ರಾಜ್ಯದಲ್ಲೇ ಮೊದಲು: ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆನ್ನುಹುರಿ ಶಸ್ತ್ರಚಿಕಿತ್ಸೆ 

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ತಾಲ್ಲೂಕು ಹಂತದ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ ಸ್ಪೈನಲ್ ಕಾರ್ಡ್ (ಬೆನ್ನು ಹುರಿ ಚಿಕಿತ್ಸೆ) ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗಿದೆ.
ಆಪರೇಶನ್ ಢಿಯೇಟರ್
ಆಪರೇಶನ್ ಢಿಯೇಟರ್

ಗಂಗಾವತಿ: ಉತ್ತಮ ಚಿಕಿತ್ಸೆ, ಗುಣಮಟ್ಟದ ಸೇವೆ, ಸ್ವಚ್ಛತೆ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಅತ್ಯುತ್ತಮ ನಿರ್ವಹಣೆಯ ಮೂಲಕ ರಾಜ್ಯದ ಗಮನ ಸೆಳೆಯುತ್ತಿರುವ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ವೈದ್ಯರು, ಇತ್ತೀಚೆಗಷ್ಟೆ ರಾಜ್ಯದಲ್ಲಿ ಮೊದಲ ಬಾರಿಗೆ ತಾಲ್ಲೂಕು ಹಂತದ ಆಸ್ಪತ್ರೆಯಲ್ಲಿ ಮೊಣಕಾಲಿನ ಮಂಡಿ ಚಿಪ್ಪು (ನೀ ರಿಪ್ಲೇಸ್ ಮೆಂಟ್) ಪೂರ್ಣ ಬದಲಿಸುವ ಚಿಕಿತ್ಸೆಯನ್ನು ನೆರವೇರಿಸಿ ಗಮನ ಸೆಳೆದಿದ್ದರು. 

ಇದೀಗ ಒಂದೇ ದಿನಕ್ಕೆ ಎರಡು ವಿಭಿನ್ನ ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿದ ಇಲ್ಲಿನ ಉಪ ವಿಭಾಗ ಆಸ್ಪತ್ರೆಯ ವೈದ್ಯರು, ಒಂದೇ ದಿನದಲ್ಲಿ ಎರಡೆರಡು ಸಾಧನೆ ಮಾಡಿ ದಾಖಲೆ ಸೃಷ್ಟಿಸಿದ್ದಾರೆ. ಒಂದು ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸೆ ನೆರವೇರಿಸಿದರೆ, ದೈಹಿಕವಾಗಿ ಕುಳ್ಳಗಿರುವ ಮಹಿಳೆಗೆ ಹೆರಿಗೆ ಮಾಡಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. 

ರಾಜ್ಯದ ಯಾವುದೇ ತಾಲ್ಲೂಕು ಆಸ್ಪತ್ರೆಗಳಲ್ಲಿ ಇದುವರೆಗೂ ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ ಉದಾಹರಣೆ ಇಲ್ಲ. ಆದರೆ ಇದೇ ಮೊದಲ ಬಾರಿಗೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಈ ಕೆಲಸ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ ಹೊಸಗೇರಪ್ಪ ಎಂಬ 24 ವರ್ಷದ ವಯಸ್ಸಿನ ವ್ಯಕ್ತಿಗೆ ಶುಕ್ರವಾರ ಎರಡು ಗಂಟೆಗಳ ಕಾಲ ವೈದ್ಯರು, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಶಸ್ತ್ರಚಿಕಿತ್ಸೆಯಲ್ಲಿ ತಜ್ಞರಾದ ವಿಜಯ, ಮಲ್ಲಿಕಾರ್ಜುನ, ಸಲಾವುದ್ದೀನ್, ರೇಣುಕಾರಾಧ್ಯ, ಸುಜಾತಾ ಪಾಲ್ಗೊಂಡಿದ್ದರು. 

ಅತಿಕುಳ್ಳಗಿನ ಮಹಿಳೆಗೆ ಹೆರಿಗೆ:
ಮತ್ತೊಂದು ಪ್ರಕರಣದಲ್ಲಿ ಕೇವಲ 121 ಸೆಂಟಿ ಮೀಟರ್ ಎತ್ತರ ಇರುವ ತಾಲ್ಲೂಕಿನ ಬಂಡ್ರಾಳ ಗ್ರಾಮದ ಮಹಿಳೆ ನೇತ್ರಾವತಿ (ಕೊಪ್ಪಳ ತಾಲ್ಲೂಕಿನ ಬಸಲಾಪುರ ಪತಿಯ ಮನೆ) ಎಂಬುವವರಿಗೆ ಕಷ್ಟಸಾಧ್ಯವಾಗಿದ್ದ ಹೆಸರಿಗೆಯನ್ನು ಇಲ್ಲಿನ ವೈದ್ಯರು ಮಾಡಿದ್ದಾರೆ. 

121 ಸೆಂಟಿ ಮೀಟರ್ ಎಂದರೆ ಕೇವಲ ನಾಲ್ಕು ಅಡಿ ಮಾತ್ರ. ಆದರೆ ಒಬ್ಬ ಸಹಜವಾದ ಮಹಿಳೆಗೆ ಹೆರಿಗೆ ಮಾಡಿಸಬೇಕು ಎಂದರೆ ಆಕೆ ಕನಿಷ್ಟ 140 ಸೆಂಟಿ ಮೀಟರ್ ಇರಲೇಬೇಕು. ಇಲ್ಲವಾದಲ್ಲಿ ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಿವೆ ವೈದ್ಯಕೀಯ ಮೂಲಗಳು. 

ಕೇವಲ ನಾಲ್ಕು ಅಡಿ ಎತ್ತರ ಇರುವ ಮಹಿಳೆ ಗರ್ಭಧಾರಣೆ ಮಾಡಿದಾಗ ಎತ್ತರದ ಸಮಸ್ಯೆಯಿಂದಾಗಿ ಆಕೆಯ ಹೊಟ್ಟೆ ಅಥವಾ ಗರ್ಭದಲ್ಲಿರುವ ಶಿಶುವಿಗೆ ಅಪಾಯವಾಗಿ ತಾಯಿಗೆ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆ ಇದು ಸವಾಲಿನ ಕಷ್ಟಸಾಧ್ಯ ಎಂದು ವೈದ್ಯರು ಹೇಳುತ್ತಾರೆ. 

ಇದನ್ನು ಸವಾಲಾಗಿ ಸ್ವೀಕರಿಸಿದ ವೈದ್ಯರು, ಆ ಮಹಿಳೆಯನ್ನು ಗುರುತಿಸಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹೆಣ್ಣುಮಗುವನ್ನು ಯಶಸ್ವಿಯಾಗಿ ಹೊರಕ್ಕೆ ತೆಗೆದಿದ್ದಾರೆ. ಇದೀಗ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. 

ವರದಿ: ಎಂ.ಜೆ. ಶ್ರೀನಿವಾಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com