ಲಾಲ್ ಬಾಗ್ ಮತ್ತು ಗಾಂಧಿ ಬಜಾರು ನನ್ನ ಶ್ವಾಸಕೋಶದ ಎರಡು ಭಾಗಗಳಿದ್ದಂತೆ: 'ನಿತ್ಯೋತ್ಸವ ಕವಿ'ಯ ಬೆಂಗಳೂರು ಪ್ರೀತಿ!

ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹಮದ್ ಇಹಲೋಕ ತ್ಯಜಿಸಿದ್ದಾರೆ. ಕೆಲ ದಿನಗಳ ಹಿಂದೆ ಅಮೆರಿಕದಲ್ಲಿದ್ದ ಅವರ ಪುತ್ರ ಸಹ ನಿಧನ ಹೊಂದಿದ್ದರು. ಕಳೆದ ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ಈಡಾಗಿದ್ದರು.
ಕೆ ಎಸ್ ನಿಸಾರ್ ಅಹಮದ್  (ಸಂಗ್ರಹ ಚಿತ್ರ)
ಕೆ ಎಸ್ ನಿಸಾರ್ ಅಹಮದ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹಮದ್ ಇಹಲೋಕ ತ್ಯಜಿಸಿದ್ದಾರೆ. ಕೆಲ ದಿನಗಳ ಹಿಂದೆ ಅಮೆರಿಕದಲ್ಲಿದ್ದ ಅವರ ಪುತ್ರ ಸಹ ನಿಧನ ಹೊಂದಿದ್ದರು. ಕಳೆದ ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ಈಡಾಗಿದ್ದರು.

ಜಾತಿ, ಧರ್ಮ ಮೀರಿ, ವಿವಾದರಹಿತ ಕನ್ನಡಿಗರ ಅಚ್ಚುಮೆಚ್ಚಿನ ಕವಿ ನಿಸಾರ್ ಅಹಮದ್ . ಮುಕ್ತವಾಗಿ ಪದ್ಯಗಳನ್ನು ಬರೆದು ಕನ್ನಡ ಭಾಷೆಯಲ್ಲಿ ವಿಶಿಷ್ಠ ಸಾಹಿತ್ಯವನ್ನು ಪರಿಚಯಿಸಿದವರು. ಅವರ ನಿತ್ಯೋತ್ಸವ ಕವನವಂತೂ ಅನಧಿಕೃತವಾದ ರಾಷ್ಟ್ರಗೀತೆ. ಅದನ್ನು ಹಾಡದ, ಅದನ್ನು ಕಲಿಯದೆ ಮುಂದಿನ ತರಗತಿಗೆ ಹೋದ ಮಕ್ಕಳಿರಲಿಕ್ಕಿಲ್ಲ. ಅವರ ಕಾವ್ಯದಲ್ಲಿ ವಿಡಂಬನೆ, ತತ್ವ, ಹಾಸ್ಯಗಳು ಮಿಳಿತವಾಗಿದ್ದು ಕೊನೆಯಲ್ಲಿ ಒಂದು ಗಟ್ಟಿಯಾದ ಸಂದೇಶ ನೀಡುತ್ತದೆ. ಸಾಮಾನ್ಯ ಜನತೆಯನ್ನು ತಟ್ಟುವ ರೀತಿ ಕವನ ಬರೆಯುವುದು ನಿಸಾರ್ ಅಹಮದ್ ಹೆಗ್ಗಳಿಕೆ.

ರಾಜಕೀಯ ವ್ಯವಸ್ಥೆ, ಜನರ ಹಿಂಡುವ ಮನಸ್ಥಿತಿ ಮತ್ತು ಪ್ರಸ್ತುತ ಸಮಾಜದಲ್ಲಿ ನಡೆಯುವ ವಿದ್ಯಮಾನಗಳಿಗೆ ವಿಡಂಬನೆಯಾಗಿ ನಿಸ್ಸಾರ್ ಅವರ ಕುರಿಗಳು ಸಾರ್, ಕುರಿಗಳು ಕವನ ಬಹಳ ಜನಪ್ರಿಯ. ಕುರಿಗಳು ಸಾರ್ ಕುರಿಗಳು ಕವನವನ್ನು ಬರೆದಿದ್ದು 1960ರ ದಶಕದಲ್ಲಿ. ಮತದಾರರು ಮತ್ತು ರಾಜಕೀಯ ನಾಯಕರನ್ನು ಕುರಿ ಮಂದೆಗೆ ಹೋಲಿಸಿ ಬರೆದಿದ್ದು ಇಂದಿಗೂ ಪ್ರಸ್ತುತ. ನಿಸ್ಸಾರ್ ಅವರು ಭೂಗರ್ಭ ಶಾಸ್ತ್ರದ ಪ್ರೊಫೆಸರ್ ಆಗಿದ್ದವರು.  ಅವರು ಹೆಸರು, ಕೀರ್ತಿ ಸಂಪಾದಿಸಿದ್ದು ಕವಿ, ಮಕ್ಕಳ ಸಾಹಿತಿಯಾಗಿ, ಭಾಷಾಂತಕಾರರಾಗಿ.

