ಶೀಳನೆರೆ ಬಳಿ ಅರಣ್ಯ ಭೂಮಿ ನುಂಗಿದ ಶಾಸಕ ಕೆ.ಸಿ.ನಾರಾಯಣಗೌಡ.!

ಕೃಷ್ಣರಾಜಪೇಟೆ ತಾಲೂಕು ಶೀಳನೆರೆ ಬಳಿ ಶಾಸಕ ಕೆ.ಸಿ.ನಾರಾಯಣಗೌಡರು ಸುಮಾರು 55 ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಭೋಗ್ಯ ಮತ್ತು ಕ್ರಯಮಾಡಿಸಿಕೊಂಡಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪಿಸಿದರು.
ಶೀಳನೆರೆ ಬಳಿ ಅರಣ್ಯ ಭೂಮಿ ನುಂಗಿದ ಶಾಸಕ ಕೆ.ಸಿ.ನಾರಾಯಣಗೌಡ.!
ಶೀಳನೆರೆ ಬಳಿ ಅರಣ್ಯ ಭೂಮಿ ನುಂಗಿದ ಶಾಸಕ ಕೆ.ಸಿ.ನಾರಾಯಣಗೌಡ.!
Updated on

ಮಂಡ್ಯ: ಕೃಷ್ಣರಾಜಪೇಟೆ ತಾಲೂಕು ಶೀಳನೆರೆ ಬಳಿ ಶಾಸಕ ಕೆ.ಸಿ.ನಾರಾಯಣಗೌಡರು ಸುಮಾರು 55 ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಭೋಗ್ಯ ಮತ್ತು ಕ್ರಯಮಾಡಿಸಿಕೊಂಡಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಶಾಸಕ ಕೆ.ಸಿ.ನಾರಾಯಣಗೌಡರು ಅರಣ್ಯ ಭೂಮಿಯನ್ನು ಅಕ್ರಮವಾಗಿ ಭೋಗ್ಯ ಮತ್ತು ಕ್ರಯ ಮಾಡಿಕೊಂಡಿರುವ ಕುರಿತು ದಾಖಲೆಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು  ಅರಣ್ಯಭೂಮಿಯ ಅಕ್ರಮ ವಹಿವಾಟು ಜೊತೆಗೆ ಅಲ್ಲಿದ್ದ ಮರಗಳನ್ನು ಸರ್ಕಾರದ ಅನುಮತಿಪಡೆಯದೆ ಕಡಿದು ಸಾಗಿಸಿದ್ದಾರೆ ಎಂದು ದೂರಿದದರು.

ಕೃಷ್ಣರಾಜಪೇಟೆ ತಾಲೂಕು ಶೀಳನೆರೆ ಹೋಬಳಿ, ಮಾದಿಗರ ಹೊಸಹಳ್ಳಿ ಗ್ರಾಮದ ಸರ್ವೇ ನಂ.14 ಮತ್ತು ಅದರ ಸುತ್ತ 55 ಎಕರೆ ಭೂಮಿಯನ್ನು ಎಚ್.ಟಿ.ವೆಂಕಟೇಶ್ ಎಂಬುವವರಿಂದ 999 ವರ್ಷಗಳವರೆಗೆ ಭೋಗ್ಯಕ್ಕೆ ಕೇವಲ ಹತ್ತು ಲಕ್ಷ ರೂಗಳಿಗೆ ಕೆ.ಸಿ.ನಾರಾಯಣಗೌಡ ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿ ಖರೀದಿಸಿದ್ದಾರೆ ಎಂದು ಆರೋಪಿಸಿದರು.
ಕೆ.ಸಿ.ನಾರಾಯಣಗೌಡರು ತನ್ನ ಹೆಸರಿನಲ್ಲಿ 24, ಪತ್ನಿ ದೇವಕಿ ಹೆಸರಿನಲ್ಲಿ 25 ಎಕರೆ ಭೂಮಿಯನ್ನು ಅಕ್ರಮವಾಗಿ ಭೋಗ್ಯ ಮಾಡಿಕೊಂಡಿದ್ದು, ಮಕ್ಕಳಾದ ಕೋಯಿಲ್, ನೇಹಾ ಹೆಸರಿನಲ್ಲಿ 6 ಎಕರೆ ಭೂಮಿಯನ್ನು ಖರೀದಿಸಿದ್ದಾರೆಂದು ಆಪಾದಿಸಿದರು.

