ಸೋಮವಾರ, ಮಂಗಳವಾರ ರಾತ್ರಿ 9ರವರೆಗೆ ಪಡಿತರ ಕೇಂದ್ರ ತೆರೆಯುತ್ತೇವೆ: ಸಚಿವ ಗೋಪಾಲಯ್ಯ

ಸೋಮವಾರ, ಮಂಗಳವಾರ ರಾತ್ರಿ 9ರವರೆಗೆ ಪಡಿತರ ಕೇಂದ್ರ ತೆರೆಯುತ್ತೇವೆ: ಸಚಿವ ಗೋಪಾಲಯ್ಯ

ಭಾನುವಾರ ಜನತಾ ಕರ್ಪ್ಯೂ ಕಾರಣದಿಂದಾಗಿ ಎಲ್ಲಾ ಅಂಗಡಿಗಳು ಮುಚ್ಚುವ ಕಾರಣ ಬಡ ಜನರಿಗೆ ಆಹಾರದ ಕೊರತೆಯಾಗದಂತೆ ಸೋಮವಾರ ಹಾಗೂ ಮಂಗಳವಾರ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ ಪಡಿತರ ಕೇಂದ್ರಗಳು ಕಡ್ಡಾಯವಾಗಿ ತೆರೆಯಲಿವೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಗೋಪಾಲಯ್ಯ ಹೇಳಿದ್ದಾರೆ.
Published on

ಬೆಂಗಳೂರು: ಭಾನುವಾರ ಜನತಾ ಕರ್ಪ್ಯೂ ಕಾರಣದಿಂದಾಗಿ ಎಲ್ಲಾ ಅಂಗಡಿಗಳು ಮುಚ್ಚುವ ಕಾರಣ ಬಡ ಜನರಿಗೆ ಆಹಾರದ ಕೊರತೆಯಾಗದಂತೆ ಸೋಮವಾರ ಹಾಗೂ ಮಂಗಳವಾರ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ ಪಡಿತರ ಕೇಂದ್ರಗಳು ಕಡ್ಡಾಯವಾಗಿ ತೆರೆಯಲಿವೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಗೋಪಾಲಯ್ಯ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಪ್ರತಿ ತಿಂಗಳ ಪಡಿತರ ವಿತರಣೆ ಬದಲಿಗೆ ಎರಡು ತಿಂಗಳ ಪಡಿತರ ನೀಡಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ಏಪ್ರಿಲ್ ಮೊದಲ ವಾರದಲ್ಲಿ ವಿತರಣೆ ಮಾಡಲಾಗುವುದು ಎಂದರು. ಬಿಪಿಎಲ್ ಕಾರ್ಡ್ ದಾರರಿಗೆ 10 ಕೆ ಜಿ ಅಕ್ಕಿ ಮತ್ತು 4 ಕೆಜಿ ಗೋಧಿ, ಅಂತ್ಯೋದಯ ಕಾರ್ಡ್ ದಾರರಿಗೂ ನಿಗದಿಯಂತೆ ಅಗತ್ಯ ಪ್ರಮಾಣದಲ್ಲಿ ಅಕ್ಕಿ ವಿತರಣೆ ಮಾಡಲಾಗುವುದು. ಕೊರೋನಾದಿಂದ ಬಾಧಿತವಾಗಿರುವ ಕಲ್ಬುರ್ಗಿ ಜಿಲ್ಲೆಯಲ್ಲಿ ಯಾವ ತೊಂದರೆಯೂ ಆಗದಂತೆ ಕ್ರಮ ವಹಿಸಲಾಗುತ್ತಿದೆ.

ಎಪಿಎಂಸಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಗೋಪಾಲಯ್ಯ ಹೇಳಿದರು. ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಜನತೆ ಮನೆಯಿಂದ ಹೊರಬಾರದೆ ಸುರಕ್ಷತೆಗೆ ಒತ್ತು ಕೊಡಬೇಕು. ಕನಿಷ್ಟಪಕ್ಷ ಒಂದು ವಾರಕ್ಕಾಗುವಷ್ಟು ಆಹಾರ ಸಾಮಾಗ್ರಿಗಳನ್ನು ಜನತೆ ಮುಂಚಿತವಾಗಿಯೇ ಖರೀದಿಸಿಕೊಟ್ಟುಕೊಳ್ಳುವುದು ಸೂಕ್ತ. ಅನಗತ್ಯವಾಗಿ ಮನೆಯಿಂದ ಆಚೆ ಬಾರದೆ ಕೊರೋನ ಸೋಂಕು ನಿಯಂತ್ರಣಕ್ಕಾಗಿ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಮನವಿ ಮಾಡಿದರು. ಇದಕ್ಕೂ ಮುನ್ನ ನಗರದ ಶ್ರೀ ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್ ಹಾಗೂ ನಿಸರ್ಗ ಫೌಂಡೇಶನ್ ಸಹಭಾಗಿತ್ವದಲ್ಲಿ ಪ್ರಧಾನಿ ಕರೆಕೊಟ್ಟಿರುವ ಜನತಾ ಕಫ್ರ್ಯೂ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಸಚಿವ ಗೋಪಾಲಯ್ಯ, ಕೊರೋನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಸಾರ್ವಜನಿಕರು ಸೋಂಕು ಹರಡದಂತೆ ಸ್ವಯಂಪ್ರೇರಿತರಾಗಿ ಮನೆಯಲ್ಲೇ ಉಳಿಯಬೇಕು.

ನಿಮ್ಮ ಕುಟುಂಬದ ಸದಸ್ಯರನ್ನು ಕೆಲ ದಿನಗಳ ಮಟ್ಟಿಗೆ ಮನೆಯಲ್ಲೇ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ ಎರಡು ತಿಂಗಳಗಾಗುವಷ್ಟು ಆಹಾರಧಾನ್ಯಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಜನರು ಕೂಡ ಸಾಧ್ಯವಾದಷ್ಟು ದಿನಸಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು. ದೇವಾಲಯಗಳಿಗೂ ಹೆಚ್ಚಿನ ಜನ ಹೋಗಬಾರದು. ಕೆಲವು ದಿನಗಳವರೆಗೆ ಮಠಮಂದಿರಗಳಿಂದ ದೂರ ಉಳಿಯಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಸೋಂಕು ಹಬ್ಬುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಎಪಿಎಂಸಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿ ಇನ್ನು ಹೆಚ್ಚಿನ ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಪ್ರತಿನಿತ್ಯ ಸಾವಿರಾರು ವಾಹನಗಳು ಬರುತ್ತವೆ. ಜೊತೆಗೆ ಅಷ್ಟೇ ಪ್ರಮಾಣದ ಸಾರ್ವಜನಿಕರು ಸಹ ಆಗಮಿಸುತ್ತಾರೆ. ಒಬ್ಬರಿಂದ ಸೋಂಕು ಹಬ್ಬುವ ಸಾಧ್ಯತೆ ಇರುವುದರಿಂದ ಇನ್ನೂ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಪ್ರತಿಯೊಂದು ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು. ಶಂಕಿತ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಬೇಕು. ಯಾರಿಗಾದರೂ ಕೆಮ್ಮು, ಶೀತ, ನೆಗಡಿ ಕಂಡುಬಂದರೆ ತಕ್ಷಣವೇ ತಪಾಸಣೆಗೊಳಪಡಿಸಬೇಕೆಂದು ಗೋಪಾಲಯ್ಯ ಹೇಳಿದರು. ಇಲ್ಲಿನ ಶೌಚಾಲಯಗಳು, ಕುಡಿಯುವ ನೀರು, ಹೋಟೆಲ್ಗಳು ಇನ್ನು ಹೆಚ್ಚಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಮುಂದಿನ ಆದೇಶದವರೆಗೂ ಯಥಾಸ್ಥಿತಿ ಮುಂದುವರೆಯಬೇಕು. ಯಾವುದೇ ರೀತಿಯ ಅವಘಡಗಳು ಸಂಭವಿಸಿದರೆ ಅಧಿಕಾರಿಗಳನ್ನೇ ಹೊಣೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇನ್ನು ಎಪಿಎಂಸಿಯಲ್ಲಿ ಕೈಗೊಂಡಿರುವ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದ ಕಾರ್ಯದರ್ಶಿ ಅನುಕುಮಾರಿ ಅವರು ಕಳೆದ ಒಂದು ವಾರದಿಂದ ಕೊರೋನಾ ಸೋಂಕು ಕುರಿತಂತೆ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದೇವೆ. ಜನರಿಗೆ ಮನವರಿಕೆಯಾಗಲು ಕರಪತ್ರಗಳ ವಿತರಣೆ, ಸೋಂಕು ಹಬ್ಬದಂತೆ ಕೆಲವು ಮುಂಜಾಗ್ರತಾ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com