ಕೊರೋನಾ ಸಾವು ತಡೆಗೆ ‘ಪ್ಲಾಸ್ಮಾ ಥೆರಪಿ’ ಅತ್ಯಂತ ಪರಿಣಾಮಕಾರಿ ಪರಿಹಾರ: ಡಾ. ವಿಶಾಲ್‌ ರಾವ್‌

ರಾಜ್ಯದಲ್ಲಿ ಕೋವಿಡ್‌ ಸೋಂಕಿನ ವಿರುದ್ಧ ಹೋರಾಟಕ್ಕೆ ಲಸಿಕೆಗಳ ಶೋಧ ಇನ್ನೂ ಪ್ರಗತಿಯ ಹಂತದಲ್ಲಿರುವಾಗಲೇ ಸಂಜೀವಿನಿಯಾಗಿ ಹೊರಹೊಮ್ಮಿರುವುದು ‘ಪ್ಲಾಸ್ಮಾ ಥೆರಪಿ”. ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ಪ್ಲಾಸ್ಮಾ ಸಂಗ್ರಹಿಸಿ ಸೋಂಕಿತರ ಚಿಕಿತ್ಸೆಗೆ ಬಳಸುವ ಈ ವಿಧಾನವನ್ನು ದೇಶದ ಹಲವು ರಾಜ್ಯಗಳು ಅಳವಡಿಸಿಕೊಂಡಿವೆ.
ವಿಶಾಲ್ ರಾವ್
ವಿಶಾಲ್ ರಾವ್
Updated on

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕಿನ ವಿರುದ್ಧ ಹೋರಾಟಕ್ಕೆ ಲಸಿಕೆಗಳ ಶೋಧ ಇನ್ನೂ ಪ್ರಗತಿಯ ಹಂತದಲ್ಲಿರುವಾಗಲೇ ಸಂಜೀವಿನಿಯಾಗಿ ಹೊರಹೊಮ್ಮಿರುವುದು ‘ಪ್ಲಾಸ್ಮಾ ಥೆರಪಿ”. ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ಪ್ಲಾಸ್ಮಾ ಸಂಗ್ರಹಿಸಿ ಸೋಂಕಿತರ ಚಿಕಿತ್ಸೆಗೆ ಬಳಸುವ ಈ ವಿಧಾನವನ್ನು ದೇಶದ ಹಲವು ರಾಜ್ಯಗಳು ಅಳವಡಿಸಿಕೊಂಡಿವೆ. ರಾಜ್ಯದಲ್ಲಿ ಕೂಡ ಕೆಲ ಪ್ರಯೋಗಗಳು ಯಶಸ್ವಿಯಾಗಿವೆಯಾದರೂ, ಪ್ಲಾಸ್ಮಾ ದಾನ ಮಾಡಲು ಮುಂದೆ ಬರುವವರ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ ಇದೆ.

ಪ್ಲಾಸ್ಮಾ ದಾನಕ್ಕೆ ಜನರೇಕೆ ಅಂಜುತ್ತಿದ್ದಾರೆ ಮತ್ತು ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಸಾವು ತಡೆಗೆ ನೆರವಾಗಲಿದೆಯೇ ಎಂಬುದರ ಕುರಿತು ಪ್ಲಾಸ್ಮಾ ಥೆರಪಿಯ ಜವಾಬ್ದಾರಿ ಹೊತ್ತುಕೊಂಡಿರುವ ಎಚ್‌ಸಿಜಿ ಆಸ್ಪತ್ರೆಯ ಡಾ.ವಿಶಾಲ್‌ ರಾವ್‌ “ಯುಎನ್‌ಐ” ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

ಕೋವಿಡ್‌ ಸಾವು ತಡೆಯಲು ಪ್ಲಾಸ್ಮಾ ಥೆರಪಿ ಎಷ್ಟು ಫಲಕಾರಿ?- ಪ್ರತಿನಿತ್ಯ ದೇಶದಲ್ಲಿ ದಿನನಿತ್ಯ 50ರಿಂದ 100 ಜೀವಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಅವರನ್ನು ರಕ್ಷಿಸುವ ಅಗತ್ಯವಿದೆ. ಇದನ್ನು ತಡೆಯಲು ಪ್ಲಾಸ್ಮಾ ಥೆರಪಿ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ. ಇದು ಇಲ್ಲಿಯವರೆಗೆ ದೃಢಪಟ್ಟಿರುವ ಚಿಕಿತ್ಸೆಗಳಲ್ಲಿ ಒಂದಾಗಿದೆ.

