ಬಾಂಬರ್ ಆದಿತ್ಯಾ ರಾವ್ ಹುಟ್ಟುಹಾಕಿರುವ, ಉತ್ತರ ಸಿಗದ ಪ್ರಶ್ನೆಗಳು

ನಾಟಕೀಯ ರೀತಿಯಲ್ಲಿ ಸಿನಿಮೀಯ ಮಾದರಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ಆತಂಕ ಮೂಡಿಸಿದ್ದ ಮಂಗಳೂರು ವಿಮಾನ ನಿಲ್ದಾಣದ ಸಜೀವ ಬಾಂಬ್‌ ಪತ್ತೆ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಂತೆ....
ಆದಿತ್ಯ ರಾವ್
ಆದಿತ್ಯ ರಾವ್
Updated on

ಬೆಂಗಳೂರು: ನಾಟಕೀಯ ರೀತಿಯಲ್ಲಿ ಸಿನಿಮೀಯ ಮಾದರಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ಆತಂಕ ಮೂಡಿಸಿದ್ದ ಮಂಗಳೂರು ವಿಮಾನ ನಿಲ್ದಾಣದ ಸಜೀವ ಬಾಂಬ್‌ ಪತ್ತೆ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಂತೆ, ಘಟನೆ ಕುರಿತಾಗಿ ರಾಜಕೀಯ ನಾಯಕರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ಸಹಜ ಮತ್ತು ಸಲೀಸಾಗಿಯೇ ಪೊಲೀಸರಿಗೆ ಶರಣಾಗಿರುವ ಭಯೋತ್ಪಾದಕ ಆದಿತ್ಯರಾವ್ ನಡೆ ಸಾಕಷ್ಟು ಅನುಮಾನ ಮೂಡಿಸಿದೆ. ಅಣಕು ಪ್ರದರ್ಶನ ಮಿಣಿಮಿಣಿ ಪಟಾಕಿ ಕೇಸ್‌ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒತ್ತಿ ಒತ್ತಿ ಹೇಳುತ್ತಿದ್ದಾರೆ.

ಆದರೆ ಈತ ಅಷ್ಟೊಂದು ಸುಲಭವಾಗಿ  ಪೊಲೀಸರ ಮುಂದೆ ಹೋಗಿದ್ದಾದರೂ ಹೇಗೆ ಎಂಬ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದ್ದಾನೆ. ಸಾರ್ವತ್ರಿಕವಾಗಿ ಹತ್ತು ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. 

1. ತನಿಖೆಗೂ ಮೊದಲೇ ಸಿಎಎಗೂ ಬಾಂಬ್ ಸ್ಫೋಟಕ್ಕೂ ನಂಟು ಕಲ್ಪಿಸಿದ ಸಂಸದ ಪ್ರಹ್ಲಾದ್ ಜೋಶಿ
ಸಂಸದ ಪ್ರಹ್ಲಾದ್ ಜೋಷಿ ಬಾಂಬ್ ಸ್ಫೋಟದ ತನಿಖೆಯ ವರದಿ ಹೊರಬೀಳುವ ಮೊದಲೇ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಗಲಭೆಯಲ್ಲಿ ಪಾಲ್ಗೊಂಡವರೇ ಈ ಕೃತ್ಯ ನಡೆಸಿದ್ದಾರೆ ಎಂದು  ಹೇಳಿಕೆ ನೀಡಿದ್ದಾರೆ. ಹಾಗಾದರೆ ಸಂಸದರಿಗೆ ಸಿಎಎಯಲ್ಲಿ ಭಾಗಿಯಾದವರೇ ಬಾಂಬ್ ಇಟ್ಟಿದ್ದಾರೆ ಎಂದು ಹೇಳಿದ್ದಾದರೂ ಏಕೆ?

