ಪ್ರವಾಸೋದ್ಯಮ ಪುನಶ್ಚೇತನಕ್ಕೆ ಅಗತ್ಯ ಕ್ರಮ: ಕಾರವಾನ್ ಮಿನಿ ಬಸ್‌ಗೆ ಮುಖ್ಯಮಂತ್ರಿ ಚಾಲನೆ

ಮುಖ್ಯಮಂತ್ರಿ ಬಿ.ಎಸ್,.ಯಡಿಯೂರಪ್ಪ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸ್ಮಾರ್ಟ್ ಆಪ್ ಯೋಜನೆಯಡಿ ಕಾರವಾನ್‌ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಅಭಿವೃದ್ಧಿಪಡಿಸಿರುವ ನೂತನ ಕಾರವಾನ್ (ಮಿನಿ ಬಸ್‌)ಗಳಿಗೆ ಹಸಿರುನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಕಾರವಾನ್ ಮಿನಿ ಬಸ್‌ಗೆ ಚಾಲನೆ ನೀಡಿದ ಮುಖ್ಯಮಂತ್ರಿ
ಕಾರವಾನ್ ಮಿನಿ ಬಸ್‌ಗೆ ಚಾಲನೆ ನೀಡಿದ ಮುಖ್ಯಮಂತ್ರಿ
Updated on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್,.ಯಡಿಯೂರಪ್ಪ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸ್ಮಾರ್ಟ್ ಆಪ್ ಯೋಜನೆಯಡಿ ಕಾರವಾನ್‌ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಅಭಿವೃದ್ಧಿಪಡಿಸಿರುವ ನೂತನ ಕಾರವಾನ್ (ಮಿನಿ ಬಸ್‌)ಗಳಿಗೆ ಹಸಿರುನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪ್ರವಾಸೋದ್ಯಮ ಅತಿ ಹೆಚ್ಚು ಉದ್ಯೋಗಗಳನ್ನು ಸೃಜಿಸುವ ಉದ್ಯಮವಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಹಿನ್ನಡೆ ಉಂಟಾಗಿರುವುದು ಸರ್ವವೇದ್ಯವಾಗಿದೆ. ಈ ಸನ್ನಿವೇಶದಲ್ಲಿ ನಿರುದ್ಯೋಗ ನಿವಾರಣೆಯ ದಿಕ್ಕಿನಲ್ಲಿ ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ರಾಜ್ಯದ ಜಿ.ಡಿ.ಪಿ.ಗೆ ಪ್ರವಾಸೋದ್ಯಮದ ಕೊಡುಗೆ ಶೇಕಡಾ 14 ರಷ್ಟಿದ್ದು, ಮುಂದಿನ ದಿನಗಳಲ್ಲಿ ಈ ಗುರಿಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಕೋವಿಡ್-19ರ ನಂತರದ ದಿನಗಳಲ್ಲಿ ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಕಾರವಾನ್ (ಮಿನಿ ಬಸ್) ಪ್ರವಾಸೋದ್ಯಮಕ್ಕೆ ಇಂದು ಚಾಲನೆ ನೀಡಲಾಗಿದೆ. ಕಾರವಾನ್ ಪ್ರವಾಸೋದ್ಯಮ ಪರಿಕಲ್ಪನೆಯು ಸ್ವತಂತ್ರ ತಿರುಗಾಟದ ಅನುಭವಕ್ಕಾಗಿ ಅತ್ಯಂತ ಜನಪ್ರಿಯವಾಗಿದೆ. ಪ್ರವಾಸದ ಅವಧಿಯಲ್ಲಿ ಸೂಕ್ತ ರಕ್ಷಣೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಾರವಾನನಲ್ಲಿ ಪ್ರವಾಸ ಕೈಗೊಳ್ಳುವುದು ಸೂಕ್ತವಾಗಿದೆ. ಕಾರವಾನ್‍ಗಳ ನಿಲುಗಡೆಗೆ ಪ್ರಾಥಮಿಕ ಹಂತದಲ್ಲಿ ರಾಜ್ಯ ಸರ್ಕಾರದ ಸಂಸ್ಥೆಗಳಾದ ಅರಣ್ಯ ವಸತಿ ಮತ್ತು ವಿಹಾರಧಾಮ ಹಾಗೂ ಕೆ.ಎಸ್.ಟಿ.ಡಿ.ಸಿ ಘಟಕಗಳ ಆವರಣದಲ್ಲಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಪ್ರಾಥಮಿಕ ಹಂತದಲ್ಲಿ ಹಂಪಿ, ಗೋಕರ್ಣ, ಬಾದಾಮಿ, ಕುದುರೆಮುಖ, ಸಕಲೇಶಪುರ, ಬೇಲೂರು, ಹಳೇಬೀಡು, ಸಕ್ರೆಬೈಲು ಹಾಗೂ ಕೊಡಗು ಪ್ರವಾಸಿ ತಾಣಗಳಲ್ಲಿ ಕಾರವಾನ್‍ಗಳನ್ನು ನಿಯೋಜಿಸಲಾಗುವುದು. ರಾಜ್ಯದ ನೂತನ ಪ್ರವಾಸಿ ನೀತಿಯನ್ವಯ ಇನ್ನೂ ಹೆಚ್ಚಿನ ಪ್ರವಾಸಿ ತಾಣಗಳಲ್ಲಿ ಕಾರವಾನ್ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲಾಗುವುದು. ಕಳೆದ ವಾರವಷ್ಟೇ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಕರೆದು ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಚರ್ಚಿಸಲಾಗಿದೆ. ಕೋವಿಡ್-19 ನಿಂದಾಗಿ ಪ್ರವಾಸೋದ್ಯಮ ವಲಯದಲ್ಲಿ ಸುಮಾರು 15 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 20 ಪ್ರಮುಖ ತಾಣಗಳ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ಸಿದ್ಧವಾಗಿದ್ದು, ಇವುಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಸೂಚನೆ ನೀಡಿದ್ದೇನೆ. ರಾಜ್ಯಕ್ಕೆ ಪ್ರವಾಸಿಗರನ್ನು ಆಕರ್ಷಿಸುವ, ಅತ್ಯುತ್ತಮ ಪ್ರವಾಸಿ ಗಮ್ಯವಾಗಿಸುವ ನಿಟ್ಟಿನಲ್ಲಿ ಎಲ್ಲ ಪಾಲುದಾರರೂ ಕೈಜೋಡಿಸಬೇಕು. ಪ್ರವಾಸೋದ್ಯಮ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದ್ದು, ಕಾರವಾನ್ ಪ್ರವಾಸೋದ್ಯಮ ಇದಕ್ಕೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಭಾರತ - ಚೀನಾ ಗಡಿಯಲ್ಲಿ ಘರ್ಷಣೆ ವಿಚಾರದ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಚರ್ಚೆ ನಡೆಸಿದ್ದಾರೆ. ಚೀನಾದು ಹದ್ದು ಮೀರಿದ ನಡವಳಿಕೆಯಾಗಿದೆ. ನಾವು ಶಾಂತಿ ಭಯಸಿದರೆ ಅವರು ಗೊಂದಲವುಂಟು ಮಾಡುತ್ತಿದ್ದಾರೆ. ಇದರಿಂದ ಅನೇಕ ನಮ್ಮ ಯೋಧರು ಹುತಾತ್ಮರಾಗಿದ್ದಾರೆ. ಚೀನಾಕ್ಕೆ‌ ತಕ್ಕ ಪಾಠ ಕಲಿಸುವ ಶಕ್ತಿ ಸಾಮರ್ಥ್ಯ ಭಾರತಕ್ಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com