ಸದ್ಯ ನಗರದಲ್ಲಿ ಎಲ್ಲೆಲ್ಲಿ ಪ್ಲಾಸ್ಮಾ ಥೆರಪಿ ನಡೆಯುತ್ತಿದೆ?
-ಎಚ್‌ಸಿಜಿ ಆಸ್ಪತ್ರೆಯಲ್ಲಿ ಈಗಾಗಲೇ ಥೆರಪಿ ಆರಂಭಗೊಂಡಿದೆ. ಜೊತೆಗೆ, ಯಾವುದೇ ಆಸ್ಪತ್ರೆಗಳಲ್ಲಿ ವೈದ್ಯರು, ಸೌಲಭ್ಯಗಳಿವೆಯೋ ಅಲ್ಲೆಲ್ಲಾ ನಡೆಸಲಾಗುತ್ತಿದೆ.

ಇತರ ರಾಜ್ಯಗಳಂತೆ ಪ್ಲಾಸ್ಮಾ ಬ್ಯಾಂಕ್‌ ಸ್ಥಾಪಿಸುವ ಯೋಜನೆಯಿದೆಯೇ?
-ಹೌದು, ರಾಜ್ಯದಲ್ಲಿ ಕೋವಿಡ್‌ ನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ದಿನವೊಂದಕ್ಕೆ ಸರಾಸರಿ 100 ಮಂದಿ ಸಾವನ್ನಪ್ಪುತ್ತಿದ್ದಾರೆ. ಇವರನ್ನು ರಕ್ಷಿಸಲು ಪ್ಲಾಸ್ಮಾ ಬ್ಯಾಂಕ್‌ ಸ್ಥಾಪನೆಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದು, ಅವರು ಕೂಡ ಉತ್ಸಾಹ ತೋರಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ.ಇದು ಜಾರಿಯಾದಲ್ಲಿ ಕರ್ನಾಟಕ ಪ್ಲಾಸ್ಮಾ ಬ್ಯಾಂಕ್‌ ಹೊಂದಿದ ನಾಲ್ಕನೇ ರಾಜ್ಯವಾಗಲಿದೆ. 4. 4.ಪ್ಲಾಸ್ಮಾ ಬ್ಯಾಂಕ್ ಮಾಡಲು ಕನಿಷ್ಠ ಎಷ್ಟು ಪ್ಲಾಸ್ಮಾ ಸಂಗ್ರಹವಿರಬೇಕು?

-ದಿನವೊಂದಕ್ಕೆ 100 ಮಂದಿ ಸಾವನ್ನಪ್ಪುತ್ತಿದ್ದರೆ, ಅವರಲ್ಲಿ ಕನಿಷ್ಠ 50 ಮಂದಿಯನ್ನಾದರೂ ಬದುಕಿಸಲು ಸಾಧ್ಯವಾಗುವಷ್ಟು ಪ್ಲಾಸ್ಮಾ ಸಂಗ್ರಹವಿರಬೇಕು. ಅಲ್ಲದೆ, ಪ್ರತಿಯೊಂದೂ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ನಡೆಯಬೇಕು. ದೆಹಲಿ ಮಾದರಿಯಲ್ಲಿ ಅಕ್ರಮ ಮತ್ತು ಅವ್ಯವಸ್ಥೆಯ ಆರೋಪಗಳು ಕೇಳಿ ಬರಬಾರದು. ಈ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಲಿದೆ.

