
ಬೆಳಗಾವಿ: ಜಿಲ್ಲೆಯ ಸವದತ್ತಿ ಮೂಲದ ವಲಯ ಅರಣ್ಯಾಧಿಕಾರಿ ಸುನೀತಾ ನಿಂಬರ್ಗಿ, ತನ್ನ ಇಲಾಖೆಗೆ ಸಲ್ಲಿಸಿದ ಅನುಪಮ ಸೇವೆಗಾಗಿ ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ
ಈ ಪ್ರಶಸ್ತಿ ಸ್ವೀಕರಿಸುತ್ತಿರುವ ರಾಜ್ಯ ಅರಣ್ಯ ಇಲಾಖೆಯ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಮಾರ್ಚ್ 23 ರಂದು ಬೆಂಗಳೂರಿನಲ್ಲಿ ಪದಕ ಪ್ರದಾನ ಪ್ರಶಸ್ತಿ ಸಮಾರಂಭ ನಡೆಯಲಿದೆ.
ಸುನೀತಾ ನಿಂಬರ್ಗಿ ಬೆಳಗಾವಿ ವಿಭಾಗದ ವಿವಿಧ ಅರಣ್ಯ ವಲಯಗಳಲ್ಲಿ ಸೇವೆ ಸಲ್ಲಿಸಿದ್ದು, ಕರ್ತವ್ಯ ನಿಷ್ಠೆಯಲ್ಲಿ ಹೆಸರುವಾಸಿಯಾಗಿದ್ದಾರೆ. ಅರಣ್ಯ ಭೂಮಿ ರಕ್ಷಣೆ ಅದರಲ್ಲೂ ವಿಶೇಷವಾಗಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಮರ ನೆಡುವ ಕಾರ್ಯಕ್ರಮಗಳು ಸೇರಿದಂತೆ ಅರಣ್ಯ ಸಂರಕ್ಷಣೆ, ವನ್ಯ ಜೀವಿ ಅವನತಿಗೆ ಕಾರಣ ಮತ್ತಿತರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸುನೀತಾ ನಿಂಬರ್ಗಿ, ಇಲಾಖೆಯ ಹಿರಿಯರ ಮಾರ್ಗದರ್ಶನ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಸರ್ಕಾರದ ಆಪೇಕ್ಷೆಯಂತೆ ಕೆಲಸ ಮಾಡಲು ನನಗೆ ಸಾಧ್ಯವಾಯಿತು. ಅವರೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ವಿಶೇಷವಾಗಿ ಎಲ್ಲಾ ಕಷ್ಟಕರ ಸಮಯದಲ್ಲೂ ನನನ್ನು ಬೆಂಬಲಿಸಿದ ಮಗಳಿಗೆ ವಿಶೇಷವಾದ ಧನ್ಯವಾದ ಆರ್ಪಿಸುವುದಾಗಿ ತಿಳಿಸಿದರು. ಸುನೀತಾ ನಿಂಬರ್ಗಿ, ಬೆಳಗಾವಿಯ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಅವರ ಅಕ್ಕ ಆಗಿದ್ದಾರೆ.
Advertisement