೋಡಲು ಎರಡು ಕಣ್ಣು ಸಾಲದು. ಪಂಜಾಬ್ ನಲ್ಲಿ ಲೊಹ್ರಿ, ಅಸ್ಸಾಂಗರು ಈ ಹಬ್ಬಕ್ಕೆ ಮಾಘು ಬಿಹು ಎಂದು ಕರೆದರೆ ಇಲ್ಲಿನ ಸಿಖ್ ಸಮುದಾಯದವರು ವೈಸಾಖಿ ಎನ್ನುತ್ತಾರೆ.


ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಗಣ್ಯರು ಮಕರ ಸಂಕ್ರಾಂತಿ ಪ್ರಯುಕ್ತ ಶುಭಾಶಯ ತಿಳಿಸಿದ್ದಾರೆ.


ಗುಜರಾತ್ ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ಬಳಿ ವರ್ಣಮಯ ಉತ್ತರಾಯಣ ಆಚರಣೆಯ ಚಿತ್ರಗಳನ್ನು ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ. ಕನ್ನಡ ಜನತೆಗೆ ಕೂಡ ಶುಭಾಶಯ ತಿಳಿಸಿದ್ದಾರೆ. 


ರಾಷ್ಟ್ರಪತಿಗಳು ಟ್ವೀಟ್ ಮಾಡಿ ದೇಶದ ನಾಗರಿಕರಿಗೆ ಶುಭಾಶಯ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿ, ಎಲ್ಲರ ಬದುಕು ಅಭಿವೃದ್ಧಿಯತ್ತ ಸಾಗಲಿ ಎಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com