ಕೈಗಾರಿಕೆ ಸ್ಥಾಪನೆಗೆ ಏಕ ಗವಾಕ್ಷಿ ಯೋಜನೆಗೆ ಸಚಿವ ಸಂಪುಟ ಅಸ್ತು
ಬೆಂಗಳೂರು: ರಾಜ್ಯವನ್ನು ಪ್ರಗತಿ ಹಾದಿಯಲ್ಲಿ ತೆಗೆದುಕೊಂಡು ಹೋಗಲು ಮತ್ತು ಕೈಗಾರಿಕೋದ್ಯಮಿಗಳಿಗೆ ಬಂಡವಾಳ ತೊಡಗಿಸಲು ಅಡೆತಡೆ ನಿವಾರಿಸಲು ಏಕಗವಾಕ್ಷಿ ಯೋಜನೆಯಡಿ ಎಲ್ಲ ಅನುಮತಿ ನೀಡಲು ರಾಜ್ಯ ಸಂಪುಟ ಸಭೆ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು, ಕರ್ನಾಟಕ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಮಯ 2002ಕ್ಕೆ ಸಂಪುಟ ಅನುಮತಿ ನೀಡಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಸಮಿತಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಅನುಮತಿ ಸಿಕ್ಕ ನಂತರ ಎಲ್ಲ ರೀತಿಯ ಸಿವಿಲ್ ವರ್ಕ್ಗಳನ್ನು ಕೈಗೆತ್ತಿಕೊಳ್ಳಬಹುದು ಹಲವಾರು ರೀತಿಯ ಪ್ಲಾನಿಂಗ್ಗಳಿಗೆ ಅನುಮತಿಗಾಗಿ ಕಾಯುತ್ತ ಕುಳಿತುಕೊಳ್ಳುವ ಅಗತ್ಯವಿಲ್ಲ ಎಂದರು.
15 ಕೋಟಿ ರೂ. ಒಳಗಿನ ಯೋಜನಾ ಮೊತ್ತದ ಕೈಗಾರಿಕೆಗಳಿಗೆ ಜಿಲ್ಲಾ ಮಟ್ಟದ ಸಮಿತಿಯೇ ಅನುಮತಿ ನೀಡಲಿದೆ. ಅದಕ್ಕಿಂತ ಮೇಲ್ಪಟ್ಟ ಕೈಗಾರಿಕೆಗಳಿಗೆ ರಾಜ್ಯಮಟ್ಟದ ಸಮಿತಿ ಅನುಮತಿ ನೀಡಲಿದೆ. ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆಗಳಿಗೆ ಈ ನಿಯಮಗಳು ಅನ್ವಯವಾಗಲಿದೆ ಎಂದು ಸಚಿವ ಶೆಟ್ಟರ್ ಹೇಳಿದರು.
ಕಾನೂನು ಸಚಿವ ಜೆ. ಸಿ. ಮಾದುಸ್ವಾಮಿ ಮಾತನಾಡಿ, ಶಾಸಕರು ಸಚಿವರ ಶೇಕಡ 30 ರಷ್ಟು ವೇತನ ಕಡಿತ ಮಾಡುವ ತೀರ್ಮಾನಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.
ರಾಜ್ಯದಲ್ಲಿ ಬಾಕಿ ಉಳಿದಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು 10, ಸಾವಿರದ 194 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಸುಮಾರು 18 ಲಕ್ಷ ಮನೆಗಳ ನಿರ್ಮಾಣವಾಗಬೇಕಿತ್ತು. ಅದರಲ್ಲಿ 9.74 ಲಕ್ಷ ಮನೆಗಳು ಬಾಕಿ ಉಳಿದಿವೆ. ಅವುಗಳನ್ನು ಶೀಘ್ರವೇ ಪೂರ್ಣಗೊಳಿಸಲು ಹಣಕಾಸಿನ ಅಗತ್ಯವಿದೆ. 10,194 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಂಪುಟ ಸಭೆ ಅನುಮತಿ ನೀಡಿದೆ ಎಂದು ಹೇಳಿದರು.
ಗಣನೀಯ ಸೇವೆ ಸಲ್ಲಿಸಿದವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ವರದಿಯನ್ನು ಆಧರಿಸಿ ಸಚಿವ ಸಂಪುಟ ಉಪಸಮಿತಿ ಅಂತಿಮ ಶಿಫಾರಸ್ಸುಗಳನ್ನ ಮಾಡಲಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