ಜ್ವರದಿಂದ ಬಳಲುತ್ತಿರುವ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿ: ಕಂಪನಿಗಳಿಗೆ ಸರ್ಕಾರ ಸಲಹೆ

ಕೊರೋನಾ ಸೋಂಕು ಹರಡುವಿಕೆಯನ್ನು ತಡೆಯಲು ಉದ್ಯೋಗಿಗಳಲ್ಲಿ ಜ್ವರದಂತಹ ಲಕ್ಷಣಗಳು ಕಂಡುಬಂದಲ್ಲಿ ಅವರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ನಗರದ ಕಂಪನಿಗಳಿಗೆ ರಾಜ್ಯ ಸರ್ಕಾರ ಸಲಹೆ ನೀಡಿದೆ.
ವಿಧಾನಸೌಧ
ವಿಧಾನಸೌಧ

ಬೆಂಗಳೂರು: ಕೊರೋನಾ ಸೋಂಕು ಹರಡುವಿಕೆಯನ್ನು ತಡೆಯಲು ಉದ್ಯೋಗಿಗಳಲ್ಲಿ ಜ್ವರದಂತಹ ಲಕ್ಷಣಗಳು ಕಂಡುಬಂದಲ್ಲಿ ಅವರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ನಗರದ ಕಂಪನಿಗಳಿಗೆ ರಾಜ್ಯ ಸರ್ಕಾರ ಸಲಹೆ ನೀಡಿದೆ.

ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಸಲಹಾ ಸೂಚನೆ ಬಿಡುಗಡೆಗೊಳಿಸಿದ್ದು, ಜ್ವರ, ನೆಗಡಿಯಂತಹ ಲಕ್ಷಣಗಳಿರುವ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಬೇಕು. ಜೊತೆಗೆ, ಕೈಯ ಸ್ವಚ್ಛತೆ ಮತ್ತು ಕೆಮ್ಮಿನ ತಡೆ ಕುರಿತು ನಿರ್ದೇಶನ ನೀಡಬೇಕು ಎಂದು ಸೂಚನೆ ನೀಡಿದೆ.

ಜೊತೆಗೆ, ಸೋಂಕು ಪೀಡಿತ ಚೀನಾ, ಇರಾನ್, ರಿಪಬ್ಲಿಕ್ ಆಫ್ ಕೊರಿಯಾ, ಇಟಲಿ ಮತ್ತು ಜಪಾನ್ ದೇಶಗಳಿಗೆ ಅನವಶ್ಯಕ ಪ್ರಯಾಣ ಬೆಳಸದಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ.

"ಚೀನಾ, ದಕ್ಷಿಣ ಕೊರಿಯಾ, ಜಪಾನ್, ಇರಾನ್, ಇಟಲಿ, ಹಾಂಗ್ ಕಾಂಗ್, ಮಲೇಷ್ಯಾ, ಇಂಡೋನೇಷ್ಯಾ, ನೇಪಾಳ, ಥೈಲ್ಯಾಂಡ್, ಸಿಂಗಾಪುರ್ ಹಾಗೂ ತೈವಾನ್ ನಿಂದ ನೇರವಾಗಿ ಅಥವಾ ಪರೋಕ್ಷವಾಗಿ ಆಗಮಿಸುವ ನೌಕರರು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು ಎಂದು ಸಹ ಸೂಚಿಸಲಾಗಿದೆ.

ಇನ್ನು ಕೊರೋನಾವೈರಸ್ ಪಸರಿಸುವ ಭೀತಿ ಹಿನ್ನೆಲೆಯಲ್ಲಿ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ವೈದ್ಯಕೀಯ ಪರೀಕ್ಷೆ ಕಡ್ಡಾಯ ಎಂಬ ಕೇಂದ್ರ ಸರ್ಕಾರದ ಸೂಚನೆಯಂತೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರತಿಯೊಬ್ಬರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಗುರುವಾರ 2,076 ಪ್ರಯಾಣಿಕರನ್ನು ಕೊರೋನಾ ವೈರಸ್ ಸೋಂಕಿನ ಪ್ರಾಥಮಿಕ ಪರೀಕ್ಷೆಗೆ ಗುರಿಪಡಿಸಲಾಗಿದೆ. ಜನವರಿಯಿಂದ ಇಲ್ಲಿಯವರೆಗೆ 42,283 ಜನರನ್ನು ಪರೀಕ್ಷಿಸಲಾಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 21ರಿಂದ ಕಟ್ಟೆಚ್ಚರ ಕೈಗೊಳ್ಳಲಾಗಿದೆ. ಎರಡು ದಿನಗಳ ಹಿಂದೆ ದುಬೈನಿಂದ ಬಂದಿಳಿದ ಟೆಕ್ಕಿಯೊಬ್ಬರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com