2. ಅನುಮಾನ ಮೂಡಿಸಿದ ಗೃಹಸಚಿವರ ಮಾನಸಿಕ ಅಸ್ವಸ್ಥ ಹೇಳಿಕೆ
ಆದಿತ್ಯರಾವ್ ಬಂಧನದ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದಿತ್ಯರಾವ್ ವೈದ್ಯಕೀಯ ಪರೀಕ್ಷೆಗೂ ಮೊದಲೇ ಆರೋಪಿ ಮಾನಸಿಕ ಅಸ್ವಸ್ಥ. ನಿರುದ್ಯೋಗದಿಂದಾಗಿ ಮಾನಸಿಕ ಅಸ್ವಸ್ಥನಾಗಿ ಬಾಂಬ್ ಇಟ್ಟಿದ್ದಾನೆ ಎಂದರು. ಆದರೆ ಆದಿತ್ಯರಾವ್ ಮಾನಸಿಕ ಅಸ್ವಸ್ಥತೆ ಬಗ್ಗೆ ಏನೂ ಹೇಳಲಾಗದು ಎಂದು ಖುದ್ದು ವೈದ್ಯರೇ ಹೇಳಿದ್ದಾರೆ. 
ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ವೈದ್ಯರು ಪ್ರಶ್ನಿಸಿದಾಗ, ‘ನನಗೇನೂ ಆಗಿಲ್ಲ. ಚೆನ್ನಾಗಿದ್ದೇನೆ’ ಎಂದು ರಾವ್ ಬಹಳ ವಿಶ್ವಾಸದಿಂದ ಹೇಳಿದ್ದಾನೆ. ಅಷ್ಟಕ್ಕೂ ಆದಿತ್ಯರಾವ್ ಸ್ಫೋಟಕ ತಯಾರಿ ಕುರಿತು ಆಳವಾದ ಸಂಶೋಧನೆ ನಡೆಸಿ ಆತ ಸಾಕಷ್ಟು ಮಾಹಿತಿ ತಿಳಿದುಕೊಂಡಿದ್ದಾನೆ. ಆತನ ಜ್ಞಾನ ಕಂಡು ನಮಗೆ ಕಳವಳ ಉಂಟಾಗಿದೆ" ಇದು ಮಂಗಳೂರು ಪೊಲೀಸ್ ಆಯುಕ್ತ ಪಿ. ಎಸ್. ಹರ್ಷ ಅವರೇ ಸ್ಪಷ್ಟಪಡಿಸಿದ್ದಾರೆ. ಇಷ್ಟೊಂದು ಚಾಣಾಕ್ಷ್ಯತನವಿರುವ ಆದಿತ್ಯರಾವ್ ಹಾಗಾದರೆ ಮಾನಸಿಕ ಅಸ್ವಸ್ಥನೇ?

3. ಎಸ್‌ಡಿಪಿಐ ಕಾರ್ಯಕರ್ತರ ಬಂಧನ ವಿಚಾರವಾಗಿ ಮುಗಿಬಿದ್ದ ಬಿಜೆಪಿ ನಾಯಕರು ಆದಿತ್ಯರಾವ್ ವಿಚಾರದಲ್ಲಿ ಜಾಣನಡೆ ಅನುಸರಿಸುತ್ತಿರುವುದಾದರೂ ಏಕೆ?
ಆದಿತ್ಯರಾವ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು ಆತನ ಕುಟುಂಬಕ್ಕೂ ಆರ್‌ಎಸ್‌ಎಸ್‌ಗೂ ಹಿನ್ನಲೆಯಿದೆ ಎಂದು ಕಾಂಗ್ರೆಸ್-ಜೆಡಿಎಸ್ ಆರೋಪಿಸುತ್ತಿವೆ. ಸಿಎಎ ವಿಚಾರದಲ್ಲಿ ಮುಸ್ಲಿಂ‌ ಸಮುದಾಯವನ್ನು ಗುರಿಯಾಗಿಸಿಕೊಂಡೇ ಬಾಂಬ್ ಸ್ಫೋಟದ ಸಂಚನ್ನು ರೂಪಿಸಲಾಗಿತ್ತು. ಆರೋಪಿ ಹಿಂದೂ ಅಲ್ಲದೇ ಮುಸ್ಲಿಂ ಸಮುದಾಯದವನಾಗಿದ್ದರೆ ಬಿಜೆಪಿ ಸುಮ್ಮನೆ ಬಿಡುತ್ತಿತ್ತೇ? ಎಂದು ಪ್ರಶ್ನಿಸುತ್ತಿದ್ದಾರೆ.

