ಮಂಡ್ಯ: ಸಾಲ ಬಾಧೆ ತಾಳಲಾರದೆ ರೈತ ನೇಣಿಗೆ ಶರಣು

ಸಾಲದ ಬಾಧೆ ತಾಳಲಾರದೆ ರೈತನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಡ್ಯ: ಸಾಲದ ಬಾಧೆ ತಾಳಲಾರದೆ ರೈತನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೊಮ್ಮನಾಯಕನಹಳ್ಳಿ ಗ್ರಾಮದ ಲೇಟ್ ಕೃಷ್ಣೇಗೌಡ ಅವರ ಮಗ ಜಗದೀಶ್(೫೦) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ರೈತ.

ರೈತ ಜಗದೀಶ್ ಅವರು ಬೊಮ್ಮನಾಯಕನಹಳ್ಳಿ ಗ್ರಾಮ ಮತ್ತು ವಳಗೆರೆಮೆಣಸ ಗ್ರಾಮದ ಎಲ್ಲೆಯಲ್ಲಿ ಸುಮಾರು ಒಂದೂವರೆ ಎಕರೆ ಜಮೀನು ಹೊಂದಿದ್ದು, ಜಮೀನಿನಲ್ಲಿ ಕಬ್ಬು, ಭತ್ತದ ಬೆಳೆಯನ್ನು ಹಾಕಿದ್ದರು. ಆದರೆ ಇತ್ತಿಚೆಗೆ ಸರಿಯಾಗಿ ಮಳೆಯಾಗದ ಕಾರಣ ಫಸಲಿನಲ್ಲಿ ಇಳುವರಿ ಸರಿಯಾಗಿ ಬಂದಿರಲಿಲ್ಲ.

ಬೇಸಾಯಕ್ಕಾಗಿ ಅಗ್ರಹಾರಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೫೦ ಸಾವಿರ ರೂ ಸಾಲ, ಕೆ.ಆರ್.ಪೇಟೆ ವಿಜಯಬ್ಯಾಂಕ್, ಸಾರಂಗಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಲಕ್ಷಾಂತರ ರೂ ಸಾಲ ಮಾಡಿದ್ದರು. ಅಲ್ಲದೆ ಗಿರವಿ ಅಂಗಡಿಯಲ್ಲಿ ಒಡವೆ ಸಾಲ, ವಿವಿಧ ಮಹಿಳಾ ಸಂಘಗಳಲ್ಲಿ ಹಾಗೂ ಖಾಸಗಿಯಾಗಿ ಐದಾರು ಲಕ್ಷ ರೂಪಾಯಿಗಳ ಸಾಲ ಪಡೆದುಕೊಂಡಿದ್ದರು.

ಇತ್ತೀಚೆಗೆ ಸಾಲಗಾರರ ಕಿರುಕುಳ ಹೆಚ್ಚಾಗಿತ್ತು ಮತ್ತು ಬೇಸಾಯದಿಂದ ನಷ್ಟ ಉಂಟಾದ ಕಾರಣ ಮನನೊಂದು ಬೊಮ್ಮನಾಯಕನಹಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ಜಮೀನಿನಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪುತ್ರ ಸೋಮಶೇಖರ್ ಅವರು  ಕೆ.ಆರ್.ಪೇಟೆ ಪಟ್ಟಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮೃತ ರೈತ ಪತ್ನಿ ಸವಿತಾ, ಪುತ್ರಿಯರಾದ ಗಿರಿಜಾ, ಶಶಿಕಲಾ, ಪುತ್ರ ಸೋಮಶೇಖರ್  ಅವರನ್ನು ಅಗಲಿದ್ದಾರೆ.
ಘಟನೆ ಕುರಿತು ಸಬ್‌ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸಾಲಮನ್ನಾ, ಪರಿಹಾರಕ್ಕೆ ಆಗ್ರಹ
ಸಣ್ಣ ರೈತ ಕುಟುಂಬದ ರೈತ ಜಗದೀಶ್ ಅವರು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ರೈತನ ಕುಟುಂಬ ಅನಾಥವಾಗಿದೆ. ಹಾಗಾಗಿ ಸರ್ಕಾರವು ಕೂಡಲೇ ರೈತನ ಸಾಲವನ್ನು ಮನ್ನಾ ಮಾಡಬೇಕು. ಜೊತೆಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಮುಖಂಡರಾದ ವಿ.ಎನ್.ಮಹದೇವೇಗೌಡ, ತಮ್ಮಯ್ಯಣ್ಣ, ಬಿ.ಆರ್.ಮಂಜೇಶ್, ತಾಲ್ಲೂಕು ಪಂಚಾಯಿತಿ ಸದಸ್ಯೆ ದೀಪಶ್ರೀಮಂಜೇಗೌಡ ಮತ್ತಿತರರು ರಾಜ್ಯ ಸರ್ಕಾರವನ್ನು ಅಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com