'ಜನರ ಸೇವೆ ಮಾಡಬೇಕು, ಅದಕ್ಕಾಗಿ ಬರುತ್ತಿದ್ದೇನೆ': ಸಿಎಂರಿಂದ ಕರೆ ಸ್ವೀಕರಿಸಿದ್ದ ಶಿವಮೊಗ್ಗದ ನರ್ಸ್ ಮನದಾಳದ ಮಾತು
ಶಿವಮೊಗ್ಗ: ಕೊರೋನಾ ವೈರಸ್ ಸಂಕಷ್ಟದ ನಡುವೆ 9 ತಿಂಗಳ ತುಂಬು ಗರ್ಭಿಣಿ ನರ್ಸ್ ಗೆ ಕರೆ ಮಾಡಿ ಸಿಎಂ ಯಡಿಯೂರಪ್ಪ ಕೆಲಸಕ್ಕೆ ಹೋಗಿದ್ದು ಸಾಕು, ಮನೆಯಲ್ಲಿ ರೆಸ್ಟ್ ಮಾಡಿ ಎಂದು ಹೇಳಿದ್ದು ಸುದ್ದಿಯಾಗಿತ್ತು. ಅದೇ ನರ್ಸ್ ವಿಶ್ರಾಂತಿ ತೆಗೆದುಕೊಳ್ಳದೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
ಶಿವಮೊಗ್ಗದ ಗಾಜನೂರು ಗ್ರಾಮದ ರೂಪಾ ಪ್ರವೀಣ್ ರಾವ್ ತುಂಬು ಗರ್ಭಿಣಿ. ಅವರು ಶಿವಮೊಗ್ಗದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ ತೀರ್ಥಹಳ್ಳಿ ತಾಲ್ಲೂಕಿನಿಂದ ಪ್ರಯಾಣ ಮಾಡಿ ಆಸ್ಪತ್ರೆಗೆ ಬಂದು ಕೆಲಸ ಮಾಡಿ ಹೋಗುತ್ತಾರೆ.
ಸಿಎಂ ಕರೆ ಮಾಡಿ ಹೇಳಿದ್ದರೂ ಕೂಡ ಕೆಲಸಕ್ಕೆ ಏಕೆ ಬರುತ್ತೀರಿ ಎಂದು ಕೇಳಿದಾಗ, ಈ ಆಸ್ಪತ್ರೆ ಸುತ್ತಮುತ್ತ ಹಲವು ಗ್ರಾಮಗಳಿದ್ದು ನಿತ್ಯವೂ ನೂರಾರು ಜನರು ಆರೋಗ್ಯ ಸೇವೆಗೆ ಬರುತ್ತಾರೆ. ನನ್ನ ಮೇಲಾಧಿಕಾರಿಗಳು ರಜೆ ತೆಗೆದುಕೊಂಡು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಜನರ ಸೇವೆ ಮಾಡುವುದು ನನಗೆ ಖುಷಿ ಕೊಡುತ್ತಿದೆ. ಹೀಗಾಗಿ ಬರುತ್ತೇನೆ, ದಿನಕ್ಕೆ ಆರು ಗಂಟೆ ಕೆಲಸ ಮಾಡಿ ಹೋಗುತ್ತೇನೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ ಗಳಲ್ಲಿ ನರ್ಸ್ ರೂಪಾ ಪ್ರವೀಣ್ ರಾವ್ ಕೂಡ ಒಬ್ಬರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