ರಾಗಿಗೆ ಗ್ಲೋಬಲ್ ಬ್ರಾಂಡಿಂಗ್, ಈರುಳ್ಳಿ, ಆಲೂಗಡ್ಡೆಗೆ ಪ್ರೋತ್ಸಾಹ ಸ್ವಾಗತಾರ್ಹ: ಸಿಎಂ ಯಡಿಯೂರಪ್ಪ

“ಆತ್ಮನಿರ್ಭರ್ ಭಾರತ್” ಪ್ಯಾಕೇಜ್ ಮೂರನೇ ಹಂತದ ಘೋಷಣೆಗಳಲ್ಲಿ ಕೃಷಿ ವಲಯದಲ್ಲಿ ರಾಗಿಗೆ ಜಾಗತಿಕ ಮನ್ನಣೆ [ಗ್ಲೋಬಲ್ ಬ್ರಾಂಡಿಂಗ್] ದೊರಕಿಸಿಕೊಡಲು ನಿರ್ಧರಿಸಿರುವುದರಿಂದ ರಾಜ್ಯದ ರಾಗಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. 
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
Updated on

ಬೆಂಗಳೂರು: “ಆತ್ಮನಿರ್ಭರ್ ಭಾರತ್” ಪ್ಯಾಕೇಜ್ ಮೂರನೇ ಹಂತದ ಘೋಷಣೆಗಳಲ್ಲಿ ಕೃಷಿ ವಲಯದಲ್ಲಿ ರಾಗಿಗೆ ಜಾಗತಿಕ ಮನ್ನಣೆ [ಗ್ಲೋಬಲ್ ಬ್ರಾಂಡಿಂಗ್] ದೊರಕಿಸಿಕೊಡಲು ನಿರ್ಧರಿಸಿರುವುದರಿಂದ ರಾಜ್ಯದ ರಾಗಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. 

ರಾಗಿ ಮತ್ತಿತರ ಬೆಳೆಗಳನ್ನು ಪ್ರೋತ್ಸಾಹಿಸುವ ಕೇಂದ್ರದ ಕ್ರಮದಿಂದಾಗಿ ಸಾವಯವ ಕೃಷಿ ಮತ್ತು ದೇಶೀ ಬೆಳೆಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದಿದ್ದಾರೆ. 

ಕೇಂದ್ರದ ಪ್ಯಾಕೇಜ್ ಕುರಿತು ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಎ.ಪಿ.ಎಂ.ಸಿ. ಕಾಯಿದೆಗೆ ತಿದ್ದುಪಡಿ ತರುವ ಕ್ರಮದಿಂದ ಹೆಚ್ಚಿನ ಲಾಭವಾಗಲಿದೆ. ರೈತರಿಗೆ ತಮ್ಮ ಉತ್ಪಾದನೆಗಳಿಗೆ ಲಾಭದಾಯಕ ಬೆಲೆ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಇಟ್ಟ ಹೆಜ್ಜೆಗೆ ಬೆಂಬಲ ಸೂಚಿಸಿದಂತಾಗಿದ್ದು, ರೈತಪರ ನೀತಿಗೆ ಮುದ್ರೆ ಒತ್ತಿದಂತಾಗಿದೆ. ಕೃಷಿ ವಲಯಕ್ಕೆ ಸಂಬಂಧಪಟ್ಟ ಕಾನೂನುಗಳನ್ನು ಸರಳೀಕರಣಗೊಳಿಸಿ ರೈತರಿಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡಲು ಉದ್ದೇಶಿಸಿದ್ದು, ಇದು ದೇಶದ ರೈತರ ಮನೋಸ್ಥೈರ್ಯ ಹೆಚ್ಚಿಸಲಿದೆ ಎಂದು ಹೇಳಿದ್ದಾರೆ. 