4.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ ಎಂದು ಹೇಳುವ ಪೊಲೀಸರ ಕಣ್ತಪ್ಪಿಸಿ ಉಡುಪಿಯಿಂದ ಬೆಂಗಳೂರಿಗೆ ಸುಲಭವಾಗಿ ಬಂದಿದ್ದು ಹೇಗೆ? ಮಂಗಳೂರಿನಿಂದ ಬೆಂಗಳೂರಿಗೆ ಬಂದು ಶರಣಾಗುವ ಪ್ರಮೇಯ ಏನಿತ್ತು? ಪೊಲೀಸ್‌ ಮಹಾನಿರ್ದೇಶಕರ ಕಚೇರಿಗೆ ಯಾಕೆ ಬಂದ? ಆತನನ್ನು ಕರೆದುಕೊಂಡು ಬಂದವರು ಯಾರು ಎಂಬಿತ್ಯಾದಿ ಹಲವು ಪ್ರಶ್ನೆಗಳು ಮೂಡಿವೆ.

ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಶಿವಮೊಗ್ಗ, ಸಾಗರದಿಂದ ಬೆಂಗಳೂರಿಗೆ ಬಸ್ ರೈಲುಮಾರ್ಗವಾಗಿ ಬೆಂಗಳೂರು ತಲುಪಿದ್ದಾನೆ. ಶಿವಮೊಗ್ಗ ಮಂಗಳೂರಿನಲ್ಲಿ ಸಿಸಿ ಕ್ಯಾಮೆರಾ ಪೊಲೀಸರ ಶೋಧದ ಕಣ್ತಪ್ಪಿಸಿ ಸುಲಭವಾಗಿ ಆದಿತ್ಯರಾವ್ ಬೆಂಗಳೂರಿಗೆ ಹೋಗಿದ್ದು ಹೇಗೆ? ಬೆಂಗಳೂರಿನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಹದ್ದುಗಣ್ಣಂತೆ ಕಾರ್ಯನಿರ್ವಹಿಸುತ್ತಿವೆ. ಯಾರೂ ತಪ್ಪಿಸಿಕೊಂಡು ಹೋಗಲು ಸಾಧ್ಯವೇ ಇಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಸ್‌ಡಿಪಿಐ ಕಾರ್ಯಕರ್ತರ ಬಂಧನದ ವೇಳೆ ಅತಿಯಾದ ವಿಶ್ವಾಸ ವ್ಯಕ್ತಪಡಿಸಿದ್ದರು. ಪೊಲೀಸ್ ಮಹಾನಿರ್ದೇಶಕರ ಕಚೇರಿವರೆಗೆ ಸಲೀಸಾಗಿ ಸಿಸಿಟಿವಿ ಕಣ್ತಪ್ಪಿಸಿ ಹೋಗಿದ್ದು ಹೇಗೆ?

ಬಾಂಬರ್ ಫೋಟೋ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದ್ದರೂ ಯಾರೂ ಆರೋಪಿಯನ್ನು ಗುರುತಿಸಲಿಲ್ಲ ಎನ್ನುವ ಅನುಮಾನ ಕಾಡುತ್ತಿದೆ. 

5. ಸಿಎಎ ಹೋರಾಟಕ್ಕೆ ಕಳಂಕ ತರುವ ಉದ್ದೇಶದಿಂದ ಯಾವುದಾದರೂ ಕೋಮುವಾದಿ ಸಂಘಟನೆ ಆದಿತ್ಯರಾವ್‌ನ್ನು ಬಳಸಿ ಬಾಂಬ್ ಸಂಚು ರೂಪಿಸಿತ್ತೇ? ಯಾರ ಸಹಕಾರವೂ ಇಲ್ಲದೇ ಆತ ಅಷ್ಟು ಸುಲಭವಾಗಿ ಬಾಂಬ್ ಇಡಲು ವಿಮಾನ ನಿಲ್ದಾಣದಲ್ಲಿ ಇವನಿಗೆ ಸಹಕಾರ ಸಿಕ್ಕಿದ್ದು ಹೇಗೆ? ಒಂದು ವೇಳೆ ಆದಿತ್ಯನನ್ನೇ ನಿಜವಾಗಿಯೂ ಟ್ರ್ಯಾಪ್ ಮಾಡುವುದಾಗಿದ್ದರೆ ಆತನ ಹುಡುಕಾಟ ಸುಲಭವಿತ್ತು. ಆದಿತ್ಯರಾವ್ ಬದಲಿಗೆ ಬೇರೆ ಯಾರನ್ನಾದರೂ ಸಿಲುಕಿಸುವ ಹುನ್ನಾರವಿತ್ತೇ?. ಹೀಗೆ ಹತ್ತು ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com