ಪಿಯುಸಿ ಪರೀಕ್ಷೆಗೆ ಬರೆದ ವಿದ್ಯಾರ್ಥಿನಿಗೆ ಕೊರೋನಾ ಸುದ್ದಿ ಸುಳ್ಳು: ಸಚಿವ ಸುರೇಶ್‍ ಕುಮಾರ್

ಗುರುವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಬೆಂಗಳೂರಿನ ಜಯನಗರದ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ಕ್ವಾರಂಟೈನ್ ಮೊಹರನ್ನು ಅಳಿಸಿಕೊಂಡು ಹಾಜರಾಗಿದ್ದಾಳೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಈ ವಿದ್ಯಾರ್ಥಿನಿಯ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ‘ಕೊರೋನಾ ನೆಗೆಟಿವ್’ ಎಂಬುದು ಸ್ಪಷ್ಟವಾಗಿ ದೃಢಪಟ್ಟಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ
ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್
Updated on

ಬೆಂಗಳೂರು: ಗುರುವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಬೆಂಗಳೂರಿನ ಜಯನಗರದ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ಕ್ವಾರಂಟೈನ್ ಮೊಹರನ್ನು ಅಳಿಸಿಕೊಂಡು ಹಾಜರಾಗಿದ್ದಾಳೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಈ ವಿದ್ಯಾರ್ಥಿನಿಯ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ‘ಕೊರೋನಾ ನೆಗೆಟಿವ್’ ಎಂಬುದು ಸ್ಪಷ್ಟವಾಗಿ ದೃಢಪಟ್ಟಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ವಿದ್ಯಾರ್ಥಿನಿಯೊಬ್ಬಳು ಕ್ವಾರಂಟೈನ್ ಮೊಹರು ಅಳಿಸಿ ಪರೀಕ್ಷೆಗೆ ಹಾಜರಾಗಿದ್ದಾಳೆಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿದ್ಯಾರ್ಥಿನಿಯ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ಇಂದು ಮಧ್ಯಾಹ್ನ 2.54ಕ್ಕೆ ವರದಿಯನ್ನೂ ಸಹ ಪಡೆಯಲಾಗಿದೆ. ಈ ವರದಿಯಲ್ಲಿ ‘ಕೊರೋನಾ ನೆಗೆಟಿವ್’ ಎಂಬುದು ಸ್ಪಷ್ಟವಾಗಿ ದೃಢಪಟ್ಟಿದೆ. ಹಾಗಾಗಿ ಆಕೆ ಪರೀಕ್ಷೆ ಬರೆದ ಕೊಠಡಿಯಲ್ಲಿ ಹಾಜರಿದ್ದ ಯಾವುದೇ ಪರೀಕ್ಷಾರ್ಥಿಗಳು ಭಯಪಡಬೇಕಾದ ಅಗತ್ಯವಿಲ್ಲ, ಯಾವುದೇ ವಿದ್ಯಾರ್ಥಿ ಕ್ವಾರಂಟೈನ್‍ಗೆ ಒಳಗಾಗಬೇಕಾದ ಅಗತ್ಯವೂ ಇಲ್ಲ ಎಂದು ತಿಳಿಸಿದರು.

ಆ ವಿದ್ಯಾರ್ಥಿನಿಯೂ ಸಹ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವಾಗಿದ್ದಾಳೆ. ಆಕೆಯ ತಂದೆ ಈಗಾಗಲೇ ಕ್ವಾರಂಟೈನ್‍ನಲ್ಲಿದ್ದು, ಆರೋಗ್ಯ ಇಲಾಖೆಯ ನಿಗಾದಲ್ಲಿ ಸೂಕ್ತ ಚಿಕಿತ್ಸೆಗೊಳಗಾಗಿದ್ದಾರೆ. ಅವರೂ ಸಹ ಯಾವುದೇ ವಿಶೇಷ ಆರೋಗ್ಯದ ತೊಂದರೆಗೆ ಒಳಗಾಗಿಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದರು.