ಕೇಂದ್ರದ ಕ್ರಮಗಳಿಂದ ದೇಶದ ರೈತರ ಮುಖದಲ್ಲಿ ಮಂದಹಾಸ ಮೂಡಲಿದೆ. ಇದರಿಂದ ಶೇಕಡ 85 ರಷ್ಟು ಇರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ವೃದ್ಧಿಗೊಳಿಸಲು ಒಂದು ಲಕ್ಷ ಕೋಟಿ ರೂ. ಒದಗಿಸಿದ್ದು, ಇದರಿಂದ ರೈತರಿಗೆ ಅದರಲ್ಲೂ ತೋಟಗಾರಿಕ ಬೆಳೆಗಳನ್ನು ಬೆಳೆಯುವ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ಕೃಷಿಗೆ ಪೂರಕವಾದ ಮೂಲ ಸೌಕರ್ಯಗಳ ಅಭಿವೃದ್ಧಿ, ಕೃಷಿ ಮತ್ತು ವಿವಿಧ ಉಪಕಸುಬುಗಳಿಗೆ ಒತ್ತು ನೀಡಿರುವುದು ಅತ್ಯಂತ ಸಕಾಲಿಕ ನಡೆಯಾಗಿದೆ. ಇದು ರೈತರಿಗೆ ಅದರಲ್ಲೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುವವರಿಗೆ ಹೆಚ್ಚಿನ ಲಾಭ ತರಲಿದೆ ಎಂದು ಹೇಳಿದ್ದಾರೆ. 

ಒಂದು ಲಕ್ಷ ಕೋಟಿ ರೂ. ಹಣದಲ್ಲಿ ದೇಶದಲ್ಲಿ ಶೀತಲ ಘಟಕ ನಿರ್ಮಾಣ ಮಾಡುವುದರಿಂದ ಹಿಡಿದು, ಕೊಯ್ಲೋತ್ತರ ಕೆಲಸಗಳ ನಿರ್ವಹಣೆಗೆ ಸಹಕಾರಿಯಾಗಲಿದೆ. ರೈತರು ತಮ್ಮ ಉತ್ಪಾದನೆಗಳನ್ನು ಹೆಚ್ಚಿನ ಮತ್ತು ಲಾಭದಾಯಕ ಬೆಲೆಗೆ ಮಾರಾಟ ಮಾಡಬಹುದು ಎಂದಿದ್ದಾರೆ. 

ಈರುಳ್ಳಿ, ಟೊಮಾಟೋ ಆಲೂಗಡ್ಡೆ ಬೆಳೆಗಳ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಶೇ. 50 ರಷ್ಟು ಸಹಾಯಧನ ಘೋಷಿಸಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಇದಕ್ಕೆ 500 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದು, ರಾಜ್ಯದ ಈರುಳ್ಳಿ, ಟೊಮ್ಯಾಟೋ ಮತ್ತು ಆಲೂಗಡ್ಡೆ ಬೆಳೆಗಾರರಿಗೆ ಹೆಚ್ಚಿನ ಲಾಭವಾಗಲಿದೆ ಎಂದಿದ್ದಾರೆ. 

ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಹತ್ತು ಸಾವಿರ ಕೋಟಿ ರೂ ನಿಗದಿ, ಮೀನುಗಾರಿಕೆ ಉತ್ಪಾದನೆಗೆ ಇಪ್ಪತ್ತು ಸಾವಿರ ಕೋಟಿ ಮೀಸಲಿಟ್ಟಿರುವುದು ದೇಶದ 70 ಲಕ್ಷ ಅದರಲ್ಲೂ ನಮ್ಮ ಕರಾವಳಿ ಪ್ರದೇಶದ ಮೀನುಗಾರರಿಗೆ ತಮ್ಮ ಉದ್ಯಮವನ್ನು ವೃದ್ಧಿಗೊಳಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. 

ಜೇನು ಸಾಕಾಣಿಕೆಗೆ ರೂ.500 ಕೋಟಿ, ದನಗಳ ಲಸಿಕೆಗೆ 13327 ಕೋಟಿ ರೂ., ಹೈನುಗಾರಿಕೆಗೆ 15,000 ಕೋಟಿ ರೂ. ಕೂಡ ರೈತರ ಮತ್ತು ಗ್ರಾಮೀಣ ಪ್ರದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಪ್ರೇರಕವಾಗಲಿದೆ ಎಂದು ಸಿಎಂ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com