ಚಿಕ್ಕಮಗಳೂರು: ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ 2020-25 ನೇ ಸಾಲಿನ ಕರ್ನಾಟಕ ಪ್ರವಾಸೋದ್ಯಮ ನೀತಿಯನ್ನು ಅಂತಿಮಗೊಳಿಸಲಾಗಿದೆ. ಆದರೆ ಸೂಕ್ಷ್ಮ ಪ್ರದೇಶವಾಗಿರುವ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ಬರಲಿದೆ.
12 ಲಕ್ಷ ಜನಸಂಖ್ಯೆ ಹೊಂದಿರುವ ಚಿಕ್ಕಮಗಳೂರು ಜಿಲ್ಲೆಗೆ ವಾರ್ಷಿಕ 85 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪ್ರಮಾಣದಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ರೆಸಾರ್ಟ್ ನಿರ್ಮಾಣ, ರಸ್ತೆ, ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿನ ನೀರಿನ ಸಂಪನ್ಮೂಲಗಳ ಅತಿಯಾದ ಬಳಕೆಯಿಂದಾಗಿ ಚಿಕ್ಕಮಗಳೂರಿನ ಸೂಕ್ಷ್ಮ ಪ್ರದೇಶಗಳು, ಬೆಟ್ಟಗಳ ಶ್ರೇಣಿಗಳು ಹಾಳಾಗುತ್ತಿದೆ. ಆದ ಕಾರಣ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಚಿಕ್ಕಮಗಳೂರಿನ ಪರಿಸರ ಸೂಕ್ಷ್ಮ ಪ್ರದೇಶಗಳಿಗೂ ಹಾನಿಯಾಗದಂತೆ ಜಿಲ್ಲೆಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ತರುವ ಅಗತ್ಯವಿದೆ ಎಂದು ಸ್ಥಳೀಯರು, ಪರಿಸರವಾದಿಗಳು ಒತ್ತಡ ಹೇರಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಇತ್ತೀಚೆಗಷ್ಟೇ ಪ್ರವಾಸೋದ್ಯಮ ಸಚಿವ ಸಿಟಿ ರವಿ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿದ್ದಾರೆ. ಪ್ರತ್ಯೇಕ ಪ್ರವಾಸ ನೀತಿಯ ಬಗ್ಗೆ ಚರ್ಚಿಸಲು ಇನ್ನೂ ಹಲವು ಸರಣಿ ಸಭೆಗಳು ನಡೆಯಲಿವೆ.
ಈ ಸಭೆಯಲ್ಲಿ ಟೂರಿಸ್ಟ್-ಟ್ರಾವಲ್ ಏಜೆನ್ಸಿ ಹಾಗೂ ಇನ್ನಿತರ ಸಂಘಟನೆಗಳವರೂ ಭಾಗಿಯಾಗಿದ್ದರು. ಇಲ್ಲಿನ ಪ್ರವಾಸೋದ್ಯಮವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದ್ದು, ಆಧ್ಯಾತ್ಮ ಪ್ರವಾಸ, ಅಡ್ವೆಂಚರ್ ಸ್ಪೋರ್ಟ್ಸ್ ಪ್ರವಾಸ, ಪ್ಲಾಂಟೇಷನ್ ಪ್ರವಾಸ, ಟ್ರೆಕ್ಕಿಂಗ್ ಮಾರ್ಗಗಳನ್ನಾಗಿ ವಿಭಾಗಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕವಾದ ಪ್ರವಾಸೋದ್ಯಮ ನೀತಿ ದೀರ್ಘಾವಧಿಯ ಬೇಡಿಕೆಯಾಗಿತ್ತು. ವನ್ಯಜೀವಿಗಳಿರುವ ಪ್ರದೇಶಗಳಲ್ಲಿ ಪ್ರವಾಸವನ್ನು ನಿರ್ಬಂಧಿಸಬೇಕು, ಅದರ ಬದಲು ಆಧ್ಯಾಮಿಕ ಪ್ರದೇಶಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಬೇಕೆಂಬುದು ಸ್ಥಳೀಯರ ಬೇಡಿಕೆಯಾಗಿದೆ.
Advertisement