ಆರ್. ಅಶೋಕ್
ಆರ್. ಅಶೋಕ್

ರಿಯಲ್ ಎಸ್ಟೇಟ್ ಜೊತೆ ಶಾಮೀಲಾಗಿರುವ ಸಬ್ ರಿಜಿಸ್ಟ್ರಾರ್ ವಿರುದ್ಧ ಕ್ರಮ ಸಾಧ್ಯವಾಗ್ತಿಲ್ಲ: ಅಶೋಕ್ ಅಸಹಾಯಕತೆ

ಸರ್ಕಾರಿ ಭೂಮಿಯನ್ನು ರಿಯಲ್ ಎಸ್ಟೇಟ್  ವ್ಯಕ್ತಿಗಳಿಗೆ ನೋಂದಣಿ ಮಾಡಿಸಲು ಶಾಮೀಲಾಗುವ ಸಬ್ ರಿಜಿಸ್ಟ್ರಾರ್  ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ. 
Published on

ಬೆಂಗಳೂರು: ಸರ್ಕಾರಿ ಭೂಮಿಯನ್ನು ರಿಯಲ್ ಎಸ್ಟೇಟ್  ವ್ಯಕ್ತಿಗಳಿಗೆ ನೋಂದಣಿ ಮಾಡಿಸಲು ಶಾಮೀಲಾಗುವ ಸಬ್ ರಿಜಿಸ್ಟ್ರಾರ್  ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ. 

ಸರ್ಕಾರಿ ಭೂಮಿ ಕಬಳಿಕೆ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿರುವ ಕಂದಾಯ ಸಚಿವ ಆರ್. ಅಶೋಕ್, ಯಲಹಂಕ ಸಮೀಪದ ಸರಕಾರಿ ಭೂಮಿ ಪರಭಾರೆ ಸಂಬಂಧ ತಹಶೀಲ್ದಾರ್ ಹಾಗೂ ಉಪನೋಂದಣಾಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಕೃಷ್ಣಭೈರೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಬಳಿಕೆಯಾಗಿರುವ ಸರ್ಕಾರಿ ಭೂಮಿಯನ್ನು ನಾವು ವಾಪಸ್ ಪಡೆದುಕೊಳ್ಳುತ್ತಿದ್ದೇವೆ, ಆದರೆ ಅದರಲ್ಲಿ ಭಾಗಿಯಾದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಚೊಕ್ಕನಹಳ್ಳಿಯಲ್ಲಿ ಸರ್ಕಾರ 21.19 ಎಕರೆ ಭೂಮಿಯು ಪರರ ಪಾಲಾಗಲು ಬಿಡಲ್ಲ. ಕಳೆದ ಒಂದೂವರೆ ತಿಂಗಳ ಹಿಂದೆ ಪ್ರಕರಣ ಸರ್ಕಾರದ ಗಮನಕ್ಕೆ ಬರುತ್ತಿದ್ದಂತೆ ತಹಸೀಲ್ದಾರ್ ಹಾಗೂ ಸಬ್‍ರಿಜಿಸ್ಟ್ರಾರ್‍ರನ್ನು ಅಮಾನತು ಮಾಡಿ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ.

ದುರಂತವೆಂದರೆ ಅಮಾನತುಗೊಂಡವರು ಸಿಎಟಿ ಮೂಲಕ ತಡೆಯಾಜ್ಞೆ ತಂದು ಅದೇ ಸ್ಥಳಕ್ಕೆ ಬಂದು ಕುಳಿತರು. ಏನಾದರೂ ಮಾಡಿ ಬೇರೆಡೆಗೆ ಕಳಿಸಬೇಕೆಂದು ತುಮಕೂರಿಗೆ ಎರವಲು ಸೇವೆ ಮೇಲೆ ಕಳಿಸಲಾಯಿತು. ಅದು ಕೂಡ ತಪ್ಪು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಂಡು ಬಂದು ಮತ್ತೆ ಅದೇ ಸ್ಥಳದಲ್ಲಿ ಮುಂದುವರೆದಿದ್ದಾರೆ. 

ಇಂತಹ ನಡವಳಿಕೆಗಳಿಗೆ ಕಡಿವಾಣ ಹಾಕಲು ನಾವು ಗಂಭೀರ ಚಿಂತನೆ ನಡೆಸಬೇಕಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹೆದರುವಂತಹ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಕೃಷ್ಣಭೈರೇಗೌಡ ಅವರು, ಚೊಕ್ಕನಹಳ್ಳಿಯಲ್ಲಿ ಸರ್ಕಾರಿ ಭೂಮಿ ಎಂದು ಪಹಣಿಯಲ್ಲಿ ನಮೂದಾಗಿರುವ 21.19 ಎಕರೆ ಭೂಮಿಯನ್ನು ತಮಗೆ ಮಂಜೂರಾಗಿದೆ ಎಂದು ಖಾಸಗಿ ವ್ಯಕ್ತಿಗಳು ನಕಲಿ ಆದೇಶ ತಯಾರು ಮಾಡಿಕೊಂಡಿದ್ದಾರೆ.

ಆ ಆದೇಶದ ಮೇಲೆ 29 ಕೋಟಿ ರೂ.ಗೆ ಸೇಲ್ ಅಗ್ರಿಮೆಂಟ್ ಮಾಡಿಕೊಂಡು ಮೂರು ಕೋಟಿ ಮುಂಗಡ ಪಡೆದಿದ್ದಾರೆ. ಪಹಣಿಯಲ್ಲಿ ಸರ್ಕಾರಿ ಭೂಮಿ ಎಂದು ಸ್ಪಷ್ಟವಾಗಿ ನಮೂದಿಸಿದ್ದರೂ ಅದನ್ನು ಲೆಕ್ಕಿಸದೆ ಸಬ್‍ರಿಜಿಸ್ಟ್ರಾರ್ ಅವರು ಅಗ್ರಿಮೆಂಟ್‍ನ್ನು ನೋಂದಣಿ ಮಾಡಿಸಿದ್ದಾರೆ. 

ಸರ್ಕಾರದ ಉದ್ದೇಶಗಳಿಗಾಗಿ ಈವರೆಗೂ ಎರಡೂವರೆ ಸಾವಿರ ಎಕರೆ ವಶಪಡಿಸಿಕೊಂಡ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಒತ್ತುವರಿಯಿಂದ ರಕ್ಷಣೆ ಮಾಡಲಾದ ಭೂಮಿಯನ್ನು ಕಾಪಾಡಿಕೊಳ್ಳಲು 100 ಕೋಟಿ ರೂ.ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೇಡಿಕೆ ಸಲ್ಲಿಸಿದ್ದೇವೆ ಎಂದು ಅಶೋಕ್ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com