

ಬೆಂಗಳೂರು/ಶಿರಸಿ: ಎರಡು ವರ್ಷಗಳಿಗೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಕಲ್ಯಾಣೋತ್ಸವ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಜನರು ಆಗಮಿಸುತ್ತಿದ್ದಾರೆ.
ಒಂಭತ್ತು ದಿನಗಳ ಈ ಜಾತ್ರಾ ಮಹೋತ್ಸಕ್ಕೆ ಇಂದು ರಾತ್ರಿ 11 ಗಂಟೆ 11 ನಿಮಿಷದಿಂದ 11. 18 ನಿಮಿಷದೊಳಗೆ ದೇವಸ್ಥಾನದ ಸಭಾ ಮಂಟಪದಲ್ಲಿ ಜಾತ್ರಾ ಕಲ್ಯಾಣ ಪ್ರತಿಷ್ಠೆ ನೆರವೇರುವುದರ ಮೂಲಕ ವಿದ್ಯುಕ್ತ ನಾಂದಿಯಾಗಲಿದೆ. ಮಾರಿಕಾಂಬಾ ದೇವಿ ಹಾಗೂ ಮರ್ಕಿ ದುರ್ಗಿಯರಿಗೆ ಹೊಸ ಸೀರೆ ಉಡಿಸಿ, ಬಂಗಾರದ ಆಭರಣಗಳನ್ನು ತೊಡಿಸಲಾಗುತ್ತದೆ. ಸಾತ್ವಿಕ ಬಲಿಯನ್ನರ್ಪಿಸಲಾಗುತ್ತದೆ. ನಂತರ ಮಂಗಲಸೂತ್ರ ತೊಡಿಸಲಾಗುತ್ತದೆ. ವಿವಾಹ ವಿಧಿ ವಿಧಾನಗಳ ಮೂಲಕ ಕಲ್ಯಾಣೋತ್ಸವ ನೆರವೇರುತ್ತದೆ.
ದೇವಿಯ ತವರು ಮನೆಯವರು ಎಂದೇ ಕರೆಯಲಾಗುವ ನಾಡಿಗ ಕುಟುಂಬದವರು ಮಾಂಗಲ್ಯ ಧಾರಣೆ ಮಾಡುತ್ತಾರೆ. ಅನೇಕ ಸೇವೆಗಳು ಸರ್ವಾಲಂಕಾರ ಭೂಷಿತ ದೇವಿಗೆ ನಡೆಯುತ್ತವೆ.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಬುಧವಾರ ಶೋಭಾಯಾತ್ರೆ ಮೂಲಕ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಗದ್ದುಗೆಗೆ ಆಗಮಿಸಲಿದ್ದಾಳೆ. ಮಾರ್ಚ್ 5ರಂದು ಜಾತ್ರಾ ಗದ್ದುಗೆಯಲ್ಲಿ ಸರ್ವಾಲಂಕಾರ ಭೂಷಿತ ಶ್ರೀ ದೇವಿಯ ದರ್ಶನ, ಹಣ್ಣುಕಾಯಿ, ಹರಕೆ ಸಮರ್ಪಣೆ ಆರಂಭವಾಗಲಿದ್ದು ಸಾವಿರಾರು ಜನರು ಸಡಗರದಿಂದ ಪಾಲ್ಗೊಳ್ಳಲಿದ್ದಾರೆ.