ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ, ಕಡ್ಡಾಯ ಕ್ವಾರಂಟೈನ್‌ ವಿರೋಧಿಸಿ ಪ್ರಯಾಣಿಕರ ಪ್ರತಿಭಟನೆ

ದೆಹಲಿಯಿಂದ ಗುರುವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರು ಕಡ್ಡಾಯ ಕ್ವಾರಂಟೈನ್ ವಿರೋಧಿಸಿ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ರೈಲು ನಿಲ್ದಾಣದಲ್ಲಿ ಪ್ರಯಾಣಿಕರು
ರೈಲು ನಿಲ್ದಾಣದಲ್ಲಿ ಪ್ರಯಾಣಿಕರು

ಬೆಂಗಳೂರು: ದೆಹಲಿಯಿಂದ ಗುರುವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರು ಕಡ್ಡಾಯ ಕ್ವಾರಂಟೈನ್ ವಿರೋಧಿಸಿ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಸುಮಾರು 51 ದಿನಗಳ ಬಳಿಕ ಲಾಕ್ ಡೌನ್ ನಲ್ಲಿ ಸಿಲುಕಿರುವ ಜನರು ತಮ್ಮ ತಮ್ಮ ಊರುಗಳಿಗೆ ತೆರಳಲು ಮಂಗಳವಾರದಿಂದ ರೈಲ್ವೆ ಇಲಾಖೆ ಸೀಮಿತ ರೈಲು ಸೇವೆ ಆರಂಭಿಸಿದ್ದು, ದೆಹಲಿಯಿಂದ ಹೊರಟ ನವದೆಹಲಿ - ಕೆಎಸ್ ಆರ್ ಬೆಂಗಳರೂ ಸೂಪರ್ ಫಾಸ್ಟ್ ರೈಲು ಇಂದು ಬೆಳಗ್ಗೆ 7.16ಕ್ಕೆ ನಗರ ರೈಲ್ವೆ ನಿಲ್ದಾಣ ತಲುಪಿದೆ.

ಮೆಜೆಸ್ಟಿಕ್ ಆಗಮಿಸಿದ ಸುಮಾರು 681 ಪ್ರಯಾಣಿಕರಿಗೆ ಹೋಟೆಲ್ ಅಥವಾ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕೆಂದು ಸೂಚಿಸಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಯಾಣಿಕರು, ತಮಗೆ ಸರ್ಕಾರ ಮೊದಲೇ ಮಾಹಿತಿ ನೀಡಿಲ್ಲ. ನಾವು ಹೋಮ್ ಕ್ವಾರಂಟೈನ್ ಗೆ ಒಳಗಾಗುತ್ತೇವೆ. ಸಾಂಸ್ಥಿಕ ಕ್ವಾರಂಟೈನ್‌ ಮಾಡುವುದಾಗಿದ್ದರೆ ನಾವು ಇಲ್ಲಿಗೆ ಬರುತ್ತಿರಲಿಲ್ಲ ಎಂದು ವಾದಿಸಿದ್ದಾರೆ.

ಈ ವೇಳೆ ಅಧಿಕಾರಿಗಳು ಮತ್ತು ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಪ್ರಯಾಣಿಕರು ಕಡ್ಡಾಯ ಕ್ವಾರಂಟೈನ್ ವಿರೋಧಿಸಿ  ಸುಮಾರು ಆರು ಗಂಟೆಗಳ ಕಾಲ ರೈಲು ನಿಲ್ದಾಣದ ವೇಟಿಂಗ್ ರೂಂನಲ್ಲಿ ಪ್ರತಿಭಟನೆ ನಡೆಸಿದರು.

ಪ್ರಯಾಣಿಕರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ನೈರುತ್ಯ ರೈಲ್ವೆ ಅಧಿಕಾರಿಗಳು, ಟಿಕೆಟ್ ಕಾಯ್ದಿರಿಸುವ ಮೊದಲು ಪ್ರಯಾಣಿಕರಿಗೆ ಆರೋಗ್ಯ ಪ್ರೋಟೋಕಾಲ್ ಪಾಲಿಸುವಂತೆ ತಿಳಿಸಿರುವುದಾಗಿ ಹೇಳಿಕೊಂಡಿದ್ದಾರೆ. ಎಸ್‌ಎಂಎಸ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಮತ್ತು ನಿಲ್ದಾಣಕ್ಕೆ ಬಂದ ನಂತರ ಅನುಸರಿಸಬೇಕಾದ ರಾಜ್ಯ ಸರ್ಕಾರದ ಪ್ರೋಟೋಕಾಲ್ ಬಗ್ಗೆ ಪ್ರಯಾಣಿಕರಿಗೆ ನೀಡಿದ ವೆಬ್‌ಸೈಟ್ ಎಚ್ಚರಿಕೆಗಳನ್ನು ಬಿಡುಗಡೆ ಮಾಡಿದೆ.

ಕ್ವಾರಂಟೈನ್ ನಿಯಮ ಪಾಲನೆ ಕಡ್ಡಾಯ: ಆರ್.ಅಶೋಕ್
ಹೊರರಾಜ್ಯದಿಂದ ರೈಲು ಮೂಲಕ ಮೆಜೆಸ್ಟಿಕ್ ಗೆ ಬಂದವರು ಕ್ವಾರಂಟೈನ್ ಗೆ ನಿರಾಕರಿಸಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಅವರು ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಾಂಸ್ಥಿಕ ಕ್ವಾರಂಟೈನ್ ಬೇಡ. ನಾವು ಮನೆಗೆ ಹೋಗ್ತೇವೆ ಅನ್ನೋದು ಸರಿಯಲ್ಲ. ನಾವು ಪ್ರತಿಭಟನೆ ಮಾಡ್ತೀವಿ ಅನ್ನುವುದು ವಿವೇಚನೆಯಲ್ಲ. ಇದರಿಂದ ಸೋಂಕಿಗೆ ರಹದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು. 

ಈಗಾಗಲೇ ರಾಜ್ಯದಲ್ಲಿ ಕೆಲವು ಕಡೆಯಿಂದ ಬಂದವರಿಂದ ಸಮಸ್ಯೆಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕ್ವಾರಂಟೈನ್ ಕಡ್ಡಾಯ ಪಾಲನೆ ಮಾಡಬೇಕು. ಅದು ಅವರಿಗೂ ಒಳ್ಳೆಯದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com