ಬೆಂಗಳೂರು: ಕಾರ್ಪೋರೇಟರ್ ಇಮ್ರಾನ್ ಪಾಷಾ ಸಹೋದರರು ಸೇರಿ 27 ಜನರ ಬಂಧನ
ಬೆಂಗಳೂರು: ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೊಂಡ ಪಾದರಾಯನಪುರ ವಾರ್ಡ್ ಕಾರ್ಪೋರೇಟರ್ ಇಮ್ರಾನ್ ಪಾಷಾ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸಹೋದರರು ಸೇರಿ 27 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕೊರೋನಾ ಸೋಂಕು ತಗುಲಿದ್ದು ದೃಢಪಟ್ಟಿದ್ದರಿಂದ ಇಮ್ರಾನ್ ಪಾಷ ಅವರು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಜೂ. 7ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಈ ವೇಳೆಯೇ ಅವರನ್ನು ತೆರೆದ ವಾಹನದಲ್ಲಿ ಆಸ್ಪತ್ರೆಯಿಂದ ಮನೆಯವರೆಗೂ ಮೆರವಣಿಗೆ ಮಾಡಲಾಗಿತ್ತು. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮೆರವಣಿಗೆ ಮಾಡಲು ಪೊಲೀಸರು ತಡೆ ಒಡ್ಡಿದ್ದರು. ಆದರೂ, ಇವರು ನಿಯಮವನ್ನು ಗಾಳಿಗೆ ತೂರಿ ಪೊಲೀಸರಿಗೆ ಸೆಡ್ಡು ಹೊಡೆದಿದ್ದರು.
ಬಂಧಿತರ ಪೈಕಿ ಕೆಲವರು ಒಂದೇ ಬೈಕ್ ನಲ್ಲಿ ಮೂವರು ಸಂಚರಿಸುತ್ತಿದ್ದರು. ಹಲವರು ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಮೆರವಣಿಗೆ ನಡೆಸಿದರು. ನಂತರ ಎಚ್ಚೆತ್ತುಕೊಂಡ ಪೊಲೀಸರು ಮೆರವಣಿಗೆಗೆ ಕಡಿವಾಣ ಹಾಕಿದರು.
ಘಟನೆಗೆ ಸಂಬಂಧಿಸಿದಂತೆ ಜಗಜೀವನರಾಮ್ ನಗರ ಠಾಣೆ ಪೊಲೀಸರು, ಕಾರ್ಪೋರೇಟರ್ ಇಮ್ರಾನ್ ಸೇರಿ ಹಲವರನ್ನು ಬಂಧಿಸಿದ್ದರು. ಇದೀಗ ಅವರ ಸಹೋದರರು ಸೇರಿ 27 ಜನರನ್ನು ಬಂಧಿಸಿದ್ದಾರೆ.
ಇಮ್ರಾನ್ ಸಹೋದರರೇ ಮೆರವಣಿಗೆ ನೇತೃತ್ವ ವಹಿಸುವ ಮೂಲಕ ಬೆಂಬಲಿಗರನ್ನು ಸೇರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಇವರೆಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬಂಧಿತರೆಲ್ಲರ ಗಂಟಲಿನ ದ್ರವ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