ರಾಮಸೇತು ಮಾದರಿಯಲ್ಲಿ ತುಂಗಭದ್ರಾ ನದಿಗೂ ಬಂತು ಕಾಲು ಸೇತುವೆ

ಮಾಧ್ವ ಅನುಯಾಯಿಗಳ ಪುಣ್ಯಭೂಮಿ ತಲುಪಲು ವಿನೂತನ ಮಾರ್ಗ, ತಾಲ್ಲೂಕಿನ ಆನೆಗೊಂದಿ ಸಮೀಪ ಇರುವ ನವವೃಂದಾವನ ಗಡ್ಡೆ ಮಾಧ್ವ ಯತಿಗಳ ಹಾಗೂ ಅನುಯಾಯಿಗಳ ತಪೋಭೂಮಿ ಹಾಗೂ ಪುಣ್ಯ ಕ್ಷೇತ್ರ.
ತುಂಗಭದ್ರಾ ನದಿಗೂ ಬಂತು ಕಾಲು ಸೇತುವೆ
ತುಂಗಭದ್ರಾ ನದಿಗೂ ಬಂತು ಕಾಲು ಸೇತುವೆ
Updated on

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಸಮೀಪ ಇರುವ ನವವೃಂದಾವನ ಗಡ್ಡೆ ಮಾಧ್ವ ಯತಿಗಳ ಹಾಗೂ ಅನುಯಾಯಿಗಳ ತಪೋಭೂಮಿ ಹಾಗೂ ಪುಣ್ಯ ಕ್ಷೇತ್ರಕ್ಕೆ ತಲುಪುವುದಕ್ಕೆ ಕಾಲು ಸೇತುವೆ ನಿರ್ಮಿಸಲಾಗಿದೆ.

ತುಂಗಭದ್ರ ನದಿಯನ್ನು ಸೀಳಿಕೊಂಡು ಉಂಟಾಗಿರುವ ನಡುಗಡ್ಡೆಗೆ ತೆರಳಲು ಭಕ್ತರು ನಾನಾ ಪರದಾಟ ಪಡುತ್ತಿದ್ದರು.
ತುಂಗಭದ್ರಾ ನದಿಯನ್ನು ಸೀಳಿಕೊಂಡು ಉದ್ಭವಿಸಿರುವ ನಡುಗಡ್ಡೆಯಲ್ಲಿ ಮಾಧ್ವ ಪಂಥದ ಒಂಭತ್ತು ಯತಿವರ್ಯೇಣ್ಯರು ಬೃಂದಾವನಸ್ಥರಾಗಿರುವ ಪುಣ್ಯ ಕ್ಷೇತ್ರವಿದೆ. ಈ ಕ್ಷೇತ್ರಕ್ಕೆ ರಾಜ್ಯ ಮಾತ್ರವಲ್ಲ, ದಕ್ಷಿಣ ಭಾರತದ ನಾನಾ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. 

ಆದರೆ ಬರುವ ಭಕ್ತರು ಸುಲಭವಾಗಿ ಯತಿಗಳ ಬೃಂದಾವನ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಲು ಸೂಕ್ತ ವ್ಯವಸ್ಥೆಯಿಲ್ಲ. ಆನೆಗೊಂದಿಗೆ ಬಂದು ಅಲ್ಲಿಂದ ಬೋಟ್ ಮೂಲಕ ಗಡ್ಡಿ ತಲುಪಬೇಕು. ಇನ್ನೊಂದು ರಾಂಪುರದ ಮಾರ್ಗವಾಗಿ ಸುರಕ್ಷಿತವಲ್ಲದ ನಾಡದೋಣಿ ಅಥವಾ ಹರಗೋಲು ಮೂಲಕ ತಲುಪಬೇಕು. 

