ಮುಧೋಳ: ಬೈಪಾಸ್ ರಸ್ತೆ ನಿರ್ಮಾಣ; ಕಾರಜೋಳರೇ ಪಿಡಬ್ಲೂಡಿ ಮಂತ್ರಿಯಾಗಿ ಬರಬೇಕಾಯ್ತು

ದಿನದಿಂದ ದಿನಕ್ಕೆ ವಾಣಿಜ್ಯ ನಗರವಾಗಿ ಬೆಳೆಯುತ್ತಿರುವ ಮುಧೋಳ ನಗರದ ಮುಖ್ಯ ರಸ್ತೆಯಲ್ಲಿನ ವಾಹನ ದಟ್ಟಣೆ ತಪ್ಪಿಸಲು ಬೈಪಾಸ್ ರಸ್ತೆ ನಿರ್ಮಾಣ ಆಗಬೇಕು ಎನ್ನುವ ಬಹು ವರ್ಷಗಳ ಕನಸು ನನಸಾಗಲು ಕ್ಷೇತ್ರದ ಶಾಸಕರಾಗಿರುವ ಗೋವಿಂದ ಕಾರಜೋಳ ಅವರೇ ಪಿಡಬ್ಲೂಡಿ ಮಂತ್ರಿಯಾಗಿ ಬರಬೇಕಾಯ್ತು.
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ
Updated on

ಬಾಗಲಕೋಟೆ : ದಿನದಿಂದ ದಿನಕ್ಕೆ ವಾಣಿಜ್ಯ ನಗರವಾಗಿ ಬೆಳೆಯುತ್ತಿರುವ ಮುಧೋಳ ನಗರದ ಮುಖ್ಯ ರಸ್ತೆಯಲ್ಲಿನ ವಾಹನ ದಟ್ಟಣೆ ತಪ್ಪಿಸಲು ಬೈಪಾಸ್ ರಸ್ತೆ ನಿರ್ಮಾಣ ಆಗಬೇಕು ಎನ್ನುವ ಬಹು ವರ್ಷಗಳ ಕನಸು ನನಸಾಗಲು ಕ್ಷೇತ್ರದ ಶಾಸಕರಾಗಿರುವ ಗೋವಿಂದ ಕಾರಜೋಳ ಅವರೇ ಪಿಡಬ್ಲೂಡಿ ಮಂತ್ರಿಯಾಗಿ ಬರಬೇಕಾಯ್ತು.

ಕಳೆದ ಎರಡು ದಶಕಗಳಿಂದಿಚೆಗೆ ಮುಧೋಳ ನಗರ ಕೃಷಿ, ಕೈಗಾರಿಕೆ ಸೇರಿದಂತೆ ವಾಣಿಜ್ಯ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದೆ. ನಗರ ಬೆಳೆದಂತೆಲ್ಲ ನಗರದಲ್ಲಿ ಹಾಯ್ದು ಹೋಗುವ ವಿಜಯಪುರ- ಲೋಕಾಪುರ ಹೆದ್ದಾರಿಯಲ್ಲಿ ದಟ್ಟಣೆ ಕೂಡ ಹೆಚ್ಚಾಗಿದೆ. ಪರಿಣಾಮವಾಗಿ ರಸ್ತೆ ಅಪಘಾತಗಳ ಸಂಖ್ಯೆಕೂಡ ಅಧಿಕಗೊಂಡಿದೆ. ವಾಹನ ದಟ್ಟಣೆ ಹಾಗೂ ಅಪಘಾತಗಳನ್ನು ತಪ್ಪಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಎನ್ನುವುದು ಸಾರ್ವಜನಿಕರ ಹಕ್ಕೋತ್ತಾಯವಾಗಿದೆ.

 ಕಳೆದ ಹತ್ತು ವರ್ಷಗಳಿಂದಿಚೆಗೆ ಮುಧೋಳ ನಗರಕ್ಕೆ ಬೈಪಾಸ್ ಹೆದ್ದಾರಿ ಮಾಡಬೇಕು ಎನ್ನುವ ಕೂಗು ದಿನದಿಂದ ದಿನಕ್ಕೆ ಗಟ್ಟಿಯಾಗಿ ಕೇಳಿ ಬರುತ್ತಿದೆ. ಈ ವಿಷಯ ರಾಜಕೀಯ ದಾಳವಾಗಿ ಪರಿಣಮಿಸಿದ್ದು ಮಾತ್ರ ದುರದೃಷ್ಟಕರ ಸಂಗತಿ

