ಐಟಿಐಗಳಿಗೆ ಕೈಗಾರಿಕೋದ್ಯಮಿಗಳನ್ನೊಳಗೊಂಡ ಸಲಹಾ ಸಮಿತಿ ರಚನೆ: ಮುಖ್ಯಮಂತ್ರಿ ಸೂಚನೆ

ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಸಲಹಾ ಸಮಿತಿ ರಚಿಸಿ, ಕೈಗಾರಿಕಾ ವಲಯದ ತಜ್ಞರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡುವ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ
Updated on

ಬೆಂಗಳೂರು: ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಸಲಹಾ ಸಮಿತಿ ರಚಿಸಿ, ಕೈಗಾರಿಕಾ ವಲಯದ ತಜ್ಞರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡುವ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಇದರಿಂದ ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತಿ ಗುಣಮಟ್ಟ ಹೆಚ್ಚುವುದಲ್ಲದೆ, ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಸಹ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಪ್ರಸ್ತುತ 112 ಐಟಿಐಗಳು ಕೈಗಾರಿಕೆಗಳೊಂದಿಗೆ ಕೈಜೋಡಿಸಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಸ್ಥೆಗಳು ಕೈಗಾರಿಕಾ ಸಂಸ್ಥೆಗಳ ಸಹಯೋಗದೊಂದಿಗೆ ಕೈಗಾರಿಕಾ ವಲಯಗಳಲ್ಲಿ ಬೇಡಿಕೆ ಇರುವ ವಿಷಯಗಳ ಕುರಿತು ತರಬೇತಿ ನೀಡಲು ಆದ್ಯತೆ ನೀಡುವಂತೆ ಸಲಹೆ ನೀಡಿದರು. ಇಲಾಖೆಯ ಕಾರ್ಯಕ್ರಮಗಳಡಿ ಪ್ರಸಕ್ತ ವರ್ಷದಲ್ಲಿ ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾದ ತರಬೇತಿಯನ್ನು ನೀಡುವ ಮೂಲಕ ಉದ್ಯೋಗಾವಕಾಶ ದೊರೆಯುವ ಸಾಧ್ಯತೆಗಳನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಕೋವಿಡ್ ನಂತರ ಹೊರದೇಶ ಹಾಗೂ ಹೊರರಾಜ್ಯಗಳಿಂದ ಹಿಂತಿರುಗಿರುವ ರಾಜ್ಯದ ಜನರ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಅವರ ವಿವರಗಳನ್ನುಇಲಾಖೆಯು ನೋಂದಣಿ ಮಾಡಿಕೊಳ್ಳುತ್ತಿದ್ದು, ಈ ವರೆಗೆ ಸುಮಾರು 41 ಸಾವಿರ ಜನ ನೋಂದಣಿ ಮಾಡಿಕೊಂಡಿದ್ದಾರೆ. ಕೃಷಿ, ಪ್ರವಾಸೋದ್ಯಮ ಮತ್ತು ನಿರ್ಮಾಣ ಚಟುವಟಿಕೆ ವಲಯಗಳಲ್ಲಿ ತರಬೇತಿಗೆ ಹಾಗೂ ಉದ್ಯೋಗಾವಕಾಶಕ್ಕೆ ಹೆಚ್ಚಿನ ಬೇಡಿಕೆ ಸಲ್ಲಿಸಿದ್ದಾರೆ.

ಕೋವಿಡ್ 19 ನಿರ್ವಹಣೆ
ಕೋವಿಡ್ 19ರ ವಿರುದ್ಧದ ಹೋರಾಟದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಮುಖ ಪಾತ್ರ ವಹಿಸಿದ್ದು, ಇದರಿಂದ ಸ್ವಸಹಾಯ ಸಂಘಗಳ ಸದಸ್ಯರಿಗೆ ಆದಾಯ ಉತ್ಪನ್ನವೂ ಆಗಿದೆ. ಸ್ವಸಹಾಯ ಗುಂಪುಗಳು ಮಾಸ್ಕ್, ಸ್ಯಾನಿಟೈಸರ್, ಫೆನಾಯಿಲ್, ಪ್ರೊಟೆಕ್ಟಿವ್ ಗೌನ್ಸ್, ಹೆಡ್ ಗೇರ್ಸ್, ಮೊದಲಾದವುಗಳನ್ನು ತಯಾರಿಸಿ, ಒದಗಿಸಿದ್ದಾರೆ. ಇದರಿಂದ ಪ್ರತಿದಿನ ಸದಸ್ಯರಿಗೆ 500 ರೂ. ನಷ್ಟು ಆದಾಯ ದೊರೆತಿದೆ.

ಜಿಟಿಟಿಸಿ ಸಂಸ್ಥೆಯ ವತಿಯಿಂದ ಮೆಡಿಕಲ್ ವೆಂಟಿಲೇಟರ್ ಗೆ ಅಗತ್ಯವಿರುವ ಬಿಡಿಭಾಗಗಳನ್ನು ತಯಾರಿಸಲಾಗುತ್ತಿದೆ.
ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ 987 ನಗರ ವಸತಿ ರಹಿತರಿಗೆ ಲಾಕ್ ಡೌನ್ ಸಂದರ್ಭದಲ್ಲಿ ಊಟ, ಉಪಾಹಾರ ಒದಗಿಸಲಾಗಿದೆ. ಅಲ್ಲದೆ, 98 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.. ವಿಜಯಭಾಸ್ಕರ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com