ಹೀಗಾಗಿ ಪ್ರತಿ ವರ್ಷ ನಾನಾ ತಿಂಗಳು, ದಿನಗಳಲ್ಲಿ ಬರುವ ಯತಿಗಳ ಆರಾಧನಾ ಮಹೋತ್ಸವಕ್ಕೆ ಭಕ್ತರು ನವ ವೃಂದಾವನಕ್ಕೆ ತಲುಪಲು ಪರದಾಡುತ್ತಾರೆ. ಇದನ್ನು ಮನಗಂಡ ಸೋಸಲೆ ಮಠದವರು ನೂತನ ಸೇತುವೆಗೆ ಶ್ರೀಕಾರ ಹಾಕುವ ಮೂಲಕ ಸುಲಭವಾಗಿ ಗಡ್ಡಿ ತಲುಪಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ನವ ವೃಂದಾವನ ತಲುಪಲು ಅಡ್ಡಲಾಗಿ ಹರಿಯುವ ತುಂಗಭದ್ರಾ ನದಿ ದಾಟಲು 'ತೇಲುವ ಸೇತುವೆ' ನಿರ್ಮಿಸುವ ಮೂಲಕ ವಿನೂತನ ಮಾರ್ಗದ ವ್ಯವಸ್ಥೆ ಕೈಗೊಂಡಿರುವುದು ವಿಶೇಷ.

 ಗಡ್ಡೆ ತಲುಪಲು ಅಡ್ಡಲಾಗಿರುವ ತುಂಗಭದ್ರಾ ನದಿ ದಾಟಲಿಕ್ಕೆ ಬೋಟುಗಳು ಸಾಧನ ಇಲ್ಲಿಯವರೆಗೂ ಅನಿವಾರ್ಯವಾಗಿತ್ತು. ಆದರೆ, ವಿನೂತನ ತೆಲುವ ಸೇತುವೆ ನಿರ್ಮಾಣದಿಂದ ಸಂಚಾರ ಮತ್ತಷ್ಟು ಸುಗಮವಾಗಿದೆ. ನವ ವೃಂದಾವನ ಗಡ್ಡೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ನಿತ್ಯ ಭೇಟಿ ನೀಡುವ ಭಕ್ತರ ಪಾಲಿಗೆ ತೇಲುವ ಸೇತುವೆಯಿಂದ ಸಂಚಾರಕ್ಕೆ ಸಾಕಷ್ಟು ಅನುಕೂಲಕರವಾಗಲಿದೆ. ತೇಲುವ ಸೇತುವೆ ನಿರ್ಮಾಣದಿಂದ ಇಲ್ಲಿಯವರೆಗಿದ್ದ ಬೋಟುಗಳ ಅನಿವಾರ್ಯತೆ ಇನ್ನು ದೂರಾಗಿದೆ. ಗುರುವಾರದಂದು ಗಡ್ಡೆಯಲ್ಲಿ ಜರುಗಿದ ವ್ಯಾಸರಾಜರ ಪೂರ್ವರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವ್ಯಾಸರಾಜ ಮಠಾಧೀಶರಾದ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರು ವಿನೂತನ ತೇಲುವ ಸೇತುವೆ ಮೇಲೆ ದಿವ್ಯ ಪಾದಗಳನ್ನು ಹಾಕುವ ಮೂಲಕ 'ತೇಲುವ ಸೇತುವೆ' ಗೆ ಚಾಲನೆ ನೀಡಿದ್ದಾರೆ. ನಯನ ಮನೋಹರವಾಗಿ ಹರಿಯುವ ತುಂಗಭದ್ರೆಗೆ ಅಡ್ಡಲಾಗಿ ಪ್ರಕೃತಿಯ ಅತ್ಯಂತ ರಮಣೀಯ ಸ್ಥಳದಲ್ಲಿ ಈ ವಿಶಿಷ್ಟ ಸೇತುವೆ ನಿರ್ಮಾಣ ಕಾರ್ಯವು ಮಕ್ಕಳನ್ನು ಹಾಗೂ ಯುವಕರನ್ನ ಕೈ ಬೀಸಿ ಕರೆಯುವಂತಿದೆ.

ಶ್ರೀನಿವಾಸ ಎಂ.ಜೆ, ಗಂಗಾವತಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com