ಕೋವಿಡ್‌ ಚಿಕಿತ್ಸೆಗೆ ಶೇ. 50ರಷ್ಟು ಬೆಡ್ ಮೀಸಲಿರಿಸಲು ಮತ್ತೆ ಖಾಸಗಿ ಆಸ್ಪತ್ರೆಗಳ ಕ್ಯಾತೆ

ರಾಜ್ಯದಲ್ಲಿ ಕೋವಿಡ್‌ ಸೋಂಕು ತನ್ನ ಕಬಂದಬಾಹು ಚಾಚುತ್ತಿದ್ದು, ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿರುವ ಹೀನಾಯ ಪರಿಸ್ಥಿತಿ ನಡುವೆಯೇ, ಖಾಸಗಿ ಆಸ್ಪತ್ರೆಗಳು ಸರ್ಕಾರದ ಬಳಿ ಹೊಸ ಖ್ಯಾತೆ ತೆಗೆದಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕು ತನ್ನ ಕಬಂದಬಾಹು ಚಾಚುತ್ತಿದ್ದು, ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿರುವ ಹೀನಾಯ ಪರಿಸ್ಥಿತಿ ನಡುವೆಯೇ, ಖಾಸಗಿ ಆಸ್ಪತ್ರೆಗಳು ಸರ್ಕಾರದ ಬಳಿ ಹೊಸ ಖ್ಯಾತೆ ತೆಗೆದಿವೆ.

ಸುಪ್ರೀಂ ಕೋರ್ಟ್ ಆದೇಶವಿದ್ದರೂ, ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳು ಲಭ್ಯವಿಲ್ಲ ಎಂಬ ನೆವ ಹೇಳುತ್ತಿರುವ ಕುರಿತು ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಶುಕ್ರವಾರ ತರಾತುರಿಯಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳ ಸಂಘಟನೆ(ಫನಾ) ಪ್ರತಿನಿಧಿಯೊಂದಿಗೆ ಸಭೆ ನಡೆಸಿತ್ತು. ಅದರಲ್ಲಿ ಫನಾ ಸದಸ್ಯರು ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. 

ಮೊದಲು ಕೋವಿಡ್‌ ರೋಗಿಗಳಿಗೆ ಮೀಸಲಿರಿಸಿದ ಶೇ.50ರಷ್ಟು ಹಾಸಿಗೆ ಮೀಸಲಿರಿಸಲು ತಕರಾರು ತೆಗೆದಿದ್ದ ಖಾಸಗಿ ಆಸ್ಪತ್ರೆಗಳು, ಈಗ ಅದರಲ್ಲಿ ಅರ್ಧದಷ್ಟು ಎಂದರೆ ಶೇ.25ರಷ್ಟು ಹಾಸಿಗೆಯನ್ನು ಸರ್ಕಾರದಿಂದ ಶಿಫಾರಸುಗೊಂಡ ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ದಾಖಲಾಗುವ ರೋಗಿಗಳಿಗೆ ನೀಡಲು ಆಕ್ಷೇಪ ವ್ಯಕ್ತಪಡಿಸಿವೆ. 

ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಮೀಸಲಿರಿಸಿದ ಹಾಸಿಗೆಯಲ್ಲಿ ಕೇವಲ ಶೇ.10 ರಷ್ಟು ಮಾತ್ರ 'ಆರೋಗ್ಯ ಕರ್ನಾಟಕ' ಯೋಜನೆಯಡಿ ಚಿಕಿತ್ಸೆ ನೀಡಲು ಅನುಮತಿ ನೀಡುವಂತೆ ಖಾಸಗಿ ಆಸ್ಪತ್ರೆಗಳು ಪ್ರಸ್ತಾವನೆ ಮುಂದಿಟ್ಟಿವೆ. ಶೇ. 25ರಷ್ಟು ಹಾಸಿಗೆಯನ್ನು ಆರೋಗ್ಯ ಕರ್ನಾಟಕದಡಿ ನೀಡಿದರೆ ಆಸ್ಪತ್ರೆಗಳಿಗೆ ನಷ್ಟ ಉಂಟಾಗುವುದರಿಂದ ಹೆಚ್ಚಿನ ಬೆಡ್‌ಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ನೀಡಲು ಅವಕಾಶ ನೀಡಬೇಕು ಎಂದು ಸಂಘ ಮನವಿ ಮಾಡಿದೆ.
ಆದರೆ, ಈ ಬೇಡಿಕೆಗೆ ಸರ್ಕಾರ ಮಣೆ ಹಾಕಿಲ್ಲ. ಈ ಹಿಂದೆ ಸರ್ಕಾರ ಸೂಚಿಸಿದಂತೆ ಆಸ್ಪತ್ರೆಯ ಒಟ್ಟು ಸಾಮರ್ಥ್ಯದ ಶೇ. 50ರಷ್ಟು ಹಾಸಿಗೆಯನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಮೀಸಲಿರಿಸಲೇಬೇಕು. ಆ ಕುರಿತು ಮಾಹಿತಿಯನ್ನು ಪ್ರವೇಶ ದ್ವಾರದಲ್ಲೇ ಲಗತ್ತಿಸಲೇಬೇಕು. ಇಲ್ಲದಿದ್ದಲ್ಲಿ ನೋಟಿಸ್‌ ಜಾರಿ ಮಾಡಿ, ಪರವಾನಗಿ ರದ್ದುಗೊಳಿಸುವುದಾಗಿ ಮತ್ತೊಮ್ಮೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು 'ಯುಎನ್‌ಐ' ಕನ್ನಡ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಜಿ. ಶ್ರೀನಿವಾಸ್‌, "ನಾವು ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿಯಲು ನಿರಾಕರಿಸಿದ್ದು, ನಿಯಮ ಪಾಲಿಸಲೇಬೇಕು ಎಂದು ಸ್ಪಷ್ಟಪಡಿಸಿದ್ದೇವೆ. ಸಭೆಯ ಕೊನೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಂಘದ ಪ್ರತಿನಿಧಿಗಳು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ. 

ಆರು ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ
ಕೋವಿಡ್‌ ನಿಯಮ ಪಾಲಿಸದ ಮತ್ತೆ ಆರು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನೋಟಿಸ್‌ ಜಾರಿಗೊಳಿಸಿದೆ. ಸಾಗರ್‌, ಮಾನಸ, ಆರ್‌.ಕೆ ನಾಗರಬಾವಿಯ ಫೋರ್ಟಿಸ್‌ ಆಸ್ಪತ್ರೆಗೆ ಗುರುವಾರ ನೋಟಿಸ್‌ ಜಾರಿ ಮಾಡಿದ್ದು, 48 ಗಂಟೆಗಳ ಕಾಲ ಒಪಿಡಿ ಬಂದ್‌ ಮಾಡಲಾಗಿದೆ. ಈ ಹಿಂದೆ ಅಪೋಲೋ, ವಿಕ್ರಂ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿತ್ತು. 

ಹೈಕೋರ್ಟ್ ಏನು ಹೇಳಿತ್ತು?
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರಿಗಾಗಿ ಹಾಸಿಗೆ ನಿಗದಿ ಮಾಡುವ ಸಂಬಂಧ ರಾಜ್ಯ ಸರ್ಕಾರ ಜು.15ರಂದು ಹೊರಡಿಸಿರುವ ಸುತ್ತೋಲೆಯನ್ನು ಮಾರ್ಪಡಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿತ್ತು. ಸುತ್ತೋಲೆಯಲ್ಲಿ ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ನು ಕೂಡ ಅಳವಡಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು.

ಇತ್ತೀಚೆಗೆ ಹಾಸಿಗೆ ಲಭ್ಯವಿಲ್ಲ ಎಂಬುದರ ಬಗ್ಗೆ ಹೆಚ್ಚಿನ ದೂರುಗಳು ದಾಖಲಾಗುತ್ತಿವೆ. ಹೀಗಾಗಿ, ನಿಗದಿತ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಾಗದಿದ್ದರೆ ಅಹವಾಲು ಸಲ್ಲಿಸಲು ನಿರ್ದಿಷ್ಟ ದೂರವಾಣಿ ಸಂಖ್ಯೆ ನೀಡಬೇಕು. ಸರ್ಕಾರದ ನಿರ್ದೇಶನ ಪಾಲಿಸದಿದ್ದರೆ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ ಪ್ರಕಾರ ದಂಡ ಸಹಿತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com