ಆರು ವರ್ಷಗಳ ನಂತರ ಕೊನೆಗೂ 'ಕಾವೇರಿ' ತೊರೆದ ಸಿದ್ದರಾಮಯ್ಯ 

ಆರು ವರ್ಷಗಳಿಗೂ ಹೆಚ್ಚು ಅವಧಿವರೆಗೆ ನೆಲೆಸಿದ್ದ ಸರ್ಕಾರಿ ಬಂಗಲೆ ‘ಕಾವೇರಿ’ಯನ್ನು ತೊರೆದಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಶಿವಾನಂದ ಸರ್ಕಲ್ ನಲ್ಲಿರುವ ಸರ್ಕಾರಿ ಬಂಗಲೆಗೆ ತಮ್ಮ ವಾಸ್ತವ್ಯ ಬದಲಿಸಿದ್ದಾರೆ.
ಕಾವೇರಿ ನಿವಾಸ
ಕಾವೇರಿ ನಿವಾಸ

ಬೆಂಗಳೂರು: ಆರು ವರ್ಷಗಳಿಗೂ ಹೆಚ್ಚು ಅವಧಿವರೆಗೆ ನೆಲೆಸಿದ್ದ ಸರ್ಕಾರಿ ಬಂಗಲೆ ‘ಕಾವೇರಿ’ಯನ್ನು ತೊರೆದಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಶಿವಾನಂದ ಸರ್ಕಲ್ ನಲ್ಲಿರುವ ಸರ್ಕಾರಿ ಬಂಗಲೆಗೆ ತಮ್ಮ ವಾಸ್ತವ್ಯ ಬದಲಿಸಿದ್ದಾರೆ.

ಮುಖ್ಯಮಂತ್ರಿಯಾಗಿದ್ದಾಗ ಅಂದರೆ 2013 ರಲ್ಲಿ  ‘ಕಾವೇರಿ’ಯನ್ನು ಅವರು ತಮ್ಮ ವಾಸ್ತವ್ಯಕ್ಕೆ ಹಂಚಿಕೆ ಮಾಡಿಕೊಂಡಿದ್ದರು. 2018ರ ವಿಧಾನಸಭೆ ಚುನಾವಣೆ ಬಳಿಕ ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಅವರು, ಸಚಿವ ಸ್ಥಾನಮಾನ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕೆಲದಿನ ಅಲ್ಲಿಯೇ ತಮ್ಮ ವಾಸ್ತವ್ಯ ಮುಂದುವರಿಸಿದ್ದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ‘ಕಾವೇರಿ’ಯನ್ನು ಬಿಟ್ಟುಕೊಡಬೇಕಾದ ಸಂದರ್ಭ ಎದುರಾದಾಗ ಅಂದು ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರ ಹೆಸರಿಗೆ ಹಂಚಿಕೆ ಮಾಡಿಸಿಕೊಂಡು ಅಲ್ಲಿಯೇ ಉಳಿದುಕೊಂಡಿದ್ದರು.

ಬಿಜೆಪಿ ಸರ್ಕಾರ ಬರುತ್ತಿದ್ದಂತೆ ವಿರೋಧ ಪಕ್ಷದ ನಾಯಕರಾದ ಅವರು, ಅದೇ ನಿವಾಸವನ್ನು ತಮಗೆ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾಕ್ಕೆ ಹೊಂದಿಕೊಂಡಂತೆ ಇರುವ ‘ಕಾವೇರಿ’ಗೆ ತಮ್ಮ ವಾಸ್ತವ್ಯ ಬದಲಿಸಲು ಮುಂದಾಗಿದ್ದ ಯಡಿಯೂರಪ್ಪ, ಅದನ್ನು ತಮಗೆ ಹಂಚಿಕೆ ಮಾಡಿಕೊಂಡಿದ್ದರು. 

ಆದರೆ, ಸಿದ್ದರಾಮಯ್ಯ ಅವರು ‘ಕಾವೇರಿ’ ತೆರವು ಮಾಡಿರಲಿಲ್ಲ, ಅದರೆ ಅಂತಿಮವಾಗಿ ಸಿದ್ದರಾಮಯ್ಯ ನಿನ್ನೆ ತೆರವು ಮಾಡಿದ್ದಾರೆ. ಇನ್ನು ಸಿಎಂ ಯಡಿಯೂರಪ್ಪ ಶೀಘ್ರವೇ ಕಾವೇರಿಗೆ ಅಡಿ ಇಡಲಿದ್ದಾರೆ. ಹೊದಾಗಿ ಬಣ್ಣ ಹಾಗೂ ಸಣ್ಣಪುಟ್ಟ ರಿಪೇರಿ ಕಾರ್ಯ ಮುಗಿದ ಕೂಡಲೇ ಸಿಎಂ ಬಿಎಸ್ ವೈ ಕಾವೇರಿ ಪ್ರವೇಶಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ನಿನ್ನೆ ಕಾವೇರಿ ನಿವಾಸ ಖಾಲಿ ಮಾಡಿದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ  ಒರಾಯನ್ ಮಾಲ್ ಗೆ ತೆರಳಿ ಇಂಡಿಯಾ V/S ಇಂಗ್ಲೆಂಡ್ ಸಿನಿಮಾ ವೀಕ್ಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com