ಸರ್ಕಾರಿ ನೌಕರರಿಗೆ ಕೊರೋನಾ ಪರೀಕ್ಷೆಗೆ ಪ್ರತ್ಯೇಕ ಸೌಲಭ್ಯವಿದೆಯೇ: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ಬೆಂಗಳೂರು: ಕೊರೋನಾ ನಿರ್ವಹಣೆ ಬಗ್ಗೆ ರಾಜ್ಯ ಸರ್ಕಾರದಿಂದ ಮಾಹಿತಿ ಕೇಳಿರುವ ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತಷ್ಚು ಪ್ರಶ್ನೆಗಳನ್ನು ಕೇಳಿದೆ.
ಲಾಕ್ ಡೌನ್ ಸಮಯದಲ್ಲಿ ಸೇವೆ ಸಲ್ಲಿಸುವ ಸರ್ಕಾರಿ ,ನೌಕರರಿಗೆ ಏನೆಲ್ಲಾ ಸೌಲಭ್ಯ ನೀಡಿದೆ. ಬಿಬಿಎಂಪಿ ಸಿಬ್ಬಂದಿ, ನ್ಯಾಯಾಲಯ, ಪೊಲೀಸ್ ಮತ್ತು ಬೇರೆ ಇಲಾಖೆಗಳ ಎಲ್ಲಾ ಸರ್ಕಾರಿ ನೌಕರರಿಗೆ ಕೊರೋನಾ ಪರೀಕ್ಷೆ ಮಾಡಿಸಲು ಸರ್ಕಾರ ಪ್ರತ್ಯೇಕ ಸೌಲಭ್ಯ ಒದಗಿಸಿದೆಯೇ ಎಂದು ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮಕ್ಕು ಅಲೋಕ್ ಅರಡೆ ಅವರನ್ನೊಳಗೊಂಡ ವಿಭಾಗೀಯ ಪೀಠ ಪ್ರಶ್ನಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಗತ್ಯವಾದ ನರ್ಸ್ ಮತ್ತು ವೈದ್ಯರಿದ್ದಾರೆಯೇ ಎಂದು ಪ್ರಶ್ನಿಸಿದ ನ್ಯಾಯಪೀಠ ಮುಖ್ಯವಾಗಿ ಸೋಂಕು ದೃಢಪಟ್ಟ ವ್ಯಕ್ತಿಯ ಕೈಗೆ ವರದಿ ನೀಡಲ್ಲ, ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದಾದರೆ ಆ ಎಸ್‌ಎಂಎಸ್ ಆಧರಿಸಿ ಖಾಸಗಿ ಆಸ್ಪತ್ರೆಗಳು ಸೋಂಕಿತನನ್ನು ದಾಖಲಿಸಿಕೊಳ್ಳುತ್ತಿವೆಯೆ? ಅದಕ್ಕಿರುವ ಮಾನದಂಡವೇನು? ಖಾಸಗಿ ಆಸ್ಪತ್ರೆಗಳು ಪೇಶೆಂಟ್ ಕೋಡ್ ತಯಾರಿಸಬಹುದೆ? ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತನಿಗೆ ಐಸಿಯು-ವೆಂಟೆಲಿಟರ್ ಹಾಸಿಗೆ
ಅವಶ್ಯಕತೆಯಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಅದು ಲಭ್ಯವಿಲ್ಲದಿದ್ದರೆ ಅದನ್ನು ಒದಗಿಸುವ ಯಾವ ವ್ಯವಸ್ಥೆ ಇದೆ ಎಂದು ಕೇಳಿತು.
ಖಾಸಗಿ ಆಂಬ್ಯುಲೆನ್ಸ್‌ಗಳಿಗೂ ಸಹಾಯವಾಣಿ ಇದೆಯೆ? ಬಿಯು ಕೋಡ್ ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲಿಸುತ್ತೀರಾ? ಪಾಸಿಟಿವ್ ಬಂದಾಗ ಖಾಸಗಿ ಆಸ್ಪತ್ರೆಗೆ ದಾಖಲಾಗುವುದು ಹೇಗೆ? ಸೋಂಕಿತರನ್ನು ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳಿಗಿರುವ ಮಾರ್ಗಸೂಚಿ ಏನು? ಸೋಂಕು ಉಲ್ಬಣಿಸಿದಾಗ ಐಸಿಯುಗೆ ದಾಖಲಿಸಲು ಕ್ರಮವೇನು? ಚಿಕಿತ್ಸೆಗೆ ಅಗತ್ಯ ಸಂಖ್ಯೆಯ ವೈದ್ಯರು ಲಭ್ಯವಿದ್ದಾರಾ ಎಂದು ಪ್ರಶ್ನಿಸಿತು.
108 ಆಂಬ್ಯುಲೆನ್ಸ್ ಎಷ್ಟಿವೆ, ಅವುಗಳ ನಿರ್ವಹಣೆ ಮತ್ತು ಲಭ್ಯತೆ ಹೇಗಿದೆ? ಬೆಸ್ಕಾಂ 1912 ಹೆಲ್ಪ್‌ಲೈನ್ ಅನ್ನು ಕೋವಿಡ್-19 ಸಹಾಯವಾಣಿಯನ್ನಾಗಿ ಏಕೆ ಬಳಸಿಕೊಳ್ಳಲಾಗುತ್ತಿದೆ? ಮಳೆಗಾಲದಲ್ಲಿ 1912ಕ್ಕೆ ದಿನಕ್ಕೆ ಸರಾಸರಿ 25 ಸಾವಿರ ಕರೆಗಳು ಬರುತ್ತವೆ ಎಂದು ವಕೀಲರು ಹೇಳುತ್ತಾರೆ. ಹಾಗಾದರೆ, ಇದನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬ ಬಗ್ಗೆ ವಿವರಣೆ ನೀಡುವಂತೆ ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