ಜೂನ್ 18ರಂದು ನಡೆದ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆಯ ಬಳಿಕ ಬೆಂಗಳೂರಿನ ಜಯನಗರದ ಕಾಲೇಜೊಂದರಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ಸೋಂಕು ತಗುಲಿದ್ದು, ಈ ವಿದ್ಯಾರ್ಥಿ ಕ್ವಾರಂಟೈನ್ ಮೊಹರು ಅಳಿಸಿಕೊಂಡು ಪರೀಕ್ಷೆಗೆ ಹಾಜರಾಗಿದ್ದಾಳೆಂದು ಇದರಿಂದ ಇಡೀ ಪರೀಕ್ಷಾ ವ್ಯವಸ್ಥೆಯ ಮೇಲೆ ನಕಾರಾತ್ಮಕ ಅಭಿಪ್ರಾಯ ಮೂಡುತ್ತಿದೆ ಎಂಬ ರೀತಿಯಲ್ಲಿ ನಿನ್ನೆಯಿಂದ ಎಲ್ಲ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ವರದಿಯಾಗಿದೆ. ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ಯಾವ ಇಲಾಖೆ ನಿಖರ ಮಾಹಿತಿಯನ್ನು ನೀಡುತ್ತಿಲ್ಲವೆಂದು ಮೊಹರು ಅಳಿಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯನ್ನು ತಪ್ಪಿತಸ್ಥಳೆಂದು ಬಿಂಬಿಸಿ ಇಡೀ ಪ್ರಕರಣವನ್ನು ಗೋಜಲುಗೊಳಿಸಿ ವಿಶ್ವಾಸ ಕದಡುವ ಪ್ರಯತ್ನ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಜೂ. 18ರಂದು ಇಂಗ್ಲಿಷ್ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಸುಮಾರು ಆರು ಲಕ್ಷ ವಿದ್ಯಾರ್ಥಿಗಳು ಅತ್ಯಂತ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆದಿದ್ದಾರೆ. ಶಿಕ್ಷಣ ಇಲಾಖೆಯೊಂದಿಗೆ ಆರೋಗ್ಯ, ಸಾರಿಗೆ, ಗೃಹ ಇಲಾಖೆಗಳು ಸೇರಿದಂತೆ ರಾಜ್ಯದಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆದಿವೆ. ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆಯಾದ್ದರಿಂದ ಮಕ್ಕಳ ಸುರಕ್ಷತೆ ಹೆಚ್ಚು ಒತ್ತು ನೀಡಲಾಗಿದ್ದು, ಈ ಸಂಬಂಧಲ್ಲಿ ಮಕ್ಕಳನ್ನು ಮನೆಯಿಂದ ಪರೀಕ್ಷಾ ಕೇಂದ್ರ ಹಾಗೆಯೇ ಪರೀಕ್ಷಾ ಕೇಂದ್ರದಿಂದ ಮನೆಯವರೆಗೂ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಕರೆತರಲಾಗಿತ್ತು ಎಂದು ಸಚಿವರು ವಿವರಿಸಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿರುವ ಯಾವುದೇ ವಿದ್ಯಾರ್ಥಿಯ ಪೋಷಕರು, ಜೊತೆಯಲ್ಲಿ ವಾಸಿಸುವ ಹತ್ತಿರದ ಸಂಬಂಧಿಕರು ಕೊರೋನಾ ಹಿನ್ನೆಲೆಯಲ್ಲಿ ಕ್ವಾರಂಟೈನ್‍ಗೆ ಒಳಗಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಪೂರ್ವಭಾವಿಯಾಗಿ ಪತ್ತೆ ಹಚ್ಚಿ ನಮ್ಮ ಇಲಾಖೆಯ ದಾಖಲೆ/ದತ್ತಾಂಶಗಳೊಂದಿಗೆ ತಾಳೆ ಮಾಡಿ ಅಂತಹ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷೆಗೆ ಹಾಜರಾಗಲು ವಿನಾಯ್ತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿರುತ್ತೇನೆ. ಜೊತೆಗೆ ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ ದೊರಕಿಸುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಘನ ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನಡೆಯಲಿವೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಪರೀಕ್ಷಾ ಕೇಂದ್ರದ ಮುಖ್ಯದ್ವಾರದಲ್ಲಿ ಸ್ಥಾಪಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿ ತಲಾ 2 ಮಾಸ್ಕ್‌ಗಳನ್ನು ಪಡೆಯಲಿದ್ದಾರೆ. ಪ್ರತಿ ತಾಲೂಕಿನ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕನಿಷ್ಠ 2 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳಾಗಿ ಜಾರಿಯಲ್ಲಿಡಲಾಗುತ್ತದೆ ಎಂದು ವಿವರಿಸಿದ ಸಚಿವರು, ಈಗಾಗಲೇ ಹೇಳಿದಂತೆ ರಾಜ್ಯದ ವಿವಿಧ ಇಲಾಖೆಗಳು ಸಂಪೂರ್ಣ ಸಮನ್ವಯದೊಂದಿಗೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಮಾಜಕ್ಕೆ ಒಂದು ಭರವಸೆ ನೀಡುವ ನಿಟ್ಟಿನಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ನಿರ್ವಹಿಲಿವೆ. ಈ ಬಗ್ಗೆ ಯಾವ ಅಪನಂಬಿಕೆಯೂ ಬೇಡ ಎಂದು ತಿಳಿಸಿದರು.

ಮಾಧ್ಯಮಗಳಿಗೆ ಮನವಿ: ಇಂತಹ ಅತ್ಯಂತ ಸೂಕ್ಷ್ಮ ಹಾಗೂ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹಳ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾಗಿದೆ. ನಾವು ನೀವೆಲ್ಲರೂ ಸೇರಿ ಸ್ವಾಸ್ಥ ಸಮಾಜವನ್ನು ನಿರ್ಮಿಸುವ ಕೆಲಸ ಮಾಡಬೇಕಾಗಿರುತ್ತದೆ. ಈ ಮೂಲಕ ಸಮಾಜಕ್ಕೆ ಒಂದು ಸಕಾರಾತ್ಮಕ ಸಂದೇಶ ನೀಡಬೇಕಾಗಿದೆ ಎಂದು ಸುರೇಶ್‍ಕುಮಾರ್ ಮಾಧ್ಯಮಗಳನ್ನು ವಿನಂತಿಸಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com