ಬೈಪಾಸ್ ರಸ್ತೆಯನ್ನು ರಾಜಕೀಯ ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿರುವುದನ್ನು ಸಹಿಸದ ಮುಧೋಳ ಜನತೆ ಪಕ್ಷಾತೀತವಾಗಿ ವೇದಿಕೆ ರಚಿಸಿಕೊಂಡು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮುಂದಾದರು. ಪಕ್ಷಾತೀತ ಪ್ರತಿಭಟನೆಗೆ ಕ್ಷೇತ್ರದ ಶಾಸಕರಾಗಿರುವ ಗೋವಿಂದ ಕಾರಜೋಳ, ಅಂದು ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಆರ್.ಬಿ. ತಿಮ್ಮಾಪುರ ಕೂಡ ಹೋರಾಟವನ್ನು ಬೆಂಬಲಿಸಿದರು.

ಬಳಿಕ ಮೇಲ್ಮನೆ ಸದಸ್ಯ ಆರ್.ಬಿ. ತಿಮ್ಮಾಪುರ ಕಳೆದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದರಾದರೂ ಭೂಸ್ವಾದೀನ ಸೇರಿದಂತೆ ಪರಿಹಾರ ಹಂಚಿಕೆ ಸ್ಥಗಿತಗೊಂಡಿತ್ತು. 

ಕಾಂಗ್ರೆಸ್ –ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಲೇ ಕ್ಷೇತ್ರದ ಶಾಸಕರೇ ಆಗಿರುವ ಗೋವಿಂದ ಕಾರಜೋಳರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಷ್ಟೆ ಅಲ್ಲ ಉಪಮುಖ್ಯಮಂತ್ರಿ ಆಗುವ ಜತೆಗೆ ಲೋಕೋಪಯೋಗಿ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದರು. ಕೇಳಬೇಕೆ ಕಾರಜೋಳರೇ ಲೋಕೋಪಯೋಗಿ ಸಚಿವರಾದ ಬಳಿಕ ಇನ್ನೇನು ಬೈಪಾಸ್ ರಸ್ತೆ ಆಗಲಿದೆ ಎನ್ನುವ ಹೊಸ ಭರವಸೆಯೊಂದು ಜನತೆಯಲ್ಲಿ ಮೂಡಿದೆ.

ಜನತೆಯ ನಂಬಿಕೆ ಹಾಗೂ ವಿಶ್ವಾಸದಂತೆ ಇದೀಗ ಲೋಕೋಪಯೋಗಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ೧೦.೨೦ ಕಿ.ಮೀ ಉದ್ದದ ೪೫ ಮೀಟರ್ ಅಗಲದ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಜನವರಿ ೨೫ ರಂದು ಭೂಮಿಪೂಜೆಗೆ  ಮುಹೂರ್ತ ಫಿಕ್ಸ್ ಮಾಡಿದ್ದಾರೆ. 

ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಬರಿ ಭೂಮಿ ಪೂಜೆಗೆ ಮಾತ್ರ ಸೀಮಿತವಾಗದೇ ಈ ಬಾರಿಯಾದರೂ ರಸ್ತೆ ನಿರ್ಮಾಣವಾಗಿ ನಗರದ ಮುಖ್ಯರಸ್ತೆಯಲ್ಲಿನ ವಾಹನ ಸಂಚಾರ ದಟ್ಟಣೆ ಕಡಿಮೆ ಆಗಲಿ ಎನ್ನುವುದು ಜನತೆಯ ಆಶಯವಾಗಿದೆ. 

ಲೋಕೋಪಯೋಗಿ ಸಚಿವರೂ ಆಗಿರುವ ಡಿಸಿಎಂ ಕಾರಜೋಳರು ಹೆಚ್ಚಿನ ಮುತುವರ್ಜಿ ವಹಿಸಿ ಜನತೆಯ ಆಶಯವನ್ನು ಕಾರ್ಯಾನುಷ್ಠಾನಕ್ಕೆ ತರಬೇಕು. ಅಂದಾಗ ಮಾತ್ರ ನಗರದಲ್ಲಿನ ವಾಹನ ದಟ್ಟಣೆ ತಪ್ಪಿ, ಜನತೆಯಲ್ಲಿ ನಿರಾಳ ಭಾವ ಮೂಡಲು ಸಾಧ್ಯವಾಗಲಿದೆ

ವರದಿ:ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com