ಸರ್ವೇ ನಂ.14ರಲ್ಲಿ 223 ಎಕರೆ 30 ಗುಂಟೆ ಅರಣ್ಯ ಭೂಮಿಯಾಗಿರುತ್ತದೆ. 1982ರಲ್ಲಿ ಸರಕಾರವು ಈ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ. ಪ್ರಸ್ತುತ ಇದು ಮೇಲುಕೋಟೆ ವನ್ಯಜೀವಿ ವಿಭಾಗದ ನಾರಾಯಣದುರ್ಗ ಮೀಸಲು ಅರಣ್ಯಕ್ಕೆ ಸೇರಿದೆ ಎಂದು ಅವರು ತಿಳಿಸಿದರು.

ಅರಣ್ಯವನ್ನು ರಕ್ಷಿಸಬೇಕಾದವರು ಕಾನೂನು ಬಾಹಿರವಾಗಿ ಖರೀದಿಸಲು ಪ್ರಯತ್ನಿಸುವುದು ಮತ್ತು ಅದನ್ನು ಭೋಗ್ಯಕ್ಕೆ ಪಡೆದಿರುವುದು ಅಕ್ರಮವಾಗಿರುತ್ತದೆ. ಇದೇ ಸರ್ವೇ ನಂ.14ರ ಅಕ್ಕಪಕ್ಕದಲ್ಲಿರುವ ಜಮೀನುಗಳೂ ಸರಕಾರದಿಂದ ಮಂಜೂರಾಗಿರುವ ಜಮೀನುಗಳಾಗಿದ್ದು, ಅಕ್ರಮ ನಡೆದಿರಬಹುದೆಂದು ಅವರು ಅನುಮಾನ ವ್ಯಕ್ತಪಡಿಸಿದರು.

ಭೋಗ್ಯಕ್ಕೆ ಖರೀದಿಸಿರುವ ಜಾಗದಲ್ಲಿ ಸೋಲಾರ್ ಪ್ಲಾಂಟ್ ಆರಂಭಿಸುತ್ತಾರೆಂಬ ಮಾಹಿತಿ ಇದೆ. ಜೊತೆಗೆ ಈ ಜಾಗದಲ್ಲಿ ನೂರಾರು ಮರಗಳನ್ನು ಕಡಿಯಲಾಗಿದ್ದು, ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಿಲ್ಲ. ಹಾಗೆಯೇ ಈ ಜಮೀನುಗಳ ಮೂಲ ದಾಖಲೆಗಳನ್ನು ನಾಶಪಡಿಸಿ ತಮಗೆ ಅನುಕೂಲವಾಗುವಂತೆ ಕಾಗದ ಪತ್ರಗಳನ್ನು ಸೃಷ್ಟಿಸಿರುವುದು ಕಂಡುಬಂದಿದೆ ಎಂದು ಅವರು ದೂರಿದರು.

ಮಕ್ಕಳ ಹೆಸರಿನಲ್ಲಿ 6 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಆದರೆ ಈ ಸರ್ವೇ ನಂಬರುಗಳು ದುರಸ್ಥಿಯಾಗಿಲ್ಲ. ಆದರೂ ಉಪ ನೋಂದಣಾಧಿಕಾರಿ ಮುಖಾಂತರ ಕ್ರಯ ಪತ್ರದ ಮೂಲಕ ಖರೀದಿಸಿದ್ದಾರೆ. ಇದು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಾವಳಿಗಳಿಗೆ ವಿರುದ್ಧವಾಗಿರುತ್ತದೆ ಎಂದು ಅವರು ಆರೋಪಿಸಿದರು.

ಕಳೆದ ಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡರು ತಮ್ಮ ಇಬ್ಬರು ಪುತ್ರಿಯರನ್ನು ಅವಲಂಬಿತರು ಎಂದು ಅಫಿಡವಿಟ್ ಸಲ್ಲಿಸಿದ್ದಾರೆ. ಈ ಅವಲಂಬಿತರಿಗೆ ಈ ಪ್ರಮಾಣದ ಭೂಮಿ ಖರೀದಿಸಲು ಇರುವ ಆದಾಯದ ಮೂಲಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಅವರು ಒತ್ತಾಯಿಸಿದರು.

