ಮುರುಗೇಶ್ ನಿರಾಣಿ ಒಡೆತನಕ್ಕೆ ಪಿಎಸ್ಎಸ್ಕೆ; ಸಚಿವ ಸಂಪುಟ ಅಧಿಕೃತ ಒಪ್ಪಿಗೆ

ನಿರೀಕ್ಷೆಯಂತೆಯೇ ಸಹಕಾರಿ ಕ್ಷೇತ್ರದ ಪಾಂಡವಪುರ ಪಿಎಸ್ಎಸ್ಕೆ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಒಡೆತನಕ್ಕೆ ಇಂದು ಸರ್ಕಾರ ಅಧಿಕೃತವಾಗಿ ನೀಡಿದೆ.
ಪಾಂಡವಪುರ ಸಕ್ಕರೆ ಕಾರ್ಖಾನೆ
ಪಾಂಡವಪುರ ಸಕ್ಕರೆ ಕಾರ್ಖಾನೆ
Updated on

ಮಂಡ್ಯ: ನಿರೀಕ್ಷೆಯಂತೆಯೇ ಸಹಕಾರಿ ಕ್ಷೇತ್ರದ ಪಾಂಡವಪುರ ಪಿಎಸ್ಎಸ್ಕೆ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಒಡೆತನಕ್ಕೆ ಇಂದು ಸರ್ಕಾರ ಅಧಿಕೃತವಾಗಿ ನೀಡಿದೆ.

ರಾಜ್ಯ ಸರ್ಕಾರ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸುವ ಮೂಲಕ ೪೦ ವರ್ಷಗಳ ದೀರ್ಘಕಾಲದವರೆಗೆ ಗುತ್ತಿಗೆ ನೀಡಲು ಸರ್ಕಾರ ಘೋಷಣೆ ಮಾಡಿದೆ.  ಪಿಎಸ್ಎಸ್ಕೆ ಕಾರ್ಖಾನೆಗೆ ಶಾಸಕ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್ ಬಿಡ್ ಸಲ್ಲಿಸಿತ್ತು. ಅತಿ ಹೆಚ್ಚಿನ ಅಂದರೆ ೪೦೫ ಕೋಟಿ ರೂಪಾಯಿಗಳ ಬಿಡ್ಗೆ ೪೦ ವರ್ಷಗಳಿಗೆ ಸರ್ಕಾರ ಗುತ್ತಿಗೆ ಪಡೆದುಕೊಂಡಿದೆ. ಅದರಂತೆಯೇ ರಾಜ್ಯ ಸಚಿವ ಸಂಪುಟ ನಿರಾಣಿ ತೆಕ್ಕೆಗೆ ನೀಡಲು ಒಪ್ಪಿಗೆ ಸೂಚಿಸಿದೆ. ಈ ವಿಚಾರವನ್ನು ಸಚಿವ ಮಾಧುಸ್ವಾಮಿ ಸಂಪುಟ ಸಭೆ ನಂತರ ಸುದ್ದಿಗಾರರಿಗೆ ತಿಳಿಸಿದರು.

ಪಿಎಸ್ಎಸ್ಕೆ ಕಾರ್ಖಾನೆಯನ್ನು ಖಾಸಗಿಗೆ ವಹಿಸುವಂತೆ ಷೇರುದಾರರ ಸಭೆ ತೀರ್ಮಾನ ಮಾಡಿ ಸರ್ಕಾರಕ್ಕೆ ಮನವಿ ಮಾಡಿತ್ತು. ಅಂತೆಯೇ ಟೆಂಡರ್ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿತ್ತು. ಟೆಂಡರ್ ಹಾಕಿದ್ದ ಶಾಸಕ ಮುರುಗೇಶ್ ನಿರಾಣಿ ಮೂರು ಬಾರಿ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.

ಪರಿಶೀಲನೆ ನಂತರ ಕಾರ್ಖಾನೆಯ ಪುನಶ್ಚೇತನ ಕುರಿತು ಮಾತನಾಡಿದ್ದರು. ಸದ್ಯ ಸರ್ಕಾರದ ನಿರ್ಧಾರ ಪ್ರಕಟವಾಗಿದ್ದು ಇನ್ನೇನಿದ್ದರೂ ಆರಂಭವಷ್ಟೇ ಬಾಕಿ ಇದ್ದು, ನಿರಾಣಿ ಶುಗರ್ಸ್ ತೀರ್ಮಾನದ ಮೇಲೆ ಕಬ್ಬು ಬೆಳೆಗಾರರ ಭವಿಷ್ಯ ನಿಂತಿದೆ.

