ಮಂಡ್ಯ: ಮತ್ತೆ 35 ಮಂದಿಗೆ ಪಾಸಿಟಿವ್; 508 ರ ಗಡಿದಾಟಿದ ಸೋಂಕಿರ ಸಂಖ್ಯೆ, ರಾಜಕಾರಣಿ ಕುಟುಂಬಕ್ಕೂ ಅಂಟಿದ ಕೊರೋನಾ!

ಜಿಲ್ಲೆಯಲ್ಲಿ ರಾಜಕಾರಣಿಯೊಬ್ಬರ ಕುಟುಂಬದ 6 ಮಂದಿಯೂ ಸೇರಿದಂತೆ 35 ಮಂದಿಗೆ ಕೊರೋನಾ ಸೋಂಕು ದೃಢ ಪಟ್ಟಿದ್ದು, ಇದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ  ಸೋಂಕಿತರ ಸಂಖ್ಯೆ 508 ರ ಗಡಿದಾಟಿದೆ.ಇದುವರೆಗೂ ಒಟ್ಟಾರೆ 508 ಸೋಂಕಿತರ ಪೈಕಿ 355 ಮಂದಿ ಗುಣಮುಖರಾಗಿದ್ದಾರೆ 154 ಸಕ್ರಿಯ ಪ್ರಕರಣಗಳಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಜಿಲ್ಲೆಯಲ್ಲಿ ರಾಜಕಾರಣಿಯೊಬ್ಬರ ಕುಟುಂಬದ ೬ ಮಂದಿಯೂ ಸೇರಿದಂತೆ 35ಮಂದಿಗೆ ಕೊರೋನಾ ಸೋಂಕು ದೃಢ ಪಟ್ಟಿದ್ದು, ಇದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ  ಸೋಂಕಿತರ ಸಂಖ್ಯೆ 508 ರ ಗಡಿದಾಟಿದೆ. ಇದುವರೆಗೂ ಒಟ್ಟಾರೆ 508 ಸೋಂಕಿತರ ಪೈಕಿ 355 ಮಂದಿ ಗುಣಮುಖರಾಗಿದ್ದಾರೆ 154 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಒಟ್ಟಾರೆ  ೧೮೬೪೬ ಮಂದಿಯ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ ೧೬, ೧೭೯ ಮಂದಿಯ ಫಲಿತಾಂಶ ನೆಗೆಟಿವ್ ಬಂದಿದ್ದು,೧೯೬೩ ಮಂದಿಯ ಫಲಿತಾಂಶ ಬರಬೇಕಾಗಿದೆ. ಹೋಂ ಕ್ವಾರಂಟೈನ ನಲ್ಲಿ  ೧೪೯೨, ಹಾಸ್ಟೆಲ್ ಕ್ವಾರಂಟೈನ್ ನಲ್ಲಿ  ೨೫೦ ಹಾಗೂ ಆಸ್ಪತ್ರೆ ಕ್ವಾರಂಟೈನ್ ನಲ್ಲಿ ೫ ಮಂದಿ ಇದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

ರಾಜಕಾರಣಿ ಕುಟುಂಬಕ್ಕೂ ವಕ್ಕರಿಸಿದ ಕೊರೋನಾ:ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ವಾಸವಿದ್ದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷರು ಸೇರಿದಂತೆ ಅವರ ಕುಟುಂಬದ ೧೧ ತಿಂಗಳ ಮಗುವನ್ನೊಳಗೊಂಡಂತೆ ಒಟ್ಟು ೬ ಮಂದಿಗೂ ಕೊರೋನಾ ವಕ್ಕರಿಸಿದ್ದು ತಾಲ್ಲೂಕಿನಾದ್ಯಂತ ಭಯದ ವಾತಾವರಣ ಸೃಷ್ಟಿಯಾಗಿದೆ.

ಜೆಡಿಎಸ್ ಸಂಘಟನಾ ಕಾರ್ಯದರ್ಶಿಯ ಮಗನಿಗೆ ಕಳೆದ ೨ ದಿನದ ಹಿಂದೆ ಸೋಂಕು ದೃಢಪಟ್ಟಿದ್ದರಿಂದ ಕುಟುಂಬದ ಸದಸ್ಯರೆಲ್ಲರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಕುಟುಂಬದ ೧೧ ತಿಂಗಳ ಮಗು, ೫ ವರ್ಷದ ಮಗು ಸೇರಿದಂತೆ ಒಟ್ಟು ೫ ಮಂದಿಯನ್ನು ಶನಿವಾರ ಸಂಜೆ ತಾಲ್ಲೂಕು ಟಾಸ್ಕ್ ಪೋರ್ಸ್ ಕಮಿಟಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ನಾಗಮಂಗಲ ತಾಲ್ಲೂಕಿನಲ್ಲಿ ಇಂದಿನ ೧೨ ಪಾಸಿಟಿವ್ ಕೇಸ್ ಸೇರಿ ಒಟ್ಟು ೫೮ ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ ಒಂದೇ ಕುಟುಂಬದ ಐವರು, ಹಾಗೂ ಕೆಶಿಪ್ ರಸ್ತೆ ಕಾಮಗಾರಿಯ ಇಂಜಿನಿಯರ್ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬೆಂಗಳೂರು ಸಂಪರ್ಕ ಹೊಂದಿರುವವರಿಗೆ ಸೋಂಕು ದೃಢಪಟ್ಟಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಧನಂಜಯ ಅವರು ಮಾಧ್ಯಮಗಳಿಗೆ ತಿಳಿಸಿದರು.