ಕೋರ್ಟ್ ಅನುಮತಿ ಪಡೆದಿಲ್ಲ:
ಯಾವುದೇ ಅರಣ್ಯ ಪ್ರದೇಶವನ್ನು ಅರಣ್ಯೇತರ ಎಂದು ಘೋಷಿಸಬೇಕಾದರೆ, ಸರ್ವೋಚ್ಛ ನ್ಯಾಯಾಲಯದ ಮತ್ತು ಕೇಂದ್ರ ಸರಕಾರದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಪ್ರಸ್ತುತ ನಾರಾಯಣದುರ್ಗ ಅರಣ್ಯ ಪ್ರದೇಶದಲ್ಲಿನ ಮಾದಿಗರ ಹೊಸಹಳ್ಳಿಯ 223.36 ಎಕರೆ ಪ್ರದೇಶದಲ್ಲಿ 103 ಎಕರೆಯಷ್ಟು ಭೂಮಿಯನ್ನು ಕೈಬಿಟ್ಟಿರುವುದಕ್ಕೆ ನ್ಯಾಯಾಲಯದ ಅನುಮತಿ ಪಡೆದಿರುವುದಿಲ್ಲವೆಂದು ಅವರು ವಿವರಿಸಿದರು.

ನಕಲಿ ದಾಖಲೆ ಸೃಷ್ಠಿ;
ಶಾಸಕ ಕೆ.ಸಿ.ನಾರಾಯಣಗೌಡರು ಮತ್ತು ಕುಟುಂಬದವರು ಎಚ್.ಟಿ.ವೆಂಕಟೇಶ್ ಎಂಬುವವರಿಂದ ಕ್ರಯ ಮತ್ತು ಭೋಗ್ಯಪಡೆದುಕೊಂಡಿರುವ ಭೂಮಿಯ ದಾಖಲಾತಿಗಳನ್ನು ನಕಲಿಯಾಗಿ ಸೃಷ್ಠಿಸಲಾಗಿದೆ, ಅಲ್ಲದೆ ಅರಣ್ಯ ಭೂಮಿಯನ್ನು ಪರಭಾರೆ,ಖಾತೆವಗೈರೆಗಳ ಬಗ್ಗೆ ಸರಕಾರದ ಹಂತದಲ್ಲಿ ಯಾವುದೇ ನಿರ್ಧಾರವಾಗದಿರುವ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳ ಹೆಸರುಗಳಿಗೆ ದಾಖಲೆಗಳನ್ನು ಸೃಷ್ಠಿಸಿ ಕ್ರಯ,ಅನುಭವಕ್ಕೆ ಮಾಡಿಕೊಡಲು ಬರೊದಿಲ್ಲ,ಆದರೂ ಕಂದಾಯ ಮತ್ತು ಅರಣ್ಯ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಹೆಸರಿಗೆ ಅರಣ್ಯಭೂಮಿಯನ್ನು ಹೇಗೆ ಮಾಡಿಕೊಟ್ಟರು ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದರು.

ಸಮಗ್ರ ತನಿಖೆಯಾಗಲಿ;
ಈ ಭೂಮಿಯ ಪರಬಾರೆಯ ದಾಖಲಾತಿಗಳನ್ನು ಪರಿಶೀಲಿಸಿದರೆ ಅಕ್ರಮ ನಡೆದಿರುವುದು ಸ್ಪಷ್ಠವಾಗುತ್ತದೆ,ಆದ್ದರಿಂದ ಈ ಎಲ್ಲಾ ಭೂ ಅವ್ಯವಹಾರದ ಬಗ್ಗೆ ಕೂಲಂಕುಶವಾದ ತನಿಖೆ ನಡೆಸಬೇಕು,ನಕಲಿ ದಾಖಲೆ ಸೃಷ್ಠಿಸಿರುವ ಕಂದಾಯ ಇಲಾಕೆ ಮತ್ತು ಅರಣ್ಯ ಇಲಾಖಾಧಿಕಾರಿಗಳೂ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಜೊತೆಗೆ, ಅಕ್ರಮವಾಗಿ ಮರ ಕಡಿದಿರುವ ಬಗ್ಗೆ ಫಾರೆಸ್ಟ್ ಅಫೆನ್ಸ್ ಕೇಸ್ ಅಡಿ ಪ್ರಕರಣ ದಾಖಲಿಸಿ ಶಾಸಕ ನಾರಾಯಣಗೌಡ, ಪತ್ನಿ ದೇವಕಿ ವಿರುದ್ಧ ಕ್ರಮ ಜರುಗಿಸಬೇಕೆಂದೂ ಅವರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್, ಜಿಲ್ಲಾಧ್ಯಕ್ಷ ಸಿ.ಎಸ್.ವೆಂಕಟೇಶ್ ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com