ಇನ್ನೆರಡ್ಮೂರು ದಿನದಲ್ಲಿ  ಕಾರ್ಖಾನೆ ಆರಂಭಿಸಲು ಕ್ರಮ: ಮುರುಗೇಶ್ ನಿರಾಣಿ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ತಮ್ಮ ಒಡೆತನದ ನಿರಾಣಿ ಶುಗರ್ಸ್ ಗೆ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು ಇನ್ನೊಂದೆರಡು ದಿನದಲ್ಲಿ ಸಕ್ಕರೆ ಕಾರ್ಖಾನೆ  ಆರಂಭಿಸುವ ಕುರಿತಂತೆ ಪ್ರಕ್ರಿಯೆಗಳು ಶುರವಾಗಲಿದೆ ಎಂದು ನಿರಾಣಿ ಶುಗರ್ಸ್ ಲಿಮಿಟೆಡ್ ಅಧ್ಯಕ್ಷ ಮುರುಗೇಶ್ ನಿರಾಣಿ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ರೈತರು ಹಾಗೂ ಕಬ್ಬು ಬೆಳೆಗಾರರ ಹಿತವನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ತಾವು ಕೂಡ ರೈತ ಕುಟುಂಬದಿAದ ಬಂದಿದ್ದು ರೈತರ ಕಷ್ಟ ಗೊತ್ತಿದೆ ಎಲ್ಲರ ಸಹಕಾರ ಪಡೆದು ಪಿಎಸ್ಎಸ್ಕೆ ಕಾರ್ಖಾನೆಯನ್ನು ಮಾದರಿ ಸಕ್ಕರೆ ಕಾರ್ಖಾನೆ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ. ಸಂಪುಟ ಸಭೆಯ ನಿರ್ಧಾರದ ಆದೇಶ ಒಂದೆರಡು ದಿನಗಳಲ್ಲಿ ಕೈಸೇರಲಿದೆ ನಂತರ ಅಧಿಕೃತವಾಗಿ ಪಾಂಡವಪುರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಚಾಲನೆ ನೀಡಲಾಗುತ್ತದೆ ಎಂದು  ಅವರು ತಿಳಿಸಿದ್ದಾರೆ.

ರೈತರ ಸ್ವಾಗತ: ಪಿಎಸ್ಎಸ್ಕೆ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ ಲಿಮಿಟೆಡ್ಗೆ ಗುತ್ತಿಗೆ ನೀಡಲು  ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದನ್ನು ಕಬ್ಬು ಬೆಳೆಗಾರರು, ರೈತ ಮುಖಂಡರು ಸ್ವಾಗತಿಸಿದ್ದಾರೆ, ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನೌಕರರು ಕೂಡ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಗಣ್ಯರ ಭೇಟಿ ಮಾಡಿದ ನಿರಾಣಿ: ಸರ್ಕಾರ ಅಧಿಕೃತವಾಗಿ ಪಿಎಸ್ಎಸ್ಕೆಯನ್ನು ವಹಿಸಿಕೊಡುವ ಕುರಿತು ಘೋಷಣೆ ಮಾಡಿದ ಬೆನ್ನಲ್ಲೇ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಇಂದು ಹಲವು ಗಣ್ಯರನ್ನು ಭೇಟಿ ಮಾಡಿದರು.

ಮುಖ್ಯ ಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ನಿರಾಣಿ ಧನ್ಯವಾದ ಸಲ್ಲಿಸಿದರು. ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಠದ ಕ್ಕೆ ಭೇಟಿ ನೀಡಿದ ನಿರಾಣಿ, ವೀರಾಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ನಿರ್ಮಲಾನಂದ ಸ್ವಾಮಿಗಳ ಆಶೀರ್ವಾದ ಪಡೆದರು.

ಅಲ್ಲದೆ ಬೆಂಗಳೂರಿನ ಯಲಹಂಕದಲ್ಲಿರುವ ಮುಗಳಖೋಡ  ಜಿಡಗಾಮಠದ ಎಸ್.ಎಸ್.ಡಾ.ಮುರುಗರಾಜೇಂದ್ರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸಕ್ಕರೆ ಹಾಗೂ ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ್ ಹೆಬ್ಬಾರ್ ಅವರನ್ನು ಭೇಟಿ ಮಾಡಿದ ಮುರುಗೇಶ್ ನಿರಾಣಿ ಅವರು ಧನ್ಯವಾದ ಅರ್ಪಿಸಿದರು. ನಿರಾಣಿ ಬೆಂಬಲಿಗರು ಪಾಂಡವಪುರದ ಶಕ್ತಿದೇವತೆ ಅಹಲ್ಯಾದೇವಿಗೆ (ಆರತಿ ಉಕ್ಕಡ ) ವಿಶೇಷ ಪೂಜೆ ಸಲ್ಲಿಸಿ  ಕಾರ್ಖಾನೆ ಆರಂಭಕ್ಕೆ ಶುಭ ಕೋರಲಾಯಿತು .ಕಾರ್ಖಾನೆಯ ಆವರಣದಲ್ಲಿ ಪಟಾಕಿ ಸಿಡಿಸಿ, ಸಹಿ ಹಂಚಿ ಸಂಭ್ರಮಿಸಲಾಯಿತು.

ವರದಿ: ನಾಗಯ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com