ಸುವರ್ಣಸೌಧಕ್ಕೆ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಲು ಕ್ರಮ ವಹಿಸಿ: ಬಿ.ಎಸ್.ಯಡಿಯೂರಪ್ಪ

ರಾಜ್ಯ ಮಟ್ಟದ ಹಲವಾರು ಸರ್ಕಾರಿ ಕಚೇರಿಗಳನ್ನು ಒಂದು ತಿಂಗಳಲ್ಲಿ ಗುರುತಿಸಿ ಬೆಂಗಳೂರಿನಿಂದ ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತರಿಸುವುದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಗತವಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಲೋಕೋಪಯೋಗಿ ಇಲಾಖೆ ಸಭೆ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಲೋಕೋಪಯೋಗಿ ಇಲಾಖೆ ಸಭೆ
Updated on

ಬೆಂಗಳೂರು: ರಾಜ್ಯ ಮಟ್ಟದ ಹಲವಾರು ಸರ್ಕಾರಿ ಕಚೇರಿಗಳನ್ನು ಒಂದು ತಿಂಗಳಲ್ಲಿ ಗುರುತಿಸಿ ಬೆಂಗಳೂರಿನಿಂದ ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತರಿಸುವುದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಗತವಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.

ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಭೆಯಲ್ಲಿ ಮಾತನಾಡಿ, ಮುಂದಿನ ಸಭೆಯೊಳಗೆ ಹಲವಾರು ಕಚೇರಿಗಳು ಅಲ್ಲಿ ಕೆಲಸ ನಿರ್ವಹಿಸುವುದನ್ನು ಖುದ್ದಾಗಿ ಪರಿಶೀಲಿಸುವುದಾಗಿ ಎಚ್ಚರಿಸಿದರು.

ಪ್ರವಾಹದಿಂದ ಹಾಳಾದ ರಸ್ತೆ ಮತ್ತು ಸೇತುವೆಗಳ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸುವಂತೆ ಸಹ ಸೂಚಿಸಿದರು.

ರಾಜ್ಯದಲ್ಲಿ ಪ್ರವಾಹ ಕಾಮಗಾರಿಗಳನ್ನು 500 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿದ್ದು, ಪ್ರವಾಹದಿಂದ ಹಾಳಾಗಿರುವ 1,800 ರಸ್ತೆ ಕಾಮಗಾರಿಗಳ ಪೈಕಿ 1,700 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಸೇತುವೆ ನಿರ್ಮಾಣ/ ದುರಸ್ಥಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮುಖ್ಯಮಂತ್ರಿಗಳಿಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಇಂಜಿನಿಯರ್ ಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿರುವುದರಿಂದ ನಿರುದ್ಯೋಗಿ ಇಂಜಿನಿಯರ್ ಗಳನ್ನು ತರಬೇತುದಾರರೆಂದು ನೇಮಕ ಮಾಡಲು ಸಿಎಂ ಆದೇಶಿಸಿದರು.

ಶಿವಮೊಗ್ಗ ನಗರದ ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿಯನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು, ವಿಜಯಪುರ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಜಮೀನನ್ನು ಈಗಾಗಲೇ ಗುರುತಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪುನರ್ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದರು.

ವಿವಿಧ ಇಂಜಿನಿಯರಿಂಗ್ ಇಲಾಖೆಗಳ ದರಪಟ್ಟಿಯನ್ನು ಪರಿಶೀಲಿಸಿ ರಾಜ್ಯಾದ್ಯಂತ ಏಕರೂಪ ದರಪಟ್ಟಿಯನ್ನು ಪ್ರಕಟಿಸಲು ಇಲಾಖೆಯ ನಿವೃತ್ತ ಅಧಿಕಾರಿಗಳ ತಾಂತ್ರಿಕ ಸಮಿತಿ ಅಧ್ಯಯನ ನಡೆಸುತ್ತಿದ್ದು, ಶೀಘ್ರದಲ್ಲಿಯೇ ವರದಿ ಸಲ್ಲಿಸಲಿದ್ದಾರೆ. ಏಕರೂಪ ದರಪಟ್ಟಿ ಹೊರಬಂದಲ್ಲಿ ಇಲಾಖೆಗೆ ನೂರಾರು ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಉಳಿಸಬಹುದಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸಭೆಯಲ್ಲಿ ಹೇಳಿದರು.

ರಾಜ್ಯದಲ್ಲಿ ಒಟ್ಟು 4,813 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳನ್ನು 30,675 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಂತರ್ಜಲ ವೃದ್ಧಿ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಸೇತುವೆಗಳ ತಳಭಾಗದಲ್ಲಿ ಒಂದು ಮೀಟರ್ ತಡೆಗೋಡೆ ನಿರ್ಮಿಸಿ ನೀರಿನ ಸಂಗ್ರಹಣೆ ಮಾಡಲು ಮುಖ್ಯಮಂತ್ರಿಗಳು ಸಲಹೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com