ಬ್ರಿಟೀಷರಿಗೆ ಅಭಿನಂದನೆ ಸಲ್ಲಿಸಿ ಪೇಚಿಗೆ ಸಿಲುಕಿದ ಕಾಂಗ್ರೆಸ್ ನ ಪಿ.ಆರ್. ರಮೇಶ್

ಸಂವಿಧಾನದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಬ್ರಿಟೀಷರಿಗೆ ಅಭಿನಂದನೆ ಸಲ್ಲಿಸಿ ಗಲಿಬಿಲಿಗೊಂಡ ಪ್ರಸಂಗ ಮೇಲ್ಮನೆಯಲ್ಲಿಂದು ಜರುಗಿತು. 
ಪಿಆರ್ ರಮೇಶ್
ಪಿಆರ್ ರಮೇಶ್

ಬೆಂಗಳೂರು: ಸಂವಿಧಾನದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಬ್ರಿಟೀಷರಿಗೆ ಅಭಿನಂದನೆ ಸಲ್ಲಿಸಿ ಗಲಿಬಿಲಿಗೊಂಡ ಪ್ರಸಂಗ ಮೇಲ್ಮನೆಯಲ್ಲಿಂದು ಜರುಗಿತು. 

ಬ್ರಿಟಿಷರನ್ನು ಹಾಡಿ ಹೊಗಳಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರಿಂದ ಟೀಕೆಗೆ ಗುರಿಯಾಗಿ ಸ್ಪಷ್ಟೀಕರಣ ನೀಡಿದ‌ ಘಟನೆ ನಡೆಯಿತು.

ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್, ಸಂವಿಧಾನದ ಮೇಲೆ ಮಾತನಾಡುತ್ತಾ ಬ್ರಿಟಿಷರಿಗೆ ಅಭಿನಂದನೆ ಸಲ್ಲಿಸಿದರು.

ಇದಕ್ಕೆ ಬಿಜೆಪಿ ಸದಸ್ಯ ಪ್ರಾಣೇಶ್ ತೀವ್ರ ಆಕ್ಷೇಪ‌ ವ್ಯಕ್ತಪಡಿಸಿದರು. ಬ್ರಿಟಿಷರಿಗೆ ಧನ್ಯವಾದ ತಿಳಿಸಿದ್ದು ಸರಿಯಲ್ಲ, ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಪ್ರಾಣೇಶ್ ಮಾತಿಗೆ ದನಿಗೂಡಿಸಿದ ಬಿಜೆಪಿ ಸದಸ್ಯರು ಕ್ಷಮೆಯಾಚನೆಗೆ ಪಟ್ಟುಹಿಡಿದರು, ಸಚಿವ ಸಿ.ಟಿ.ರವಿ ಸಹ ವಿರೋಧ ವ್ಯಕ್ತಪಡಿಸುತ್ತಾ, ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧಿ ಅವರು ಹೋರಾಟ ಮಾಡಿದ್ದು ವ್ಯರ್ಥವಾಯಿತು. ಹಾಗಾದರೆ ಪರಿಷತ್ ನಲ್ಲಿ ಇರುವ ಗಾಂಧಿಜಿ ಅವರ ಪೋಟೊ ತೆಗೆದುಹಾಕಿ ಬ್ರಿಟಿಷರ ಪೋಟೋ ಹಾಕಿ ಎಂದರು.

ಸ್ವಾತಂತ್ರ್ಯ ಹೋರಾಟಗಾರರ ಹೋರಾಟಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ ಎಂದು‌ ಬಿಜೆಪಿ ಸದಸ್ಯರು ಪಿ.ಆರ್. ರಮೇಶ್ ವಿರುದ್ಧ ಕಿಡಿಕಾರಿದರು.ಇದು ಬ್ರಿಟಿಷರ ಸಂವಿಧಾನದ ಮೇಲಿನ ಚರ್ಚೆ ಅಲ್ಲ, ಭಾರತದ ಸಂವಿಧಾನದ ಮೇಲಿನ ಚರ್ಚೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ‌ ಸದಸ್ಯರ ಆಗ್ರಹಕ್ಕೆ ಮಣಿಯದ ಪಿ.ಆರ್.ರಮೇಶ್, ಬ್ರಿಟಿಷರು ಹಿಂದೆ ರಾಜರ ಮಧ್ಯೆ ದ್ವೇಷ ತಂದಿಟ್ಟು ಹೊಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಆ ಕಾಲದಲ್ಲಿ ಅವರು ಬಿತ್ತಿದ ವಿಷ ಬೀಜ ಸ್ವಾತಂತ್ರ್ಯ ನಂತರ ನಮಗೆ ಅಮೃತವಾಗಿ ಪರಿಣಮಿಸಿತು. ರಾಜರ ಆಡಳಿತದಲ್ಲಿ ಪ್ರತ್ಯೇಕ ರಾಜ್ಯಗಳನ್ನು ಸ್ಥಾಪಿಸಿಕೊಂಡಿದ್ದ ರಾಜರು, ಸ್ವಾತಂತ್ರ್ಯ ಬಂದ ನಂತರ, ಎಲ್ಲರನ್ನೂ ಒಂದುಗೂಡುವಂತೆ ಮಾಡಿ ಉತ್ತರ ಭಾರತ, ದಕ್ಷಿಣ ಭಾರತವನ್ನಾಗಿ ಪ್ರತ್ಯೇಕ ಮಾಡದೆ ಅಖಂಡ ಭಾರತವನ್ನಾಗಿ ಮಾಡಿದಕ್ಕೆ ಬ್ರಿಟಿಷರಿಗೆ ಧನ್ಯವಾದ ತಿಳಿಸಿದ್ದೆ, ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com