
ಬೆಂಗಳೂರು: ಲಾಕ್‌ಡೌನ್ ನಿರ್ಬಂಧವನ್ನು ಮತ್ತಷ್ಟು ಸಡಿಲಿಸಿರುವ ರಾಜ್ಯ ಸರ್ಕಾರ, ರಾಜ್ಯಾದ್ಯಂತ ಕಂಟೈನ್‌ಮೆಂಟ್ ಪ್ರದೇಶ ಹೊರತುಪಡಿಸಿ ಇತರೆಡೆ ಬೆಳಿಗ್ಗೆ 5ರಿಂದ ರಾತ್ರಿ 9 ಗಂಟೆವರೆಗೆ ಉದ್ಯಾನವನಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಉದ್ಯಾನವನಗಳನ್ನು ತೆರೆಯುವ ಅವಧಿಯಲ್ಲಿ ಸ್ಥಳೀಯ ಮಹಾನಗರಪಾಲಿಕೆ, ಪಾಲಿಕೆಗಳು ನಿರ್ಧರಿಸಬಹುದು ಎಂದಿದೆ.
ಸದ್ಯ ಎಲ್ಲ ಪಾರ್ಕ್‌ಗಳನ್ನು ಬೆಳಿಗ್ಗೆ 7ರಿಂದ 9 ಗಂಟೆವರೆಗೆ ಮತ್ತು ಸಂಜೆ 4ರಿಂದ 7 ಗಂಟೆವರೆಗೆ ಸಾರ್ವಜನಿಕರಿಗಾಗಿ ತೆರೆಯಲಾಗುತ್ತಿದೆ.
ಲಾಕ್ ಡೌನ್ ವಿಸ್ತರಣೆ ಕುರಿತು ಮೇ 30ರಂದು ಮಾರ್ಗಸೂಚಿ ಹೊರಡಿಸಿದ್ದ ಕೇಂದ್ರ ಗೃಹ ಸಚಿವಾಲಯ, ಕಂಟೈನ್‌ಮೆಂಟ್ ವಲಯ ಹೊರತುಪಡಿಸಿ ಇತರೆಡೆ ಅನ್ ಲಾಕ್ 1.0 ಜಾರಿಗೊಳಿಸಿತ್ತು. ಇದರ ಪ್ರಕಾರ, ಹಂತ ಹಂತವಾಗಿ ನಿಷೇಧಿತ ಚಟುವಟಿಕೆ ತೆರವುಗೊಳಿಸಲು ಲಾಕ್‌ಡೌನ್ ಸಡಿಲಿಕೆಗೆ ಹೊಸ ಮಾರ್ಗಸೂಚಿಯಲ್ಲಿ ಅವಕಾಶ ಮಾಡಿಕೊಡಲಾಗಿತ್ತು.
ಆದರೆ, ಕೋವಿಡ್ 19 ಹರಡುವಿಕೆ ನಿಯಂತ್ರಿಸುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದೂ ಈ ಆದೇಶದಲ್ಲಿ ತಿಳಿಸಲಾಗಿದೆ.
Advertisement