ಕರ್ನಾಟಕಕ್ಕೆ ಲಾಕ್‌ಡೌನ್‌ ಅಗತ್ಯವಿಲ್ಲ; ನಿರ್ಬಂಧ ಇನ್ನಷ್ಟು ಸಡಿಲಿಕೆಗೆ ಮನವಿ: ಬಿ.ಎಸ್. ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಂದು ಬೆಂಗಳೂರಿನ ಶಂಕರ ಮಠಕ್ಕೆ ಭೇಟಿ ನೀಡಿ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್‌-19 ಸೋಂಕಿನಿಂದ ರಾಜ್ಯವನ್ನು ರಕ್ಷಿಸುವಂತೆ ವಿಶೇಷ ಪ್ರಾರ್ಥನೆ ನಡೆಸಿದರು. ಇದೇ ವೇಳೆ ವಿಶೇಷ ಹೋಮ ನಡೆಸಲಾಯಿತು.
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ
Updated on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಂದು ಬೆಂಗಳೂರಿನ ಶಂಕರ ಮಠಕ್ಕೆ ಭೇಟಿ ನೀಡಿ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್‌-19 ಸೋಂಕಿನಿಂದ ರಾಜ್ಯವನ್ನು ರಕ್ಷಿಸುವಂತೆ ವಿಶೇಷ ಪ್ರಾರ್ಥನೆ ನಡೆಸಿದರು. ಇದೇ ವೇಳೆ ವಿಶೇಷ ಹೋಮ ನಡೆಸಲಾಯಿತು.

ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಕೋವಿಡ್‌ ಕಾಟ ಇಲ್ಲವಾಗಿ ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂಬ ಉದ್ದೇಶದಿಂದ ದೇವರಲ್ಲಿ ಪ್ರಾರ್ಥನೆ ಮಾಡಲು ಇಲ್ಲಿಗೆ ಆಗಮಿಸಿದ್ದೇನೆ. ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲದಿದ್ದರೂ ಕೂಡ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, 50 ಲಕ್ಷ ರೈತರಿಗೆ ಈ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಪ್ರತಿಯೊಬ್ಬ ರೈತರಿಗೆ 2000 ರೂಪಾಯಿ ಕೊಡುವಂತಹ ಯೋಜನೆಯಡಿ ಈಗಾಗಲೆ ಎರಡು ಸಾವಿರ ರೂಪಾಯಿ ನೀಡಲಾಗಿದೆ. ಪ್ರಧಾನಿ ಮೋದಿ ಆರು ಸಾವಿರ ರೂ.ಯನ್ನು ರೈತರಿಗೆ ನೀಡುತ್ತಿದ್ದಾರೆ. ಅದಕ್ಕೆ ನಾವು ನಾಲ್ಕು ಸಾವಿರ ರೂಪಾಯಿ ಸೇರಿಸಿಕೊಡುವುದಾಗಿ ಘೋಷಿಸಿದ್ದೆವು. ಈಗಾಗಲೆ 2 ಸಾವಿರ ರೂ.ನೀಡಿದ್ದು, 50 ಲಕ್ಷ ರೈತರಿಗೆ ತಲಾ 2000 ರೂ.ನೀಡಲು ಒಂದು ಸಾವಿರ ಕೋಟಿ ರೂಪಾಯಿ ನಿನ್ನೆ ಬಿಡುಗಡೆ ಮಾಡಲಾಗಿದೆ. ರೈತರ ಸಂಕಷ್ಟ ಕಾಲದಲ್ಲಿ ಹಣಕಾಸು ಸ್ಥಿತಿ ಸರಿಯಿಲ್ಲದಿದ್ದರೂ ಅವರು ನೆಮ್ಮದಿಯಿಂದ ಬದುಕಬೇಕು, ಮಳೆಗಾಲದಲ್ಲಿ ಈ ಹಣ ಉಪಯೋಗ ಆಗಬೇಕು ಎಂಬ ಕಾರಣದಿಂದ ಹಣ ಬಿಡುಗಡೆ ಮಾಡಿದ್ದೇನೆ ಎಂದರು.

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಹಳ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲರೂ ಒಟ್ಟಾಗಿ ಸೇರಿ ಇಡೀ ದೇಶದಲ್ಲಿ ಕೋವಿಡ್ ನಿಯಂತ್ರಿಸಬೇಕಾಗಿದೆ ಎಂದರು.
ಕೋವಿಡ್‌ ಪರೀಕ್ಷೆ ಕಡಿಮೆಯಾಗಿಲ್ಲ. ಅದನ್ನು ಇನ್ನಷ್ಟು ಹೆಚ್ಚಿಸಲಾಗುತ್ತಿದೆ. ಇಡೀ ದೇಶದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಪರೀಕ್ಷೆ ನಡೆಯುತ್ತಿದೆ. ನಾಳೆ ಪ್ರಧಾನಿಯೊಂದಿಗೆ ವಿಡಿಯೋ ಸಂವಾದ ನಡೆಸಲಾಗುತ್ತದೆ. ಕರ್ನಾಟಕಕ್ಕೆ ಲಾಕ್‌ಡೌನ್‌ ಅಗತ್ಯವಿಲ್ಲ. ಇನ್ನೂ ಕೆಲವು ವಲಯಗಳನ್ನು ನಿರ್ಬಂಧದಿಂದ ತೆರವುಗೊಳಿಸುವಂತೆ ಪ್ರಧಾನಿಯವರಿಗೆ ಮನವಿ ಮಾಡುತ್ತೇವೆ. ಆರ್ಥಿಕ ಸ್ಥಿತಿ ಸುಧಾರಣೆಗೆ, ಜನರ ಜೀವನ ಮಟ್ಟ ಸುಧಾರಿಸಲು ಅವಕಾಶ ಮಾಡಿಕೊಂಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.

ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಬೇಡಿ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

ಆರ್ಥಿಕ ಸಮಸ್ಯೆ ಇದ್ದಾಗ್ಯೂ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸದಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಂದು ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಇಲಾಖೆಯ ಕಾರ್ಯಕ್ರಮ ಅನುಷ್ಠಾನದಲ್ಲಿ 2019-20ನೇ ಸಾಲಿನಲ್ಲಿ ಶೇ. 97 ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ ಇಬ್ಬರು ಐಎಎಸ್, ಇಬ್ಬರು ಐಪಿಎಸ್, 13 ಅಭ್ಯರ್ಥಿಗಳು ಐಆರ್ಎಸ್ ಸೇವೆಗೆ ಆಯ್ಕೆಯಾಗಿರುವುದು ಸೇರಿದಂತೆ ಒಟ್ಟು 268 ಅಭ್ಯರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ವಿವಿಧ ಸೇವೆಗಳಿಗೆ ಸೇರ್ಪಡೆಯಾಗಿರುವ ಕುರಿತು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com