ದಸರಾ ಉದ್ಘಾಟಿಸಿದ ಮೊದಲ ಮುಸ್ಲಿಂ ಸಾಹಿತಿ: 2017ನೇ ಸಾಲಿನ ನಾಡಹಬ್ಬ ದಸರಾ ಮೈಸೂರಿನಲ್ಲಿ ನಡೆದಾಗ ಅದನ್ನು ಉದ್ಘಾಟಿಸಿದ್ದು ನಿತ್ಯೋತ್ಸವ ಕವಿ ನಿಸಾರ್ ಅಹಮದ್ . ಕೋಮು ಸೌಹಾರ್ದತೆಗೆ ಇದೊಂದು ಉತ್ತಮ ವೇದಿಕೆಯಾಗಿತ್ತು. ಈ ಬಾರಿ ನವರಾತ್ರಿಗೆ ಎರಡು ಸೂಟ್ ಹೊಲಿಸಿಕೊಳ್ಳಲು ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ನನಗೆ ಒಂದು ಸದವಕಾಶವಾಯಿತು ಎಂದು ಅಂದು ನಿತ್ಯೋತ್ಸವ ಕವಿ ಹೇಳಿದ್ದರು. ಅವರು ಧರಿಸುತ್ತಿದ್ದ ಸೂಟ್ ಅಷ್ಟು ಜನಪ್ರಿಯ.

ಇವರ ಬಗ್ಗೆ ಮೆಲುಕು ಹಾಕಿದ ಮತ್ತೊಬ್ಬ ಹಿರಿಯ ಸಾಹಿತಿ ನಾ ಡಿಸೋಜ, ನೀವ್ಯಾಕೆ ಯಾವಾಗಲೂ ಸೂಟ್ ಧರಿಸುತ್ತೀರಿ ಎಂದು ನಿಸ್ಸಾರ್ ಅವರನ್ನು ಕೇಳಿದ್ದೆ. ಅದಕ್ಕವರು, ನಾನು ತುಂಬಾ ತೆಳ್ಳಗಿರುವುದರಿಂದ ನನ್ನ ದೇಹವನ್ನು ನೋಡಿ ಜನರು ಭಯಪಡುವುದು ಬೇಡ ಎಂದು ಸೂಟ್ ಧರಿಸುತ್ತೇನೆ ಎಂದು ಹಾಸ್ಯ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು.

ಸಿಎಂ ಯಡಿಯೂರಪ್ಪನವರ ಶಿವಮೊಗ್ಗಕ್ಕೂ ನಿಸ್ಸಾರ್ ಅಹ್ಮದ್ ಅವರ ಆ ಊರಿನ ಬಗ್ಗೆ ಇರುವ ವಿಶೇಷ ಪ್ರೀತಿಯನ್ನು ಸಿಎಂ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಜೆ ಸಿ ನಗರದ ಕುಡ್ಡೂಸ್ ಸಾಹೇಬ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಿಸ್ಸಾರ್ ಅಂತ್ಯಕ್ರಿಯೆ ನೆರವೇರಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಸಾಹಿತಿ ಚಂದ್ರಶೇಖರ ಕಂಬಾರ ಕವಿಯೊಂದಿಗಿನ ಒಡನಾಟವನ್ನು ನೆನಪಿಸಿಕೊಂಡು, ನನಗೆ ನಿಸ್ಸಾರ್ ಅವರು 50 ವರ್ಷಗಳಿಂದ ಪರಿಚಿತರಾಗಿದ್ದರು. ಸಾಹಿತ್ಯದ ಮೇಲೆ ಅವರ ಸೂಕ್ಷ್ಮ ಪರಿಜ್ಞಾನ ಅವರನ್ನು ವಿಶಿಷ್ಟ ಕವಿಯನ್ನಾಗಿ ಗುರುತಿಸಿತು. ಅವರೊಬ್ಬ ಉತ್ತಮ ಭಾಷಾಂತಕಾರರು ಮತ್ತು ಕವಿಯಾಗಿದ್ದರು ಎನ್ನುತ್ತಾರೆ. 

ಧರ್ಮದಲ್ಲಿ ಮುಸ್ಲಿಂ ಆದರೂ ಅವರು ಭಗವಾನ್ ಶ್ರೀ ಕೃಷ್ಣನ ಬಗ್ಗೆ ಬರೆದಿದ್ದ 'ಬೆಣ್ಣೆ ಕದ್ದ ನಮ್ಮ ಕೃಷ್ಣ' ಕವನ ಜನಪ್ರಿಯ. ರಾಮಾಯಣ, ಮಹಾಭಾರತ ಬಗ್ಗೆ ಅವರಿಗಿದ್ದ ಜ್ಞಾನ ಅಪರಿಮಿತ.

ನಿಸಾರ್ ಅಹಮದ್ ಹುಟ್ಟಿದ್ದು ಬೆಂಗಳೂರು ಹೊರವಲಯ ದೇವನಹಳ್ಳಿಯಲ್ಲಿ 1936ರ ಫೆಬ್ರವರಿ 5ರಂದು. ಹೀಗಾಗಿ ಬೆಂಗಳೂರು ಜೊತೆ ಸಹಜವಾಗಿಯೇ ಅಪಾರ ನಂಟು ಹೊಂದಿದ್ದರು. ಅವರ ಬಾಲ್ಯವನ್ನು ಬೆಂಗಳೂರಿನ ಹೃದಯ ಭಾಗವಾದ ಲಾಲ್ ಬಾಗ್, ಗಾಂಧಿಬಜಾರು ಸುತ್ತಮುತ್ತ ಆಟವಾಡುತ್ತಾ ಕಳೆದಿದ್ದರು. ಹೀಗಾಗಿ ಬೆಂಗಳೂರು ನಗರದ ಚಿತ್ರಣವನ್ನು ಮನಸ್ಸು ಗಾಂಧಿ ಬಜಾರು ಕವನ ಮೂಲಕ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.

ಲಾಲ್ ಬಾಗ್ ಮತ್ತು ಗಾಂಧಿ ಬಜಾರು ನನ್ನ ಶ್ವಾಸಕೋಶದ ಎರಡು ಭಾಗಗಳು ಎನ್ನುತ್ತಿದ್ದರಂತೆ ಕೆ ಎಸ್ ನಿಸಾರ್ ಅಹಮದ್ .

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com