ಕೋವಿಡ್ ಆಸ್ಪತ್ರೆಗೆ ತೆರಳಲು ಸೋಂಕಿತರ ತಕರಾರು:ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಟುಂಬದ ಸದಸ್ಯರೆಲ್ಲರಿಗೂ ಸೋಂಕು ದೃಢವಾಗುತ್ತಿದ್ದಂತೆ ತಹಸೀಲ್ದಾರ್,  ತಾ.ಪಂ.ಇಒ ಹಾಗೂ ಪೊಲೀಸ್ ಅಧಿಕಾರಿಗಳು
ಆಸ್ಪತ್ರೆಗೆ ಕಳುಹಿಸಲು ಅಂಬುಲೆನ್ಸ್ ಜೊತೆ ಮನೆಯ ಬಳಿ ತೆರಳಿದಾಗ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಇರುತ್ತೇನೆ ಎಂದು ಪಟ್ಟುಹಿಡಿದುಕೊಂಡು ಸುಮಾರು ಒಂದು ಗಂಟೆಗಳ ಕಾಲ ತಕರಾರು ಮಾಡಿದ ಘಟನೆ ನಡೆಯಿತು.

ಈ ಸಂದರ್ಭ ಅಧಿಕಾರಿಗಳು ಎಷ್ಟೇ ಮನವೊಲಿಸಲು ಮುಂದಾದರೂ ಪಟ್ಟುಬಿಡದ ಸೋಂಕಿತ ಕುಟುಂಬ, ಸಚಿವರು, ಶಾಸಕರು, ಮಾಜಿ ಸಂಸದ ಹಾಗೂ ಮಾಜಿ ಶಾಸಕರ ಜತೆ ಮಾತನಾಡಿದ್ದೇನೆ ಎಂದು ಅಧಿಕಾರಿಗಳನ್ನು ಸತಾಯಿಸಿದ ಘಟನೆ ನಡೆದಿದ್ದರಿಂದ ಅಧಿಕಾರಿಗಳಿಗೆ ದೊಡ್ಡತಲೆನೋವಾಗಿ ಪರಿಣಮಿಸಿತ್ತು, ತದನಂತರ ಕುಟುಂಬದ ಸದಸ್ಯರನ್ನು ಮನವೊಲಿಸಿ ಆಸ್ಪತ್ರೆಗೆ ರವಾನಿಸುವಲ್ಲಿ ತಾಲ್ಲೂಕು ಆಡಳಿತ ಯಶಸ್ವಿಯಾಯಿತು.

ಸೆಲ್ಫ್ ಹೋಂ ಕ್ವಾರಂಟೈನ್  ಆಗಿರುವ ಮಾಜಿ ಸಂಸದ:ಸೋಂಕಿತ ಜೆಡಿಎಸ್ ಪಕ್ಷದ ಮುಖಂಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಜೊತೆ ಕಳೆದ ೨ ದಿನದ ಹಿಂದೆ ಜೊತೆಯಲ್ಲಿ ಪ್ರಯಾಣ ಬೆಳೆಸಿದ್ದರು. ಆದ್ದರಿಂದ ಮುಖಂಡನಿಗೆ ಕೊರೋನಾ ಸೋಂಕು ದೃಢವಾಗುತ್ತಿದ್ದಂತೆ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ  ಬೆಂಗಳೂರಿನ ತಮ್ಮ ಮನೆಯಲ್ಲಿ ಸ್ವತಃ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಎಸ್ಎಸ್ಎಲ್ ಸಿ ವಿದ್ಯಾರ್ಥಿಗೆ ಸೋಂಕು:ಎಸ್ಎಸ್ಎಲ್ ಸಿ  ವಿದ್ಯಾರ್ಥಿಗಳಿಗೆ ನಡೆದ ಪರೀಕ್ಷೆಯ ಮೊದಲ ಎರಡು ವಿಷಯಗಳಿಗೆ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ವಿದ್ಯಾರ್ಥಿಗೆ ಕೊರೋನಾ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ  ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ನಂತರ ಉಳಿದ ಪರೀಕ್ಷೆಗೆ ಗೈರಾಗಿದ್ದು ಈಗ ಸೋಂಕು ದೃಢಪಟ್ಟಿರುವುದು ವಿದ್ಯಾರ್ಥಿಗಳಲ್ಲಿ ಹಾಗೂ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂಧಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com