ರಾಜ್ಯದ 10 ಪ್ರಮುಖ ದೇವಾಲಯಗಳ ಪಟ್ಟಿಗೆ ಹುಲಿಗಿ ಸೇರ್ಪಡೆ: ಅಧಿಕಾರಿ ಮುಂದುವರಿಕೆಗೆ ಡಿಸಿ ಒಲವು

ಭಕ್ತರು ಅತಿಹೆಚ್ಚು ಭೇಟಿ ನೀಡಿ ದರ್ಶನ ಪಡೆಯುವ ಹಾಗೂ ಅತಿ ಹೆಚ್ಚು ಆದಾಯ ಹೊಂದಿರುವ ರಾಜ್ಯದ ಹತ್ತು ಪ್ರಮುಖ ದೇವಾಲಯಗಳ ಪಟ್ಟಿಯಲ್ಲಿ ಕೊಪ್ಪಳ ತಾಲ್ಲೂಕಿನ ಹುಲಿಗಿಯೂ ಸ್ಥಾನ ಪಡೆದಿದೆ.
ಹುಲಿಗಿ ದೇವಸ್ಥಾನ
ಹುಲಿಗಿ ದೇವಸ್ಥಾನ

ಗಂಗಾವತಿ: ಭಕ್ತರು ಅತಿಹೆಚ್ಚು ಭೇಟಿ ನೀಡಿ ದರ್ಶನ ಪಡೆಯುವ ಹಾಗೂ ಅತಿ ಹೆಚ್ಚು ಆದಾಯ ಹೊಂದಿರುವ ರಾಜ್ಯದ ಹತ್ತು ಪ್ರಮುಖ ದೇವಾಲಯಗಳ ಪಟ್ಟಿಯಲ್ಲಿ ಕೊಪ್ಪಳ ತಾಲ್ಲೂಕಿನ ಹುಲಿಗಿಯೂ ಸ್ಥಾನ ಪಡೆದಿದೆ.

ಈ ಹಿನ್ನೆಲೆ ತಾಲ್ಲೂಕಿನ ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿ ದೇವಸ್ಥಾನದ ಮುಖ್ಯಕಾರ್ಯನಿರ್ವಾಹಣ ಅಧಿಕಾರಿಯಾಗಿರುವ ಸಿ.ಎಸ್. ಚಂದ್ರಮೌಳಿ, ಜೂನ್ ತಿಂಗಳಲ್ಲಿ ವಯೋ ನಿವೃತ್ತಿಯಾಗಲಿದ್ದಾರೆ. ಆದರೆ ಅವರ ಸೇವೆಯನ್ನು ಮುಂದುವರೆಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವ ಜಿಲ್ಲಾಧಿಕಾರಿಗಳು, ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಮಾತ್ರವಲ್ಲದೇ ಕನಕಗಿರಿಯ ಕನಕಾಚಲ ದೇಗುಲದ ಅಭಿವೃದ್ಧಿಯ ಹಾಗೂ ಆದಾಯ ಸಂಗ್ರಹಣೆಯಲ್ಲಿ ಜಾರಿಗೆ ತಂದ ಸುಧಾರಣೆಗಳಲ್ಲಿ ಚಂದ್ರಮೌಳಿ ಅವರ ಪಾತ್ರ ದೊಡ್ಡದು ಎಂದು ತಿಳಿಸಿದ್ದಾರೆ.

ಹುಲಿಗೆಮ್ಮ ದೇಗುಲ ಸೇರಿದಂತೆ ನಾನಾ ದೇಗುಲಗಳ ಆಡಳಿತಾಧಿಕಾರಿಯಾಗಿದ್ದ ಚಂದ್ರಮೌಳಿ ಅವರಿಂದ ಸುಮಾರು ಒಂಭತ್ತು ಕೋಟಿ ಮೌಲ್ಯದ ಆದಾಯ ಸರ್ಕಾರಕ್ಕೆ ಬಂದಿದೆ. ಹೀಗಾಗಿ ಜೂನ್ ತಿಂಗಳಲ್ಲಿ ವಯೋ ನಿವೃತ್ತಿಯಾಗಲಿರುವ ಚಂದ್ರಮೌಳಿ ಅವರನ್ನು ದೇಗುಲದ ಸಮಿತಿಗಳ ವೆಚ್ಚದ ಷರತ್ತಿಗೆ ಒಳಪಟ್ಟು ವಿಶೇಷ ಅಧಿಕಾರಿಯನ್ನಾಗಿ ನಿಯೋಜಿಸಬೇಕು. 2007ರಲ್ಲಿ ಕರ್ತವ್ಯಕ್ಕೆ ನಿಯೋಜನೆಯಾದಾಗ ಹುಲಿಗೆಮ್ಮ ದೇಗುಲದ ಆದಾಯ ಒಂದು ಕೋಟಿ ಇತ್ತು. ಆದರೆ ಕಳೆದ 13 ವರ್ಷದಲ್ಲಿ ಈ ಆದಾಯವನ್ನು ಒಂಭತ್ತು ಕೋಟಿ ಮೊತ್ತಕ್ಕೆ ಏರಿಸುವಲ್ಲಿ ಹಲವು ದಿಟ್ಟ ಕ್ರಮಗಳನ್ನು ಚಂದ್ರಮೌಳಿ ಕೈಗೊಂಡಿದ್ದಾರೆ. ಈ ಮೂಲಕ ಧಾರ್ಮಿಕ ತಾಣದಲ್ಲಿ ಸ್ವಚ್ಛತೆಯ ಜೊತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ದಕ್ಷ ಹಾಗೂ ಪಾರದರ್ಶಕ ಆಡಳಿತದಿಂದಾಗಿ ಇಂದು ದೇಗುಲಕ್ಕೆ ಸಾಕಷ್ಟು ಆದಾಯ ಬಂದಿದೆ.

ರಾಜ್ಯದ ಪ್ರಮುಖ ಹತ್ತು ದೇವಾಲಯಗಳ ಪಟ್ಟಿಯಲ್ಲಿ ಹುಲಿಗಿ ದೇವಾಲಯವೂ ಸೇರಿದೆ. ವಿಶಾಲ ರಸ್ತೆ ನಿರ್ಮಾಣ, ವಾಣಿಜ್ಯ ಮಳಿಗೆ ನಿರ್ಮಾಣ, ದೇಗುಲದ ಸಮಗ್ರ ಅಭಿವೃದ್ಧಿಗೆ 26 ಎಕರೆ ಜಮೀನು ಖರೀದಿಸಿದ ಕೀರ್ತಿ ಚಂದ್ರಮೌಳಿ ಅವರದ್ದು ಎಂದು ಹೇಳಿದ್ದಾರೆ.
-ಶ್ರೀನಿವಾಸ್ ಎಂ ಜೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com