ಇಲ್ಲಿಯವರೆಗೆ ಪ್ಲಾಸ್ಮಾ ದಾನ ಮಾಡಲು ಎಷ್ಟು ಜನ ಮುಂದೆ ಬಂದಿದ್ದಾರೆ?
-ಇಲ್ಲಿಯವರೆಗೆ ಕೇವಲ 8 ಮಂದಿ ಮಾತ್ರ ಪ್ಲಾಸ್ಮಾ ದಾನ ಮಾಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದಾನಿಗಳ ಸಂಖ್ಯೆ ಸಾಕಷ್ಟು ಕಡಿಮೆಯಿದೆ.

ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಉತ್ತಮವಿದ್ದರೂ, ಪ್ಲಾಸ್ಮಾ ದಾನಿಗಳ ಸಂಖ್ಯೆ ಕಡಿಮೆಯೇಕೆ?
- ಪ್ಲಾಸ್ಮಾ ಚಿಕಿತ್ಸೆಗೆ ಸರ್ಕಾರ ಕೂಡ ಸೌಲಭ್ಯಗಳನ್ನು ಒದಗಿಸಬೇಕು. ಇದರ ವಿಳಂಬ ಈ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡುತ್ತಿದೆ. ಸರ್ಕಾರದಲ್ಲಿ ಹಲವು ಗೌಪ್ಯತೆ, ದತ್ತಾಂಶದಂತಹ ಹಲವು ಸಮಸ್ಯೆಗಳಿವೆ. ಇದನ್ನು ಬಗೆಹರಿಸಲು ಸ್ವಲ್ಪ ಸಮಯ ಬೇಕಾಗಬಹುದು. ಎರಡನೇ ಅಡ್ಡಿಯೆಂದರೆ, ಜನರಲ್ಲಿ ಈ ಕುರಿತು ಹೆಚ್ಚಿನ ಮಾಹಿತಿಯಿಲ್ಲ. ರೋಗಿಗಳು ಅವರದ್ದೇ ಆದ ಖಿನ್ನತೆ, ಆಯಾಸದಂತಹ ತೊಂದರೆಗಳನ್ನು ಎದುರಿಸುತ್ತಿರುತ್ತಾರೆ. ರೋಗಿಗಳು ಆಸ್ಪತ್ರೆಯಿಂದ ಗುಣಮುಖರಾಗಿ ಹೊರಬರುವಷ್ಟರಲ್ಲಿ ಸಾಕಷ್ಟು ಹೈರಾಣಾಗಿರುತ್ತಾರೆ. ಆದ್ದರಿಂದ ಹಲವು ತಕ್ಷಣ ಮುಂದೆ ಬಂದು ಪ್ಲಾಸ್ಮಾ ನೀಡಲು ಇಚ್ಛಿಸುವುದಿಲ್ಲ.

ಜನರಲ್ಲಿ ಪ್ಲಾಸ್ಮಾ ದಾನದ ಕುರಿತು ಅರಿವು ಮೂಡಿಸಲು ಏನು ಕ್ರಮ ಕೈಗೊಳ್ಳಲಾಗಿದೆ?
ಪ್ಲಾಸ್ಮಾ ದಾನಿಗಳ ಸಂಖ್ಯೆ ಅತ್ಯಂತ ಕಡಿಮೆ ಇರುವುದರಿಂದ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಒಂದು ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು.

ದಾನಿಗಳಿಗೆ 5 ಸಾವಿರ ರೂ. ನೀಡುವ ಯೋಜನೆ ಅಂತಿಮವಾಗಿದೆಯೇ?
-5 ಸಾವಿರ ರೂ. ನೆರವು ನೀಡುವ ಯೋಜನೆಯನ್ನು ಕೇವಲ ಘೋಷಿಸಲಾಗಿದೆಯಷ್ಟೇ. ಆದರೆ, ಅದನ್ನು ಹೇಗೆ ಹಾಗೂ ಯಾವ ಮಾರ್ಗದ ಮೂಲಕ ವಿತರಿಸಬೇಕು ಎಂಬುದರ ಕುರಿತು ಇನ್ನೂ ಯೋಜನೆ ಸಿದ್ಧವಾಗಬೇಕಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com