ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ: ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

5 ಸದಸ್ಯರಿಗಿಂತ ಹೆಚ್ಚಿರುವ ಕುಟುಂಬ ಗರಿಷ್ಠ 432 ಎಕರೆಯವರೆಗೆ ಭೂಮಿ ಹೊಂದಲು ಅವಕಾಶ ಕಲ್ಪಿಸಿರುವ ತಿದ್ದುಪಡಿ, 79ಎ, 79 ಬಿ ಹಾಗೂ ಸಿ ಅಡಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ಮುಕ್ತಾಯಗೊಳಿಸಲು ದಾರಿ ಮಾಡಿಕೊಟ್ಟಿದೆ.

ಉಳುವವನಿಗೆ ಭೂಮಿ ಆಶಯದಡಿ 1974ರಲ್ಲಿ ತಂದಿದ್ದ ಭೂಸುಧಾರಣೆ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಮುಂದಾದಾಗ ಪರ–ವಿರೋಧದ ವಾದಗಳು ಎದ್ದಿದ್ದವು. ಭೂಮಿ ಮಾರಲು ಹಾಗೂ ಖರೀದಿಸಲು ಇದ್ದ ದೊಡ್ಡ ಬೇಲಿಯೊಂದನ್ನು ಕಿತ್ತುಹಾಕಿದಂತಾಗಿ, ರೈತರು ಸ್ವತಂತ್ರರಾಗಲಿದ್ದಾರೆ  ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದ ತಿದ್ದುಪಡಿಗಳಿಗೆ ಮತ್ತೊಂದಿಷ್ಟು ಬದಲಾವಣೆ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ನೀರಾವರಿಯೇತರ ಜಮೀನಾಗಿದ್ದು, ಒಂದು ಕುಟುಂಬದಲ್ಲಿ ಐದು ಸದಸ್ಯಗಿಂತ ಜಾಸ್ತಿ ಇದ್ದರೆ ಹಿಂದೆ 20 ಯೂನಿಟ್‌ (108 ಎಕರೆ) ಭೂಮಿ ಹೊಂದಬಹುದಿತ್ತು. ಈಗ ಅದನ್ನು 216 ಎಕರೆಗೆ ಹೆಚ್ಚಿಸಲಾಗಿದೆ. ಐದಕ್ಕಿಂತ ಹೆಚ್ಚಿನ ಸದಸ್ಯರಿರುವ ಕುಟುಂಬದವರಾಗಿದ್ದರೆ 432 ಎಕರೆ ಭೂಮಿಯನ್ನು ಹೊಂದಲು (ಸೆಕ್ಷನ್ 63 ಸಬ್‌ಸೆಕ್ಷನ್‌ 2ಎ) ಅವಕಾಶ ಕಲ್ಪಿಸಲಾಗಿದೆ. ಇಂತಹ ಕುಟುಂಬಗಳ ಸಂಖ್ಯೆ 8 ಲಕ್ಷದಷ್ಟಿದೆ ಎಂದು ಅಂದಾಜಿಸಲಾಗಿದೆ. ಸೆಕ್ಷನ್ 80ರ ಅಡಿ ರೈತರಲ್ಲದವರಿಗೆ ಭೂಮಿಯನ್ನು ವರ್ಗಾವಣೆ ಮಾಡುವಂತಿರಲಿಲ್ಲ. ಆದರೆ, ಆ ನಿರ್ಬಂಧ ತೆಗೆದುಹಾಕಲಾಗಿದೆ. 

ಕೃಷಿ ಕುಟುಂಬಕ್ಕೆ ಸೇರಿದವರು, ಹೆಚ್ಚಿನ ಆದಾಯ ಇರುವವರು ಖರೀದಿಸಿದ ಪ್ರಸಂಗದಲ್ಲಿ ಅದನ್ನು ಸರ್ಕಾರದ ಸುಪರ್ದಿಗೆ ಪಡೆಯಲು 79 ಎ, 79 ಬಿ ಅಡಿ ಪ್ರಕರಣ ದಾಖಲಿಸಲು, ಕಾಯ್ದೆ ಉಲ್ಲಂಘಿಸಿದ್ದು ದೃಢಪಟ್ಟರೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಇತ್ತು. ಇಂತಹ ಸೆಕ್ಷನ್ ಅಡಿರಾಜ್ಯದಲ್ಲಿ ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳನ್ನು ಸುಗ್ರೀವಾಜ್ಞೆ ಮುಕ್ತಾಯಗೊಳಿಸಲಿದೆ. ಒಂದು ವೇಳೆ ಜಿಲ್ಲಾಧಿಕಾರಿ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಹೋಗಿ, ಪ್ರಕರಣ ವಿಚಾರಣೆ ಹಂತದಲ್ಲಿದ್ದರೆ ಅದನ್ನು ಸುಗ್ರೀವಾಜ್ಞೆ ಆಧರಿಸಿ ವಜಾಗೊಳಿಸುವಂತೆ ಮೇಲ್ಮನವಿದಾರ ಕೋರಬಹುದು.

ಕಳೆದ 45 ವರ್ಷಗಳಿಂದ  ಸುಮಾರು 83,171 ಪ್ರಕರಣಗಳು ಸೆಕ್ಷನ್ 79ಎ ಮತ್ತು 80 ಅಡಿಯಲ್ಲಿ ದಾಖಲಾಗಿದ್ದು, ಅವುಗಳಲ್ಲಿ ಶೇ.1 ರಷ್ಟು ಭೂಮಿಯನ್ನು ಸರ್ಕಾರ ವಾಪಸ್ ಪಡೆಯಲು ಸಾಧ್ಯವಾಗಿಲ್ಲ ಎಂದು ಕಂದಾಯ ಸಚಿವ ಆರ್ .ಅಶೋಕ್ ಹೇಳಿದ್ದರು. ಈ ನಿಯಮದಿಂದಾಗಿ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದರು,  ಇನ್ನು ಮಂದೆ ಇಂತಹ ಕಿರುಕುಳ ತಪ್ಪುತ್ತವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com